ನವದೆಹಲಿ/ಕೋಲ್ಕತ್ತ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯ ಎರಡು ಸ್ಥಳಗಳಲ್ಲಿ ಶುಕ್ರವಾರ ಶೋಧ ನಡೆಸಿದ ಸಿಬಿಐ, ಪೊಲೀಸ್ ಸೇವಾ ರಿವಾಲ್ವರ್, ವಿದೇಶಿ ನಿರ್ಮಿತ ಬಂದೂಕುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
ಈ ಶಸ್ತ್ರಾಸ್ತ್ರಗಳನ್ನು ಟಿಎಂಸಿಯಿಂದ ಅಮಾನತುಗೊಂಡಿರುವ ನಾಯಕ ಶಾಜಹಾನ್ ಶೇಖ್ ಅವರ ಸಹಚರನಿಗೆ ಸಂಬಂಧಿಸಿದ ಸ್ಥಳಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತಂಡದ ಮೇಲೆ ನಡೆದ ದಾಳಿಗೆ ಸಂಬಂಧಿದಂತೆ ಸಿಬಿಐ ಈ ಶೋಧ ಕೈಗೊಂಡಿತ್ತು. ಈ ಪ್ರಕರಣದಲ್ಲಿ ಫೆಬ್ರುವರಿ 29ರಂದು ಶೇಖ್ ಅವರನ್ನು ಪಶ್ಚಿಮ ಬಂಗಾಳದ ಪೊಲೀಸರು ಬಂಧಿಸಿದ್ದರು.
ಶೋಧದ ವೇಳೆ ಸಿಬಿಐ, ಬಾಂಬ್ ಪತ್ತೆ ದಳ, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ಕೇಂದ್ರ ಅರೆಸೇನಾ ಪಡೆಗಳು, ಪಶ್ಚಿಮ ಬಂಗಾಳ ಪೊಲೀಸರ ತಂಡಗಳು ಪಾಲ್ಗೊಂಡಿದ್ದವು.
ಖಚಿತ ಮಾಹಿತಿ ಮೇರೆಗೆ ದಾಳಿ:
‘ಇ.ಡಿ ತಂಡವು ಕಳೆದುಕೊಂಡಿದ್ದ ಕೆಲ ವಸ್ತುಗಳು ಮತ್ತು ಇತರ ಪ್ರಮುಖ ವಸ್ತುಗಳನ್ನು ಸಂದೇಶ್‌ಖಾಲಿಯಲ್ಲಿ ಶೇಖ್ ಅವರ ಸಹಚರರ ನಿವಾಸದಲ್ಲಿ ಬಚ್ಚಿಡಲಾಗಿದೆ ಎಂಬ ಖಚಿತ ಮಾಹಿತಿ ದೊರೆತಿತ್ತು. ಅದರಂತೆ ಸಿಬಿಐ ತಂಡವು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಜತೆಗೂಡಿ ಶೋಧ ಕೈಗೊಂಡಿತು’ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ.
ಈ ವೇಳೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಳ್ಳಲಾಯಿತು. ಇವುಗಳಲ್ಲಿ ವಿದೇಶಿ ನಿರ್ಮಿತ ಬಂದೂಕುಗಳೂ ಇದ್ದವು ಎಂದು ಅದು ಹೇಳಿದೆ.
ಶ್ಚಿಮ ಬಂಗಾಳದ ಟಿಎಂಸಿ ಸರ್ಕಾರವು ಭಯೋತ್ಪಾದಕರು ಮತ್ತು ಅತ್ಯಾಚಾರಿಗಳನ್ನು ರಕ್ಷಿಸುತ್ತಿದ್ದು ರಾಜ್ಯವು ಅರಾಜಕತೆಯ ಅಂಚಿನಲ್ಲಿದೆ.ಪ್ರೇಮ್ ಶುಲ್ಕಾ, ಬಿಜೆಪಿಯ ರಾಷ್ಟ್ರೀಯ ವಕ್ತಾರ
ಶಾಜಹಾನ್‌ಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳೂ ಈ ವೇಳೆ ಪತ್ತೆಯಾಗಿವೆ. ದೇಶಿ ನಿರ್ಮಿತ ಬಾಂಬ್‌ಗಳೆಂದು ಶಂಕಿಸಲಾದ ಕೆಲ ವಸ್ತುಗಳನ್ನೂ ವಶಕ್ಕೆ ಪಡೆಯಲಾಗಿದ್ದು, ಅವುಗಳನ್ನು ಎನ್‌ಎಸ್‌ಜಿ ತಂಡಗಳು ಪರಿಶೀಲಿಸುತ್ತಿವೆ ಎಂದು ಸಿಬಿಐ ಮಾಹಿತಿ ನೀಡಿದೆ.
ಮನೆಯ ಮಾಲೀಕನನ್ನು ಅಬು ತಾಲೇಜ್ ಮೊಲ್ಲಾಹ್ ಎಂದು ಗುರುತಿಸಲಾಗಿದೆ. ಅವರು ಶೇಖ್ ಅವರ ಸಂಬಂಧಿ.
ಟಿಎಂಸಿ– ಬಿಜೆಪಿ ನಾಯಕರ ವಾಕ್ಸಮರ
ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ವಶಕ್ಕೆ ಸಂಬಂಧಿಸಿದಂತೆ ಟಿಎಂಸಿ ಮತ್ತು ಬಿಜೆಪಿ ನಡುವೆ ವಾಕ್ಸಮರ ನಡೆದಿದೆ. ಲೋಕಸಭೆ ಚುನಾವಣೆ ವೇಳೆಯಲ್ಲಿ ಬಿಜೆಪಿಯು ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸಲು ಕುತಂತ್ರ ನಡೆಸುತ್ತಿದೆ ಎಂದು ಟಿಎಂಸಿ ದೂರಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ‘ಟಿಎಂಸಿಯು ದೇಶ ವಿರೋಧಿ ಶಕ್ತಿಗಳ ಜತೆ ಒಪ್ಪಂದ ಮಾಡಿಕೊಂಡಿದೆ’ ಎಂದು ಆರೋಪಿಸಿದೆ. ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್ ಮಾಳವೀಯ ಪರಸ್ಪರ ಟೀಕೆ ಮಾಡಿದ್ದಾರೆ.
ರಾಜ್ಯ ಪೊಲೀಸರಿಗೆ ಮಾಹಿತಿ ನೀಡದೆ ಸಿಬಿಐ ತಂಡಗಳು ನಡೆಸಿರುವ ಶೋಧದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ.ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ
ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು
ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದ ವೇಳೆ ಸಿಬಿಐ ದುರುದ್ದೇಶಪೂರಿತವಾಗಿ ಅನೈತಿಕವಾಗಿ ದಾಳಿ ನಡೆಸಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ (ಸಿಇಒ) ದೂರು ನಿಡಿದೆ.
ಬಿಜೆಪಿ ಮುಖಂಡರ ಸ್ನೇಹಿತನ ಮನೆಯಲ್ಲಿ ಬಾಂಬ್ ಸ್ಫೋಟ: ಟಿಎಂಸಿ ಆರೋಪ
ಪಶ್ಚಿಮ ಬಂಗಾಳದ ಬಸೀರ್ಹಾಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರ ಸಂಬಂಧಿಕರೊಬ್ಬರ ಮನೆಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು ಹಲವರಿಗೆ ಗಾಯವಾಗಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶನಿವಾರ ಆರೋಪಿಸಿದೆ.
ಹಸ್ನಾಬಾದ್ ಪಂಚಾಯತ್ ಪ್ರದೇಶದಲ್ಲಿರುವ ಬಿಜೆಪಿ ನಾಯಕ ನಿಮಾಯ್ ದಾಸ್ ಅವರ ಸಂಬಂಧಿ ಮನೆಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು ಹಲವರಿಗೆ ಗಾಯಗಳಾಗಿವೆ. ದಾಸ್ ಅವರನ್ನು ವಿಚಾರಣೆಗಾಗಿ ತಕ್ಷಣವೇ ಕಸ್ಟಡಿಗೆ ತೆಗೆದುಕೊಳ್ಳಬೇಕು ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಹೇಳಿದ್ದಾರೆ.
ಸಂದೇಶಖಾಲಿಯಲ್ಲಿ ನಿರ್ಜನ ಪ್ರದೇಶದಲ್ಲಿದ್ದ ಮನೆಯಿಂದ ಬಂದೂಕುಗಳನ್ನು ವಶಪಡಿಸಿಕೊಳ್ಳುವ ಹೆಸರಿನಲ್ಲಿ ನಡೆದ ನಾಟಕದ ಭಾಗವಾಗಿ ಸಿಬಿಐನೊಂದಿಗೆ ಎನ್‌ಎಸ್‌ಜೆಯನ್ನು ಬಳಸಲಾಗಿದೆ. ಇಂದು ಬಿಜೆಪಿ ಮುಖಂಡನ ಸಂಬಂಧಿಕರ ಮನೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಇದರ ಕುರಿತು ತನಿಖೆಗೆ ಸಿಬಿಐ ಅಥವಾ ಎನ್‌ಎಸ್‌ಜಿ ಏಕೆ ಮುಂದಾಗಬಾರದು ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.