ADVERTISEMENT

ಅಮೆರಿಕಾಗೆ ಮೋಜು ಮಾಡಲು ಹೋಗಿಲ್ಲ: ಅಂಬರೀಶ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 11:38 IST
Last Updated 28 ಸೆಪ್ಟೆಂಬರ್ 2016, 11:38 IST
ಅಂಬರೀಶ್
ಅಂಬರೀಶ್   

ಬೆಂಗಳೂರು: ಮಾಜಿ ಸಚಿವ. ಮಂಡ್ಯ ಶಾಸಕ ಅಂಬರೀಶ್ ಅವರು ಇಂದು ಜೆಪಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಕಾವೇರಿ ಹೋರಾಟ ತೀವ್ರರೂಪ ಪಡೆದುಕೊಂಡಿದ್ದಾಗ ಅಂಬರೀಶ್ ಅವರು ಮಾತ್ರ ಹೋರಾಟದಲ್ಲಿ ಭಾಗವಹಿಸದೆ ಅಮೆರಿಕಾದಲ್ಲಿ ಮೋಜು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಸುದ್ದಿಗೋಷ್ಠಿಯಲ್ಲಿ ಅಂಬರೀಶ್ ಈ ಆರೋಪದ ಬಗ್ಗೆಯೇ ಸ್ಪಷ್ಟನೆ ನೀಡಿದ್ದಾರೆ.

ಅಮೆರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕೋಸ್ಕರ ನಾನು ಅಲ್ಲಿಗೆ ಹೋಗಿದ್ದೆ. ಅಮೆರಿಕದ ಕನ್ನಡಿಗರಿಗೋಸ್ಕರ ನಾನು ಅಲ್ಲಿಗೆ ಹೋಗಿದ್ದೆ. ಅಲ್ಲಿ ನಾನು ಮೋಜು ಮಾಡಲಿಕ್ಕಾಗಲೀ, ಐಷಾರಾಮಿ ಜೀವನ  ನಡೆಸಲಿಕ್ಕಾಗಲೀ ಹೋಗಿಲ್ಲ. ಮೋಜು ಮಾಡುವ ವಯಸ್ಸು ನನ್ನದಲ್ಲ.

ಕಾವೇರಿ ಹೋರಾಟದ ಬಗ್ಗೆ ನನಗೆ ಗೊತ್ತಿದೆ. ಕಾವೇರಿ ಹೋರಾಟಕ್ಕಾಗಿಯೇ ಕೇಂದ್ರ ಸಚಿವ ಸ್ಥಾನ ಬಿಟ್ಟು ಬಂದಿದ್ದೆ. 2006 ರಲ್ಲಿ ಆಗಿನ ಪ್ರಧಾನಿ ಕಾವೇರಿ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದರು. ಅವರ ಪ್ರಶ್ನೆಗೆ ನಾನು ಕೊಟ್ಟ ಉತ್ತರ ಏನು ಗೊತ್ತಾ?
ಕಾವೇರಿ  ವಿಷಯ ತುಂಬಾ ಸಿಂಪಲ್, ಎರಡೂ ರಾಜ್ಯಗಳ ರೈತರಿಗೆ ಈ ವಿಚಾರವನ್ನು ಬಿಟ್ಟು ಬಿಡಿ. ರೈತರ ಸಮಸ್ಯೆಗಳನ್ನು ರೈತರೇ ಪರಿಹರಿಸಿಕೊಳ್ಳುತ್ತಾರೆ, ರೈತರ ಸಮಸ್ಯೆ ರಾಜಕಾರಣಿಗಳಿಗೆ ಗೊತ್ತಾಗಲ್ಲ. ಅಷ್ಟೇ ಅಲ್ಲ ಪ್ರಕೃತಿಗೆ  ಯಾವುದೇ ಬ್ಯಾರೋಮೀಟರ್ ಫಿಕ್ಸ್ ಮಾಡಲು ಸಾಧ್ಯವಿಲ್ಲ. ಅದು ಸಮ್ಮತವಲ್ಲ ಎಂದಿದ್ದೆ.

ನಾನು ಯಾವತ್ತೂ ಅಧಿಕಾರಕ್ಕಾಗಲೀ ಹಣಕ್ಕಾಗಲೀ ಕೆಲಸ ಮಾಡಿಲ್ಲ. ನಾನು ಈ ಮಟ್ಟಕ್ಕೆ ಬೆಳೆಯಬೇಕಾದರೆ ಕಷ್ಟ ಪಟ್ಟಿದ್ದೇನೆ.
ರಾಜ್ಯದಲ್ಲಿ ಸಮಸ್ಯೆ ತಲೆದೋರಿದಾಗ ನಾನು ಇಲ್ಲಿರಲಿಲ್ಲ. ಅದಕ್ಕಾಗಿ ನಾನು ರಾಜ್ಯದ ಕ್ಷಮೆ ಕೋರುತ್ತೇನೆ. ನನಗೆ ರಾಜ್ಯದ ಜನರ ಬಗ್ಗೆ ಎಷ್ಟು ಪ್ರೀತಿ ಇದೆ ಎಂಬುದನ್ನು ಹನುಮಂತ ಎದೆ ಬಗೆದು 'ರಾಮ'ನ ಮೇಲಿನ ಪ್ರೀತಿಯನ್ನು ತೋರಿಸಿದಂತೆ ತೋರಿಸಲು ಸಾಧ್ಯವಿಲ್ಲ.
ನನಗೂ ಇಲ್ಲಿನ ಜನರ ಮೇಲೆ ಪ್ರೀತಿ, ಕಾಳಜಿ ಇದೆ. ಎಲ್ಲರ ಪ್ರೀತಿಯಿಂದಲೇ ನಾನಿಲ್ಲಿ ಇದ್ದೇನೆ. ಜನರು ಪ್ರೀತಿ ಇದ್ದರೆ ಗೆಲ್ಲಿಸುತ್ತಾರೆ. ಇಲ್ಲಾಂದ್ರೆ ಸೋಲಿಸುತ್ತಾರೆ. ನಾನು ಚುನಾವಣೆಯಲ್ಲಿ ಸೋತಿಲ್ಲವೇ?

ನಾನು ಇನ್ನು ಮುಂದೆ ಕಾವೇರಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ. ಹೋರಾಟದಲ್ಲಿ ನಾವು ಯಾರಿಗೂ ತೊಂದರೆ ಮಾಡಬಾರದು. ಇಂಥಾ ಹೋರಾಟಗಳಲ್ಲಿ ನಮ್ಮಿಂದ ನಾವೇ ತೊಂದರೆಗೊಳಗಾಗಬಾರದು.

ನಮ್ಮ ಮುಖ್ಯಮಂತ್ರಿಯವರು ಉತ್ತಮ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಅದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ. ನಾಳೆ ದೆಹಲಿಯಲ್ಲಿ ಸಂಧಾನ ಸಭೆ ನಡೆಯಲಿದೆ. ನಮ್ಮ ಮುಖ್ಯಮಂತ್ರಿಯವರು ಮೈ ಲಾರ್ಡ್ ನೀರು ಬಿಡುವುದಿಲ್ಲ ಎಂದು ಹೇಳಲಿ. ಜನರ ಹಿತಕ್ಕಾಗಿ ಮುಖ್ಯಮಂತ್ರಿ ಸರಿಯಾದ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ.
 
ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ಕೊಟ್ಟಿದ್ದೇನೆ. ಅದು ಸ್ವೀಕೃತ ಆಗಿಲ್ಲ. ಆದಾಗ್ಯೂ, ರಾಜೀನಾಮೆ ಕೊಟ್ಟ ನಂತರ ನಾನು ಸಂಬಳವನ್ನೂ ಪಡೆದಿಲ್ಲ. ನಾಡಿದ್ದು ನಾನು ಮಂಡ್ಯಕ್ಕೆ ಹೋಗುತ್ತೇನೆ.

ಕಾವೇರಿ ಕೊಳ್ಳದಲ್ಲಿ ನೀರಿಲ್ಲ. ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲದೇ ಇರುವಾಗ ತಮಿಳುನಾಡು ಬೆಳೆಗೆ ನೀರು ಕೇಳುತ್ತಿದೆ. ಇದು ನಮ್ಮ ರಾಜ್ಯದ ದೌರ್ಭಾಗ್ಯ. ದೇವರ ದಯೆಯಿಂದ ಚೆನ್ನಾಗಿ ಮಳೆ ಬರಲಿ. ಭಗವಂತನ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಹೇಳಿ ಅಂಬರೀಶ್ ಸುದ್ದಿಗೋಷ್ಠಿ ಮುಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.