ADVERTISEMENT

ಅತ್ಯಾಚಾರ ಆರೋಪ: ನಟ ಮಿಥುನ್ ಪತ್ನಿ, ಮಗನ ವಿರುದ್ಧ ದೂರು

ಪಿಟಿಐ
Published 3 ಜುಲೈ 2018, 20:15 IST
Last Updated 3 ಜುಲೈ 2018, 20:15 IST

ನವದೆಹಲಿ: ಅತ್ಯಾಚಾರ ಹಾಗೂ ವಂಚನೆ ಆರೋಪ ಮಾಡಿ ಮಹಿಳೆಯೊಬ್ಬರು ನೀಡಿದ್ದ ದೂರು ಆಧರಿಸಿ, ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ಪತ್ನಿ ಹಾಗೂ ಮಗನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೆಹಲಿ ಕೋರ್ಟ್‌ ಆದೇಶ ನೀಡಿದೆ.

‘ಮಿಥುನ್ ಅವರ ಪ‍ತ್ನಿ ಯೋಗಿತಾ ಬಾಲಿ ಮತ್ತು ಪುತ್ರ ಮಹಾಕ್ಷಯ್ ವಿರುದ್ಧ ಎಫ್ಐಆರ್ ದಾಖಲಿಸಲು ಮೇಲ್ನೋಟಕ್ಕೆ ಸಾಕಷ್ಟು ಆಧಾರಗಳಿವೆ. ಕಾನೂನಿಗೆ ಅನುಗುಣವಾಗಿ ತನಿಖೆ ಮುಂದುವರಿಯಲಿ’ ಎಂದು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಏಕ್ತಾ ಗೌಬ ಹೇಳಿದ್ದಾರೆ.

‘ಮದುವೆಯಾಗುವುದಾಗಿ ನಂಬಿಸಿ ನಾಲ್ಕು ವರ್ಷಗಳಿಂದ ನನ್ನೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದ ಮಹಾಕ್ಷಯ್, ಈಗ ಮೋಸ ಮಾಡಿದ್ದಾರೆ. ಗರ್ಭಿಣಿ ಎಂದು ತಿಳಿದ ನಂತರ ನನಗೆ ಯಾವುದೋ ಔಷಧ ನೀಡಿ ಗರ್ಭಪಾತವಾಗುವಂತೆ ಮಾಡಿದರು. ಈ ಸಂಬಂಧ ಮುಂದುವರಿಸಿದರೆ ನನ್ನನ್ನು ಕೊಲ್ಲುವುದಾಗಿ ಅವರ ತಾಯಿ ಯೋಗಿತಾ ಬಾಲಿ ಬೆದರಿಕೆ ಒಡ್ಡಿದರು. ಹೀಗಾಗಿ, ಮುಂಬೈನಿಂದ ದೆಹಲಿಗೆ ನಾನು ವಾಸಸ್ಥಳ ಬದಲಿಸಬೇಕಾಯಿತು’ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

ಖ್ಯಾತ ನಟನ ಪತ್ನಿ ಮತ್ತು ಪುತ್ರ ಆಗಿರುವುದರಿಂದ ಅವರು ಹೊಂದಿರುವ ಉನ್ನತ ಸ್ಥಾನಮಾನವನ್ನು ಗಮನದಲ್ಲಿ ಇರಿಸಿಕೊಂಡು ಅಗತ್ಯ ತನಿಖೆ ನಡೆಸಬೇಕು ಎಂದು ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.