ADVERTISEMENT

ಕೇಂದ್ರದ ಟೀಕೆ ಕೈಬಿಟ್ಟ ಕೇರಳ ರಾಜ್ಯಪಾಲ!

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:30 IST
Last Updated 22 ಜನವರಿ 2018, 19:30 IST
ಸದಾಶಿವಂ
ಸದಾಶಿವಂ   

ತಿರುವನಂತಪುರ: ಕೇರಳ ವಿಧಾನಸಭೆಯ ಬಜೆಟ್‌ ಅಧಿವೇಶನದ ಮೊದಲ ದಿನ ಸೋಮವಾರ ಸದನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಪಿ.ಸದಾಶಿವಂ, ಲಿಖಿತ ಭಾಷಣದಲ್ಲಿದ್ದ ಕೇಂದ್ರ ಸರ್ಕಾರದ  ಟೀಕೆಯ ಕೆಲವು ಭಾಗಗಳನ್ನು ಕೈಬಿಟ್ಟಿದ್ದಾರೆ.

ಸರ್ಕಾರ ಈ ಭಾಷಣವನ್ನು ಸಿದ್ಧಪಡಿಸುತ್ತದೆ. ಶಿಷ್ಟಾಚಾರದ ಪ್ರಕಾರ ರಾಜ್ಯಪಾಲರು ಅದನ್ನು ಸದನದಲ್ಲಿ ಓದುತ್ತಾರೆ.‌ ಕೇರಳ ಸರ್ಕಾರ ಈ ಬಾರಿ 44 ಪುಟಗಳ ಭಾಷಣ ಸಿದ್ಧಪಡಿಸಿತ್ತು.

ರಾಜ್ಯ ಸರ್ಕಾರದ ಗಮನಕ್ಕೆ ತರದೇ ಜಿಲ್ಲಾಡಳಿತಗಳು ಅಥವಾ ಸ್ಥಳೀಯ ಸಂಸ್ಥೆಗಳೊಂದಿಗೆ ನೇರವಾಗಿ ವ್ಯವಹರಿಸಿ ಒಕ್ಕೂಟ ವ್ಯವಸ್ಥೆಯಲ್ಲಿನ ಸಹಕಾರ ಸಂಪ್ರದಾಯ ಮುರಿಯುತ್ತಿರುವ ಕೇಂದ್ರ ಸರ್ಕಾರದ ಪ್ರವೃತ್ತಿ ಬಗ್ಗೆ ರಾಜ್ಯ ಸರ್ಕಾರದ ಕಳವಳವನ್ನು ಭಾಷಣದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿತ್ತು. ಆದರೆ, ಸದಾಶಿವಂ ತಮ್ಮ ಭಾಷಣದ ಸಂದರ್ಭದಲ್ಲಿ ಈ ಭಾಗವನ್ನು ಓದಲೇ ಇಲ್ಲ.

ADVERTISEMENT

ಮತ್ತೊಂದು ಕಡೆ, ‘ಕೆಲವು ಕೋಮುವಾದಿ ಸಂಘಟನೆಗಳು ಒಳಸಂಚು ನಡೆಸಿದ್ದರೂ, ರಾಜ್ಯದಲ್ಲಿ ಕೋಮು ಗಲಭೆಗಳು ನಡೆಯುತ್ತಿಲ್ಲ’ ಎಂದು ಬರೆಯಲಾಗಿತ್ತು. ಈ ಸಾಲುಗಳನ್ನು ಓದುವಾಗ ರಾಜ್ಯಪಾಲರು ‘ಒಳಸಂಚು’ ಎಂಬ ಪದವನ್ನು ಬಿಟ್ಟಿದ್ದಾರೆ.

ಆದರೆ, ಕೇಂದ್ರದ ನೋಟುರದ್ದತಿ ಮತ್ತು ಜಿಎಸ್‌ಟಿ ವ್ಯವಸ್ಥೆಗೆ ಸಂಬಂಧಿಸಿದ ಟೀಕೆಗಳನ್ನು ಸದಾಶಿವಂ ಓದಿದ್ದಾರೆ.

‘15ನೇ ಹಣಕಾಸು ಆಯೋಗದ ನಿಯಮಾವಳಿಗಳು ಕೂಡ ರಾಜ್ಯದ ಹಣಕಾಸು ಸ್ವಾಯತ್ತತೆಗೆ ಧಕ್ಕೆ ತರುತ್ತವೆ. ನೋಟು ರದ್ದತಿ ಮತ್ತು ಜಿಎಸ್‌ಟಿಯನ್ನು ಸರಿಯಾಗಿ ಅನುಷ್ಠಾನ ಮಾಡದೇ ಇದ್ದುದರಿಂದ ಅರ್ಥವ್ಯವಸ್ಥೆಯ ಪ್ರಗತಿಯನ್ನು ಕುಂಠಿತಗೊಳಿಸಿದೆ ಮತ್ತು ನಿರುದ್ಯೋಗ ಪ್ರಮಾಣವನ್ನು ಹೆಚ್ಚಿಸಿದೆ’ ಎಂದು ಅವರು ಹೇಳಿದ್ದಾರೆ.

ಕೇರಳದ ಜಾತ್ಯತೀತ ಸಂಪ್ರದಾಯದ ವಿರುದ್ಧ ದಾಳಿ ನಡೆಸುವ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ನಿಂದಿಸುವ ಮೂಲಕ ಕಳೆದ ವರ್ಷ ರಾಜ್ಯದ ವಿರುದ್ಧ ನಡೆಸಲಾದ ವ್ಯವಸ್ಥಿತ ಅಪಪ್ರಚಾರವನ್ನೂ ಅವರು ಟೀಕಿಸಿದ್ದಾರೆ.

‘ದೇಶದಲ್ಲೇ ಅತ್ಯುತ್ತಮ ಕಾನೂನು ಸುವ್ಯವಸ್ಥೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದ್ದರೂ, ಕೆಲವು ಕೋಮುವಾದಿ ಸಂಘಟನೆಗಳು ಕೆಲವು ವಿಷಯಗಳನ್ನು ಮುಂದಿಟ್ಟುಕೊಂಡು ದೇಶದಾದ್ಯಂತ ಒಂದು ತಿಂಗಳ ಕಾಲ ಅಪಪ್ರಚಾರ ನಡೆಸಿದವು. ಆದರೆ, ಎಲ್ಲ ಕೇರಳಿಗರು ಒಟ್ಟಾಗಿ ಹ್ಯಾಶ್‌ಟ್ಯಾಗ್‌ಗಳ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದರು’ ಎಂದಿದ್ದಾರೆ.

‘ಕಳೆದ ವರ್ಷ ಕೇರಳದ ವಿರುದ್ಧ ಅಪಮಾನಕರವಾದ ದಾಳಿ ನಡೆಸಲಾಯಿತು. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಪ್ರಸ್ತಾಪಿಸಿ ತೆಗಳುವ ಪ್ರಯತ್ನವೂ ನಡೆಯಿತು. ಆದರೆ ಜನ ನಮ್ಮ ಸಂಪ್ರದಾಯ ಮತ್ತು ಸಾಧನೆ ಎತ್ತಿ ಹಿಡಿದರು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.