ADVERTISEMENT

ಅಪ್ರಸ್ತುತ ಹಿರಿಯರು: ಧೋರಣೆಗೆ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2014, 19:30 IST
Last Updated 5 ಅಕ್ಟೋಬರ್ 2014, 19:30 IST
ಸಾಗರ ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಭಾನುವಾರ ‘ತ್ಯಾಜ್ಯ ಪರಿಕಲ್ಪನೆಯ ಹೊಸ ಹೊಳಹುಗಳು’ ವಿಷಯದ ಕುರಿತು ಸಮಾಜ ವಿಜ್ಞಾನಿ ಶಿವ ವಿಶ್ವನಾಥನ್ ಮಾತನಾಡಿದರು
ಸಾಗರ ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಭಾನುವಾರ ‘ತ್ಯಾಜ್ಯ ಪರಿಕಲ್ಪನೆಯ ಹೊಸ ಹೊಳಹುಗಳು’ ವಿಷಯದ ಕುರಿತು ಸಮಾಜ ವಿಜ್ಞಾನಿ ಶಿವ ವಿಶ್ವನಾಥನ್ ಮಾತನಾಡಿದರು   

ಸಾಗರ: ‘ಆಧುನಿಕತೆಯ ಪ್ರಭಾವದಿಂದ ತ್ಯಾಜ್ಯ ಎಂಬುದು ವಸ್ತುಗಳ ವಲಯ­ದಿಂದ ವ್ಯಕ್ತಿಗಳ ವಲಯಕ್ಕೆ ಪ್ರವೇಶಿ­ಸುತ್ತಿದೆ’ ಎಂದು ಸಮಾಜ ವಿಜ್ಞಾನಿ ಶಿವವಿಶ್ವನಾಥನ್ ಆತಂಕ ವ್ಯಕ್ತಪಡಿ­ಸಿದರು. ಹೆಗ್ಗೋಡಿನಲ್ಲಿ ನಡೆಯುತ್ತಿರುವ ‘ನೀನಾಸಂ ಸಂಸ್ಕೃತಿ ಶಿಬಿರ’ದಲ್ಲಿ ಭಾನುವಾರ ‘ತ್ಯಾಜ್ಯ ಪರಿಕಲ್ಪನೆಯ ಹೊಸ ಹೊಳಹುಗಳು’ ವಿಷಯದ ಮೇಲೆ ಮಾತನಾಡಿದರು.

‘ವ್ಯಕ್ತಿಗಳ ವಲಯಕ್ಕೆ ಪ್ರವೇಶಿಸು­ತ್ತಿರುವ ತ್ಯಾಜ್ಯದ ದೃಷ್ಟಿಕೋನದಿಂದಾಗಿ ಹಿರಿಯರನ್ನು ನಿಷ್ಪ್ರಯೋಜಕ ಎಂದು ಪರಿಗಣಿಸಲಾಗುತ್ತಿದೆ.  ಹಿರಿಯರಿಂದ ಪಡೆಯುತ್ತಿದ್ದ ಜ್ಞಾನವನ್ನೇ ಅಂತ­ರ್ಜಾಲದ ಮೂಲಕವೂ ಪಡೆಯ­ಬಹುದೆಂಬ ಅಹಂ ಪ್ರದರ್ಶಿಸುತ್ತಿದ್ದೇವೆ’ ಎಂದು ವಿಶ್ಲೇಷಿಸಿದರು.

‘ಈ ಪಲ್ಲಟ ಅಮೆರಿಕ, ಆಫ್ರಿಕಾ­ದಂತಹ ಬಡ ದೇಶಕ್ಕೆ ನೆರವು ನೀಡಿದರೆ ಪ್ರಯೋಜನವಿಲ್ಲ ಎಂಬ ಸನ್ನಿವೇಶವನ್ನೂ ನಿರ್ಮಿಸುತ್ತಿದೆ. ದೇಶದಲ್ಲಿ ದುರ್ಬಲರ ಸೇವೆ ಮಾಡಿದ ಮದರ್‌ ತೆರೆಸಾ ಕೂಡ ಅಪ್ರಸ್ತುತ ಎನಿಸಿದರೆ ಆಶ್ಚರ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
ಹಳ್ಳಿಗಳಿಗೆ ನಗರದ ದೊಡ್ಡ ಕೊಡು­ಗೆಯೇ ತ್ಯಾಜ್ಯ. ಇದನ್ನು ವಿಂಗಡಿಸು­ವವರಲ್ಲಿ, ವಿಲೇವಾರಿ ಮಾಡುವವ­ರಲ್ಲೇ ಮೇಲು–ಕೀಳಿನ ಭಾವ ಸೃಷ್ಟಿಯಾಗುತ್ತಿದೆ. ವಿಲೇವಾರಿ ಮಾಡುವ­ವರಿಗೂ ಘನತೆಯ ಬದುಕುಂಟು ಎಂದು ಅರಿಯಬೇಕಿದೆ ಎಂದರು.

‘ಹೊಸ ನಗರಗಳನ್ನು ನಿರ್ಮಾಣ ಮಾಡುವಾಗ ಅನೇಕ ಗ್ರಾಮಗಳನ್ನು ನೆಲಸಮ ಮಾಡಿದ್ದೇವೆ. ಈ ಪ್ರದೇಶಗಳಲ್ಲಿ ಪ್ರಾಕೃತಿಕ ತ್ಯಾಜ್ಯಗಳು ಹೇರಳವಾಗಿವೆ ಎಂಬುದನ್ನು ಮರೆ­ತಿದ್ದೇವೆ. ಹಳ್ಳಿಯ ಭಗ್ನಾವಶೇಷಗಳು ಅಪ್ರಯೋಜಕವಲ್ಲ. ಅವುಗಳು ನೆನಪು­ಗಳನ್ನು ಕಟ್ಟಿಕೊಡುವ ಸಾಧನಗಳಾಗಿವೆ’ ಎಂದು ಬಣ್ಣಿಸಿದರು.

‘ತ್ಯಾಜ್ಯವೆಂಬುದು ದೇಶದಲ್ಲಿ ಅನೌಪ­ಚಾರಿಕ ಅರ್ಥಶಾಸ್ತ್ರದಂತೆ, ರಾಜಕೀಯ ಕ್ಷೇತ್ರದ ಪ್ರಮುಖ ಭಾಗವೆನ್ನುವುದನ್ನು ಮರೆಯಲಾಗದು. ತಳಮಟ್ಟದ ಮಂದಿ ಕೈಗೊಳ್ಳುವ ವೃತ್ತಿಗಳ ಮೂಲಕವೇ ದೇಶದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಬೇಕೆ ವಿನಾ ಪುಸ್ತಕಗಳ ಆಧಾರದ ಮೇಲೆ ಅಲ್ಲ’ ಎಂದು ಪ್ರತಿಪಾದಿಸಿದರು.

ಇದಕ್ಕೂ ಮುನ್ನ ನಡೆದ ಗೋಷ್ಠಿ­ಯಲ್ಲಿ ಶನಿವಾರ ಪ್ರದರ್ಶನಗೊಂಡ ‘ಚಿರಕುಮಾರ ಸಭಾ’ ನಾಟಕದ ಬಗ್ಗೆ ಚರ್ಚೆ, ಸಂವಾದ ನಡೆಯಿತು. ಮಧ್ಯಾಹ್ನ ವೈದೇಹಿ ಅವರ ಕಥೆ ಆಧರಿಸಿದ ’ಕ್ರೌಂಚ ಪಕ್ಷಿಗಳು’ ನಾಟಕವನ್ನು ನೀನಾಸಂ ಬಳಗದ ಕಲಾವಿದರು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.