ADVERTISEMENT

ಅತ್ಯಾಚಾರ ಆರೋಪ: ಮರು ತನಿಖೆಗೆ ಸಿ.ಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2014, 20:07 IST
Last Updated 20 ಡಿಸೆಂಬರ್ 2014, 20:07 IST

ಬೆಳಗಾವಿ: ಹೆಸ್ಕಾಂ ಬೆಳಗಾವಿ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 376ರ ಅಡಿ ಮತ್ತೊಮ್ಮೆ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್‌ ಅಧಿಕಾರಿಗಳಿಗೆ ಶನಿವಾರ ನಿರ್ದೇಶಿಸಿದರು.

‘ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಟಿ.ಬಿ.ಮಜ್ಜಗಿ, ಸ್ಟೋರ್‌­ಕೀಪರ್‌ ಎಂ.ಟಿ.ಟಕ್ಕಳಕಿ ಹಾಗೂ ಲೈನ್‌ಮನ್‌ ಮಾರುತಿ ದೊಡ್ಡಮನಿ ಅವರು ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಕಳೆದ ತಿಂಗಳ  19 ರಂದು ಮಾಳ­ಮಾರುತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆದರೆ, ಪೊಲೀಸರು ನಾನು ಬರೆದುಕೊಟ್ಟ ದೂರನ್ನು ತಿರುಚಿ, ಐಪಿಸಿ ಕಲಂ 354ರಡಿ ಪ್ರಕರಣ ದಾಖಲಿಸಿ­ಕೊಂಡು ಆರೋಪಿಗಳಿಗೆ ಜಾಮೀನು ಸಿಗುವಂತೆ ಮಾಡಿದ್ದಾರೆ. ನನಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ನೊಂದ ಮಹಿಳೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.

ಅವರ ಮನವಿ ಆಲಿಸಿದ ಮುಖ್ಯಮಂತ್ರಿಗಳು, ಸ್ಥಳದಲ್ಲಿದ್ದ  ಪೊಲೀಸ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಪ್ರಕರಣ ಕುರಿತು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆಯೇ’ ಎಂದು ಪ್ರಶ್ನಿಸಿದ ಅವರು,  ‘ಕೂಡಲೇ ಮಹಿಳೆಯಿಂದ ಮತ್ತೊಂದು ದೂರನ್ನು ಪಡೆದು, ಐಪಿಸಿ ಕಲಂ 376ರ ಅಡಿ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.