ADVERTISEMENT

ಅಕ್ಷರ ಜಾತ್ರೆ: ಶಾಲೆಗಳಲ್ಲಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 19:59 IST
Last Updated 17 ನವೆಂಬರ್ 2017, 19:59 IST
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ   

ಮೈಸೂರು: 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹೆಚ್ಚು ಜನರನ್ನು ಸೆಳೆಯಲು ಆಯೋಜಕರು ಕಸರತ್ತು ನಡೆಸುತ್ತಿದ್ದಾರೆ.

ಪ್ರಚಾರಕ್ಕಾಗಿ 24 ಕಲಾವಿದರ ತಂಡ ರಚಿಸಲಾಗಿದೆ. ಈ ಕಲಾವಿದರು ಶಾಲಾ, ಕಾಲೇಜುಗಳಿಗೆ ತೆರಳಿ ನಾಡಗೀತೆ ಹಾಗೂ ನಾಡುನುಡಿಗೆ ಸಂಬಂಧಿಸಿದ ಗೀತೆಗಳ ಮೂಲಕ ವಿದ್ಯಾರ್ಥಿಗಳಿಗೆ ಅಕ್ಷರ ಜಾತ್ರೆಯ ಮಹತ್ವ ತಿಳಿಸಿಕೊಡಲಿದ್ದಾರೆ. ಜೊತೆಗೆ ಸಮ್ಮೇಳನಕ್ಕೆ ಆಹ್ವಾನ ನೀಡಲಿದ್ದಾರೆ.

‘ಸಮ್ಮೇಳನ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಅಲ್ಲದೆ, ಈ ಕಲಾವಿದರು ಪ್ರಮುಖ ವೃತ್ತಗಳಲ್ಲಿ ನಿಂತು ನುಡಿ ಜಾತ್ರೆಯ ಮಹತ್ವ ಸಾರಲಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಭಾಗಿ: ಸಮ್ಮೇಳನಕ್ಕೆ ಸ್ತಬ್ಧಚಿತ್ರ ಮಾಡಿಕೊಂಡು ಬರುವಂತೆ ಆಯ್ದ ಶಾಲಾ, ಕಾಲೇಜುಗಳಿಗೆ ಮಾಹಿತಿ ರವಾನಿಸಲಾಗಿದೆ. ಅದಕ್ಕೆ ಕೆಲ ಶಾಲೆಗಳು ಸ್ಪಂದಿಸಿವೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಯಲ್ಲಿ ಸುಮಾರು 5,000 ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಭಾಗವಹಿಸಲಿದ್ದಾರೆ. ಮೆರವಣಿಗೆ ಹಾದಿಯಲ್ಲಿ ಜ್ಞಾನಪೀಠ ಪುರಸ್ಕೃತರು ಸೇರಿದಂತೆ 11 ಕವಿಗಳ ಕಟೌಟ್‌ಗಳನ್ನು ನಿಲ್ಲಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮುಂದಾಗಿದೆ.

ಮೆರವಣಿಗೆ ನ. 24ರಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಆರಂಭವಾಗಿ ಅಶೋಕ ರಸ್ತೆ, ಇರ್ವಿನ್‌ ರಸ್ತೆ, ಕೆ.ಆರ್‌.ವೃತ್ತ, ಬಸವೇಶ್ವರ ವೃತ್ತ, ರಾಮಸ್ವಾಮಿ ವೃತ್ತದ ಮೂಲಕ ಮಹಾರಾಜ ಕಾಲೇಜು ಮೈದಾನ ತಲುಪಲಿದೆ. 11 ಗಂಟೆಗೆ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.