ADVERTISEMENT

‘ಲೋಯ’ಗೆ ಮರುಜೀವ

ಹೊಸ ಪೀಠದಲ್ಲಿ ನ್ಯಾಯಮೂರ್ತಿ ಮಿಶ್ರಾ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
‘ಲೋಯ’ಗೆ ಮರುಜೀವ
‘ಲೋಯ’ಗೆ ಮರುಜೀವ   

ನವದೆಹಲಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಹೊಸ ತ್ರಿಸದಸ್ಯ ಪೀಠವು ಸೋಮವಾರದಿಂದ (ಜ. 22ರಂದು) ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್‌.ಲೋಯ ಶಂಕಾಸ್ಪದ ಸಾವಿನ ಪ್ರಕರಣದ ವಿಚಾರಣೆ ಆರಂಭಿಸಲಿದೆ.

ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಕೂಡ ಈ ಪೀಠದಲ್ಲಿದ್ದಾರೆ.

ಈ ಮೊದಲು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರು ಹೊಸದಾಗಿ ರಚನೆಯಾಗಿರುವ ಪೀಠದಲ್ಲಿ ಇಲ್ಲ.

ADVERTISEMENT

ಲೋಯ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ತೆಹ್ಸೀನ್‌ ಪೂನಾವಾಲ ಮತ್ತು ಮಹಾರಾಷ್ಟ್ರದ ಪತ್ರಕರ್ತ ಬಂಡೂರಾಜ್‌ ಸಂಭಾಜಿ ಪ್ರತ್ಯೇಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ, ವಿಚಾರಣೆಯನ್ನು ಸೋಮವಾರ ನಿಗದಿಪಡಿಸಿದೆ. ಜತೆಗೆ ರೋಸ್ಟರ್‌ ಪದ್ಧತಿಗೆ ಅನುಗುಣವಾಗಿ ಸೂಕ್ತ ಪೀಠಕ್ಕೆ ವಿಚಾರಣೆ ವಹಿಸುವಂತೆ ಸೂಚಿಸಿತ್ತು.

ಸುಪ್ರೀಂಕೋರ್ಟ್ ಶನಿವಾರ ಬಿಡುಗಡೆ ಮಾಡಿದ ಪ್ರಕರಣಗಳ ಹಂಚಿಕೆ ಪಟ್ಟಿಯ ಅನ್ವಯ ಈ ಪ್ರಕರಣವು ಮಿಶ್ರಾ ನೇತೃತ್ವದ ಹೊಸ ಪೀಠದ ಎದುರು ವಿಚಾರಣೆಗೆ ಬರಲಿದೆ.

ಕಿರಿಯ ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಪೀಠಕ್ಕೆ ಗಂಭೀರವಾದ ಲೋಯ ಪ್ರಕರಣ ವಿಚಾರಣೆಗೆ ನೀಡಿದ್ದು ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಬೆಳವಣಿಗೆಯ ನಂತರ ಅರುಣ್‌ ಮಿಶ್ರಾ ಮತ್ತು ಮೋಹನ್‌ ಎಂ. ಶಾಂತನಗೌಡರ ಅವರ ಪೀಠ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗೆ ವಹಿಸಿತ್ತು.

ಏನೇನಾಗಿತ್ತು...

*ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣವನ್ನು ಲೋಯ ವಿಚಾರಣೆ ನಡೆಸುತ್ತಿದ್ದರು

*ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಈಗ ಖುಲಾಸೆಯಾಗಿದ್ದಾರೆ

*2014ರ ಡಿಸೆಂಬರ್‌ನಲ್ಲಿ ಸಹೋದ್ಯೋಗಿಯ ಮಗಳ ಮದುವೆಗೆಂದು ನಾಗಪುರಕ್ಕೆ ಹೋಗಿದ್ದಾಗ ಲೋಯ ಸಾವು.

*ಸಾವಿನ ಬಗ್ಗೆ ಅವರ ಕುಟುಂಬ ವ್ಯಕ್ತಪಡಿಸಿದ ಶಂಕೆ ಆಧರಿಸಿ ‘ದಿ ಕ್ಯಾರವಾನ್’ ಸೆ.11ರಂದು ವಿಸ್ತೃತ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.