ADVERTISEMENT

ಕೇರಳ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿದ ಕೈದಿಗಳು!

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2018, 2:00 IST
Last Updated 21 ಆಗಸ್ಟ್ 2018, 2:00 IST
ಕೃಪೆ: ದಿ ನ್ಯೂಸ್  ಮಿನಿಟ್
ಕೃಪೆ: ದಿ ನ್ಯೂಸ್ ಮಿನಿಟ್   

ತಿರುವನಂತಪುರಂ: ಕೇರಳದ ಪ್ರವಾಹ ಸಂತ್ರಸ್ತರಿಗಾಗಿ ಎಲ್ಲೆಡೆಯಿಂದ ಸಹಾಯ ಹರಿದು ಬರುತ್ತಿದೆ. ಕಳೆದ ಒಂದು ವಾರದಿಂದ ತಿರುವನಂತಪುರ ಸೆಂಟ್ರಲ್ ಜೈಲು, ಮಹಿಳೆಯರ ಜೈಲು ಮತ್ತು ಸ್ಪೆಷಲ್ ಸಬ್ ಜೈಲಿನಲ್ಲಿನ ಕೈದಿಗಳು ಪ್ರವಾಹ ಸಂತ್ರಸ್ತರಿಗೆ ಮತ್ತು ರಕ್ಷಣಾ ಕಾರ್ಯಕರ್ತರಿಗಾಗಿ ಅಡುಗೆ ಮಾಡುತ್ತಿದ್ದಾರೆ.ಜೈಲಿನಲ್ಲಿರುವ 350ಕ್ಕೂ ಹೆಚ್ಚು ಕೈದಿಗಳು ಅಡುಗೆ ಮಾಡಿ, ಆಹಾರವನ್ನು ಪ್ಯಾಕ್ ಮಾಡಲು ಸಹಾಯ ಮಾಡಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಈ ಜೈಲುಗಳಲ್ಲಿರುವ ಕೈದಿಗಳು ಚಪಾತಿ ಮತ್ತು ಕೂರ್ಮ ಮಾಡಿ ಸಂತ್ರಸ್ತರ ಶಿಬಿರಗಳಿಗೆ ಕಳುಹಿಸುತ್ತಿದ್ದಾರೆ.ಎರಡು ದಿನಗಳಲ್ಲಿ ಅವರು 40,000 ಚಪಾತಿಗಳನ್ನು ಮಾಡಿದ್ದಾರೆ.ರಕ್ಷಣಾ ಕಾರ್ಯಕರ್ತರಾದ ಸೇನೆ, ನೌಕಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಗಳಿಗೆ ಜೈಲಿನಿಂದ ಆಹಾರ ಪೂರೈಸಲಾಗಿದೆ ಎಂದು ಕಾರಾಗೃಹದ ಡಿಜಿಪಿ ಶ್ರೀಕಲಾ ಹೇಳಿದ್ದಾರೆ.

120ಕ್ಕಿಂತಲೂ ಹೆಚ್ಚು ಜೈಲು ಅಧಿಕಾರಿಗಳು ಕೈದಿಗಳೊಂದಿಗೆ ಕೈ ಜೋಡಿಸಿ ನೌಕಾ ನೆಲೆ ಮತ್ತು ಹತ್ತಿರದಲ್ಲಿರು ಪರಿಹಾರ ಶಿಬಿರಗಳಿಗೆ ಆಹಾರ ಮತ್ತು ಕುಡಿಯುವ ನೀರು ಪೂರೈಸಿದ್ದಾರೆ. ಪ್ರತಿ ದಿನ ಕನಿಷ್ಠ 50,000ನ ನೀರಿನ ಬಾಟಲಿ ಮತ್ತು 20,000 ಆಹಾರ ಪೊಟ್ಟಣಗಳನ್ನು ಜೈಲಿನಿಂದ ಪೂರೈಸಲಾಗಿದೆ ಎಂದಿದ್ದಾರೆ ಡಿಜಿಪಿ.

ADVERTISEMENT

ಒಂದೊಂದೇ ಜೈಲಿನಿಂದ ಸರದಿಯಂತೆ ಪರಿಹಾರ ಶಿಬಿರದಲ್ಲಿರುವ ಜನರಿಗೆ ಆಹಾರ ಪೂರೈಕೆ ಮಾಡಲಾಗಿದೆ,.ಸೋಮವಾರ ಆಲಪ್ಪುಳ ಜಿಲ್ಲಾ ಕಾರಾಗೃಹದಿಂದ ಪರಿಹಾರ ಶಿಬಿರಗಳಿಗೆ ಆಹಾರ ಪೂರೈಸಲಾಗಿದೆ.ಎರ್ನಾಕುಳಂ, ಕೋಝಿಕ್ಕೋಡ್ ಮತ್ತು ಕೊಲ್ಲಂನಲ್ಲಿರುವ ಜಿಲ್ಲಾ ಕಾರಾಗೃಹಗಳಿಂದ ಪರಿಹಾರ ಶಿಬಿರಗಳಿಗೆ ಆಹಾರ ಪೂರೈಸಲಾಗಿದೆ. ವಿಯ್ಯೂರ್ ಸೆಂಟ್ರಲ್ ಜೈಲಿನಲ್ಲಿರುವ ಕೈದಿಗಳು ಸಂತ್ರಸ್ತರಿಗೆ ಗಂಜಿ ಮಾಡಿ ಕೊಟ್ಟಿದ್ದಾರೆ. ಕಣ್ಣೂರು ಜೈಲಿನಲ್ಲಿರುವ ಕೈದಿಗಳು ಆಹಾರ ಪೊಟ್ಟಣ, ಮಗುವಿನ ಆಹಾರ ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿ ವಾಯು ನೆಲೆಗೆ ಕಳುಹಿಸಿದ್ದಾರೆ ಎಂದು ಕಾರಾಗೃಹದ ಡಿಐಜಿ ಸಂತೋಷ್ ಹೇಳಿದ್ದಾರೆ.

ಇಷ್ಟೇ ಅಲ್ಲದೆ ಇಲ್ಲಿನ ಕೈದಿಗಳು ತಮ್ಮ ಒಂದು ದಿನದ ಸಂಬಳವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಿದ್ದಾರೆ.

ಪ್ರತಿ ಜೈಲಿನಲ್ಲಿರುವ ಕೈದಿಗಳು ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕಣ್ಣೂರ್ ಸೆಂಟ್ರಲ್ ಜೈಲಿನ ಕೈದಿಗಳು ನಾಲ್ಕೂವರೆ ಲಕ್ಷದಷ್ಟು ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಿದ್ದಾರೆ. ಇದು ಕೇವಲ ಒಂದು ಜೈಲಿನ ದೇಣಿಗೆ ಅಂತಾರೆ ಸಂತೋಷ್ .

ಕೈದಿಗಳ ರಕ್ಷಣೆ ಬಗ್ಗೆ ಕಾಳಜಿ
ಪತ್ತನಂತಿಟ್ಟದಲ್ಲಿರುವ ಜಿಲ್ಲಾ ಕಾರಾಗೃಹ ಮತ್ತು ಕೊಟ್ಟಾರಕ್ಕರದಲ್ಲಿರುವ ಕಾರಾಗೃಹಕ್ಕೆ ಪ್ರವಾಹದ ವೇಳೆಯೂ ಸುರಕ್ಷಿತವಾಗಿತ್ತು. ಪತ್ತನಂತಿಟ್ಟ ಜಿಲ್ಲಾ ಕಾರಾಗೃಹ ತಗ್ಗು ಪ್ರದೇಶದಲ್ಲಿ ಇದ್ದು ಅಲ್ಲಿ 21 ಕೈದಿಗಳು 5 ಜೈಲು ಅಧಿಕಾರಿಗಳಿದ್ದಾರೆ.ಪ್ರವಾಹ ವೇಳೆ ಅವರನ್ನು ಮೇಲ್ಮಹಡಿಗೆ ಕಳುಹಿಸಿ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗಿದೆ. ಮೂರು ದಿನಗಳ ಕಾಲ ಅವರು ಸುರಕ್ಷಿತರಾಗಿದ್ದರು. ಈಗ ನೀರು ಕಡಿಮೆಯಾಗಿದ್ದರಿಂದ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ ಎಂದು ಶ್ರೀಕಲಾ ಹೇಳಿದ್ದಾರೆ.
ವಯನಾಡು ಜಿಲ್ಲೆಯ ವೈತಿರಿ ಮತ್ತು ಮಾನಂತವಾಡಿಯಲ್ಲಿರುವ ಜೈಲಿಗೆ ಮಣ್ಣು ಕುಸಿತದಿಂದ ಹಾನಿಯುಂಟಾಗಬಹುದೆಂದು ಊಹಿಸಲಾಗಿತ್ತು, ಆದರೆ ಪ್ರವಾಹ ವೇಳೆ ಜೈಲಿನ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ
ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸನ್ನದ್ಧರಾಗಿದ್ದೆವು. ಪ್ರವೇಶ ದ್ವಾರದ ಬಳಿ ವಾಹನಗಳನ್ನು ತೆರವು ಮಾಡಿದ್ದೆವು.ಬೇಲ್ ಸಿಕ್ಕಿದ ಕೈದಿಗಳನ್ನು ಬಿಡುಗಡೆಗೊಳಿಸಿದ್ದೆವು ಎಂದು ಸಂತೋಷ್ ಹೇಳಿದ್ದಾರೆ.
ಪರೋಲ್‍ನಲ್ಲಿ ಹೋದವರು ಪ್ರವಾಹದಿಂದಾಗಿ ನಿಗದಿತ ಸಮಯಕ್ಕೆ ಜೈಲಿಗೆ ವಾಪಾಸ್ ಆಗಿಲ್ಲ.ಅವರಿಗೆ ಇನ್ನಷ್ಟು ದಿನ ಮನೆಯಲ್ಲಿ ಇರುವಂತೆ ಜೈಲು ಅಧಿಕಾರಿ ಹೇಳಿದ್ದಾರೆ.

ಕೇರಳದ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ

ಸಹಾಯ ಮಾಡಲಿಚ್ಛಿಸುವವರು ಕೇರಳ ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿಗೆಹಣಕಳುಹಿಸಬಹುದು

Chief Minister's Distress Relief Fund

NO: 67319948232
Bank: State Bank of India
IFSC : SBIN0070028
SWIFT CODE : SBININBBT08

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.