ADVERTISEMENT

ಅತಿಥಿ ಉಪನ್ಯಾಸಕರು ಮನೆಗೆ?

ಮುಂದುವರಿಸುವ ಬಗ್ಗೆ ಬಾಯ್ಬಿಡದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2016, 19:30 IST
Last Updated 23 ಏಪ್ರಿಲ್ 2016, 19:30 IST
ಅತಿಥಿ ಉಪನ್ಯಾಸಕರು ಮನೆಗೆ?
ಅತಿಥಿ ಉಪನ್ಯಾಸಕರು ಮನೆಗೆ?   

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಅವಧಿ ಶನಿವಾರಕ್ಕೆ ಪೂರ್ಣಗೊಂಡಿದೆ. ಆದರೆ, ಅವರನ್ನು ಮುಂದುವರಿಸುವ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ.

ರಾಜ್ಯದಲ್ಲಿ 411 ಸರ್ಕಾರಿ ಪದವಿ ಕಾಲೇಜುಗಳಿವೆ. ಸರ್ಕಾರಿ ಉಪನ್ಯಾಸಕರ ಸಂಖ್ಯೆ 4,800 ಇದ್ದರೆ, 14,531 ಮಂದಿ ಅತಿಥಿ ಉಪನ್ಯಾಸಕರು ಕಾರ್ಯನಿ ರ್ವಹಿಸುತ್ತಿದ್ದಾರೆ.

ತಮ್ಮನ್ನು ಕೈಬಿಟ್ಟು ಆನ್‌ಲೈನ್‌ ಮೂಲಕ ಹೊಸದಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬ ಗುಮಾನಿಯೂ ಅವರನ್ನು ಕಾಡುತ್ತಿದೆ.

ಈ ಮಧ್ಯೆ ಮೇ 10ರಿಂದ ಪದವಿ ಕಾಲೇಜುಗಳ ಪರೀಕ್ಷಾ ಕಾರ್ಯ ಆರಂಭವಾಗಲಿದ್ದು, ಆಯಾ ಕಾಲೇಜುಗಳ ಪ್ರಾಂಶುಪಾಲರು ಪರೀಕ್ಷೆ ಪೂರ್ಣಗೊಳ್ಳುವವರೆಗೂ ಕರ್ತವ್ಯದಲ್ಲಿ ಮುಂದುವರಿಯುವಂತೆ ಮನವಿ ಮಾಡುತ್ತಿದ್ದಾರೆ. 

ಸರ್ಕಾರಕ್ಕೆ ಮನವಿ: ‘2016–17ನೇ ಸಾಲಿಗೆ ಹೊಸದಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೆ ಈಗ ಇರುವವರನ್ನೇ ಮುಂದುವರಿಸಬೇಕು ಮತ್ತು ಮಾಸಿಕ ₹25 ಸಾವಿರ ವೇತನ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಇದುವರೆಗೂ ಸರ್ಕಾರ ಯಾವುದೇ ನಿರ್ಧಾರ ತಿಳಿಸಿಲ್ಲ’ ಎಂದು ಕರ್ನಾಟಕ ರಾಜ್ಯ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್‌.ಶ್ರೀನಿವಾಸಾಚಾರ್‌ ಹೇಳಿದರು.

‘ಅತಿಥಿ ಉಪನ್ಯಾಸಕರಿಗೆ ಆಂಧ್ರ ಮತ್ತು ಕೇರಳದಲ್ಲಿ ₹22 ಸಾವಿರ, ಹರಿಯಾಣದಲ್ಲಿ ₹25 ಸಾವಿರ ವೇತನ ನೀಡಲಾಗುತ್ತದೆ. ಆದರೆ, ನಮ್ಮಲ್ಲಿ ಕೇವಲ ₹9,500 ನೀಡಲಾಗುತ್ತದೆ. ಕಳೆದ ಮೂರು ತಿಂಗಳಿಂದ ಅದೂ ಬಾಕಿ ಇದೆ’ ಎಂದರು.

ಮನೆಗೆ ಹೋಗಬೇಕಾಗುತ್ತದೆ:  ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳಿಗೆ  2,180 ಉಪನ್ಯಾಸಕರನ್ನು ಹೊಸದಾಗಿ ನೇಮಿಸಿಕೊಳ್ಳುವ  ಪ್ರಕ್ರಿಯೆ ನಡೆಸುತ್ತಿದೆ. ಆದರೆ 10–15 ವರ್ಷ ಸೇವೆ ಸಲ್ಲಿಸಿದವರನ್ನು ಕಾಯಂ ಮಾಡಿಲ್ಲ. ಅಲ್ಲದೆ, ಕಾಯಂ ಉಪನ್ಯಾಸಕರ ನೇಮಕದ ನಂತರ ಅತಿಥಿ ಉಪನ್ಯಾಸಕರ ಪೈಕಿ 4000– 4500 ಮಂದಿಯನ್ನು ಮನೆಗೆ ಕಳುಹಿಸಲಾಗುತ್ತದೆ. ಆಗ ಅವರೆಲ್ಲರೂ ಬೀದಿಗೆ ಬರಬೇಕಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.