ADVERTISEMENT

ಮದುವೆಯಾದರೆ ಮಹಿಳೆಯ ಜಾತಿ ಬದಲಾಗದು

ಹುಟ್ಟಿನಿಂದಲೇ ಜಾತಿ ನಿರ್ಣಯ: ‘ಸುಪ್ರೀಂ’ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
ಮದುವೆಯಾದರೆ ಮಹಿಳೆಯ ಜಾತಿ ಬದಲಾಗದು
ಮದುವೆಯಾದರೆ ಮಹಿಳೆಯ ಜಾತಿ ಬದಲಾಗದು   

ನವದೆಹಲಿ: ಪರಿಶಿಷ್ಟ ಜಾತಿಗೆ ಸೇರಿದ ಪುರುಷನನ್ನು ಮದುವೆಯಾಗುವ ಮೂಲಕ ಮಹಿಳೆಯೊಬ್ಬಳು ತನ್ನ ಜಾತಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ಜಾತಿಯನ್ನು ಹುಟ್ಟಿನಿಂದಲೇ ನಿರ್ಧರಿಸಲಾಗುತ್ತದೆ. ಇದರಲ್ಲಿ ಯಾವುದೇ ಚರ್ಚೆಗೆ ಆಸ್ಪದವಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ಮತ್ತು ಮೋಹನ ಎಂ. ಶಾಂತಗೌಡರ ಅವರಿದ್ದ ನ್ಯಾಯಪೀಠ ಪ್ರತಿಪಾದಿಸಿದೆ.

‘ಜಾಟವ್‌’ ಸಮುದಾಯಕ್ಕೆ ಸೇರಿದ ಡಾ. ವೀರ್‌ ಸಿಂಗ್‌ ಅವರನ್ನು ಮದುವೆಯಾಗಿದ್ದ ಸುನಿತಾ ಸಿಂಗ್‌ ಎಂಬುವವರಿಗೆ ಸರ್ಕಾರ ನೀಡಿದ್ದ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿದ್ದ ಅಲಹಾಬಾದ್‌ ಹೈಕೋರ್ಟ್‌ನ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ನ್ಯಾಯಪೀಠ ನಿರಾಕರಿಸಿದೆ. ಹೈಕೋರ್ಟ್‌ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ADVERTISEMENT

‘ಮೇಲ್ಮನವಿ ಸಲ್ಲಿಸಿದವರು ‘ಅಗರ್‌ವಾಲ್‌’ ಸಮುದಾಯಕ್ಕೆ ಸೇರಿದವರು ಎಂಬುದು ಸ್ಪಷ್ಟವಾಗಿದೆ. ಅದು ಸಾಮಾನ್ಯ ವರ್ಗವೇ ಹೊರತು ಪರಿಶಿಷ್ಟ ಜಾತಿ ವರ್ಗ ಅಲ್ಲ. ಅವರ ಪತಿ ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಅರ್ಜಿದಾರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಬಾರದಿತ್ತು’ ಎಂದು ಶಾಂತನಗೌಡರ ತೀರ್ಪಿನಲ್ಲಿ ಬರೆದಿದ್ದಾರೆ.

ಆದರೆ, ಕೇಂದ್ರೀಯ ವಿದ್ಯಾಲಯದಲ್ಲಿ 21 ವರ್ಷಗಳ ಕಾಲ ಶಿಕ್ಷಕಿ ಮತ್ತು ಉಪ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿರುವ ಸುನಿತಾ ಸಿಂಗ್‌ ಬಗ್ಗೆ ನ್ಯಾಯಪೀಠ ಮೃದು ನಿಲುವು ತಾಳಿದೆ.

ವಾಸ್ತವವಾಗಿ ಸುನಿತಾ ಸಿಂಗ್‌ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಆದರೆ, ನ್ಯಾಯಪೀಠವು ಸಂವಿಧಾನದ 142ನೇ ವಿಧಿ ಅಡಿಯಲ್ಲಿ ತನಗಿರುವ ಅಧಿಕಾರವನ್ನು ಬಳಸಿಕೊಂಡು ಸೇವೆಯಿಂದ ವಜಾ ಮಾಡಿದ್ದನ್ನು ಕಡ್ಡಾಯ ನಿವೃತ್ತಿಯಾಗಿ ಪರಿವರ್ತಿಸಿದೆ.

‘ಜಾತಿ ಪ್ರಮಾಣಪತ್ರ ಪಡೆಯಲು ಅರ್ಜಿದಾರರು ಮೋಸ ಮಾಡಿಲ್ಲ; ಸರ್ಕಾರಿ ಸಂಸ್ಥೆಗಳಿಗೆ ತಪ್ಪು ವಿವರಣೆಯನ್ನೂ ನೀಡಿಲ್ಲ. ಎಲ್ಲ ಶೈಕ್ಷಣಿಕ ದಾಖಲೆಗಳಲ್ಲಿ ಅವರ ಜಾತಿ ಅಗರ್‌ವಾಲ್‌ ಎಂದೇ ಇದೆ. ಸೇವಾವಧಿಯಲ್ಲಿ ಅವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಕೂಡ ಇರಲಿಲ್ಲ’ ಎಂದು ನ್ಯಾಯಪೀಠ ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.