ADVERTISEMENT

ಅಲ್ಲಂ, ರಿಜ್ವಾನ್‌, ವೀಣಾಗೆ ಟಿಕೆಟ್‌

ಸ್ಥಳೀಯ ಮುಖಂಡರಿಗೆ ಹೈಕಮಾಂಡ್ ಶಾಕ್

​ಪ್ರಜಾವಾಣಿ ವಾರ್ತೆ
Published 28 ಮೇ 2016, 19:30 IST
Last Updated 28 ಮೇ 2016, 19:30 IST
ಅಲ್ಲಂ, ರಿಜ್ವಾನ್‌, ವೀಣಾಗೆ ಟಿಕೆಟ್‌
ಅಲ್ಲಂ, ರಿಜ್ವಾನ್‌, ವೀಣಾಗೆ ಟಿಕೆಟ್‌   

ನವದೆಹಲಿ: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್‌ ಹೈಕಮಾಂಡ್ ಸ್ಥಳೀಯ ಮುಖಂಡರಿಗೆ ಶಾಕ್‌ ಕೊಟ್ಟಿದೆ. ಇದಲ್ಲದೆ ನಿರೀಕ್ಷೆಯಂತೆ ಆರ್‌.ಬಿ. ತಿಮ್ಮಾಪುರ ಅವರಿಗೂ ಟಿಕೆಟ್ ನೀಡಲಾಗಿದೆ.

ಗುರುವಾರ ರಾತ್ರಿವರೆಗೆ ವೀರಶೈವ ಸಮಾಜದ ಕೊಂಡಜ್ಜಿ ಮೋಹನ್‌ ಅವರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರೂ ಕೊಂಡಜ್ಜಿ ಅವರ ಹೆಸರನ್ನೇ ಶಿಫಾರಸು ಮಾಡಿದ್ದರು.

ರಾತ್ರಿ ಹೈಕಮಾಂಡ್‌ ಬಿಡುಗಡೆ ಮಾಡಿರುವ ಅಧಿಕೃತ ಪಟ್ಟಿಯಲ್ಲಿ ವೀರಶೈವ ಸಮಾಜದ ಅಲ್ಲಂ ವೀರಭದ್ರಪ್ಪ ಅವರ ಹೆಸರು ಪ್ರಕಟವಾಗಿದೆ.

ಪ್ರದೇಶ ಕಾಂಗ್ರೆಸ್‌ ಸಮಿತಿ ಮಾಜಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ ಅವರಿಗೆ ಟಿಕೆಟ್‌ ಸಿಕ್ಕಿರುವುದರ ಹಿಂದೆ ಹೈದರಾಬಾದ್‌– ಕರ್ನಾಟಕದ ಭಾಗದ ಹಿರಿಯ ಕಾಂಗ್ರೆಸ್‌ ನಾಯಕರ ಕೈವಾಡವಿದೆ. ಅಧಿಕೃತ ಪಟ್ಟಿ ಬಿಡುಗಡೆ ಆಗುವ ಕೊನೆ ಕ್ಷಣದಲ್ಲಿ ತಮ್ಮ ಭಾಗ ಕಡೆಗಣಿಸಿರುವ ಬಗ್ಗೆ ಈ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದಾಗಿ ಮೋಹನ್‌ ಅವರಿಗೆ ಅವಕಾಶ ತಪ್ಪಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ಗೆ ನಾಲ್ಕು ಸ್ಥಾನಗಳನ್ನು ಗೆಲ್ಲಲು ಅವಕಾಶವಿದ್ದು, ಪರಿಶಿಷ್ಟ ಜಾತಿ ಎಡಗೈ ಬಣಕ್ಕೆ ಸೇರಿದ ಆರ್‌.ಬಿ. ತಿಮ್ಮಾಪುರ ಅವರೂ ಟಿಕೆಟ್‌ ಪಡೆಯುವಲ್ಲಿ ಸಫಲವಾಗಿದ್ದಾರೆ. ತಿಮ್ಮಾಪುರ ಅವರ ಪರ ಸಂಸದ ಕೆ.ಎಚ್‌. ಮುನಿಯಪ್ಪ, ಲೋಕಸಭೆ ಸದಸ್ಯ ಚಂದ್ರಪ್ಪ ಅವರೂ ಸೇರಿದಂತೆ ಅನೇಕರು ಲಾಬಿ ಮಾಡಿದ್ದರು.

ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಿಂದ ಯುವ ಕಾಂಗ್ರೆಸ್‌ ಮುಖಂಡ ಅರ್ಷದ್‌ ರಿಜ್ವಾನ್‌ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಈ ಸಮಾಜದಿಂದ ಕೋಲಾರದ ನಜೀರ್‌ ಅಹಮದ್‌ ಹಾಗೂ ಬಳ್ಳಾರಿ ಮೂಲದ ನಾಜೀರ್ ಅಹಮದ್‌ ಅವರ ಹೆಸರುಗಳು ಪರಿಶೀಲನೆಯಲ್ಲಿತ್ತು. ರಾಹುಲ್‌ ಅವರಿಗೆ ನಿಷ್ಠರಾಗಿರುವ ರಿಜ್ವಾನ್‌ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಸೋತಿದ್ದಾರೆ.

ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ವೀಣಾ ಅಚ್ಚಯ್ಯ ಅವರಿಗೂ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಈ ಹೆಸರು ಕಾಂಗ್ರೆಸ್‌ ಪಟ್ಟಿಯಲ್ಲಿ ಇರಬಹುದೆಂದು ಯಾರೂ ಊಹಿಸಿರಲಿಲ್ಲ. ಹಿಂದಿನ ಚುನಾವಣೆಗಳಲ್ಲಿ ಸೋತಿರುವ ಮತ್ತು ನಿಗಮ–ಮಂಡಳಿಗಳ ಅಧ್ಯಕ್ಷರಾದವರಿಗೆ ಟಿಕೆಟ್‌ ಕೊಡುವುದಿಲ್ಲವೆಂದು ಹೇಳಿದ್ದ ಕಾಂಗ್ರೆಸ್‌ ಈ ಎಲ್ಲ ಮಾನದಂಡಗಳನ್ನು ಉಲ್ಲಂಘಿಸಿದೆ.

ವಿಧಾನಪರಿಷತ್ತಿಗೆ ನಾಮಕರಣ ಮಾಡುವ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಇನ್ನೂ ಅಂತಿಮಗೊಳಿಸಿಲ್ಲ. ನಟಿಯರಾದ ರಮ್ಯಾ, ಭಾವನಾ ಇಬ್ಬರಿಗೂ ಅವಕಾಶ  ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.