ADVERTISEMENT

ಅಳಿವಿನ ಅಂಚಿನಲ್ಲಿ ಅಶೋಕ ವೃಕ್ಷ

ರಾಜ್ಯದಲ್ಲಿ ಬರೀ 22 ಸಾವಿರ : ಖಚಿತಪಡಿಸಿದ ಮರ ಗಣತಿ

ವಿ.ಎಸ್.ಸುಬ್ರಹ್ಮಣ್ಯ
Published 24 ಆಗಸ್ಟ್ 2014, 20:32 IST
Last Updated 24 ಆಗಸ್ಟ್ 2014, 20:32 IST

ಬೆಂಗಳೂರು: ಅಡಿಯಿಂದ ಮುಡಿಯ ವರೆಗೆ ಔಷಧೀಯ ಗುಣಗಳನ್ನು ಹೊಂದಿರುವ ಅಶೋಕ ವೃಕ್ಷ ರಾಜ್ಯದಲ್ಲಿ ಅಳಿವಿನಂಚಿಗೆ ಸರಿಯುತ್ತಿದೆ. ಇಡೀ ರಾಜ್ಯದಲ್ಲಿ ಕೇವಲ 22 ಸಾವಿರ ಅಶೋಕ ವೃಕ್ಷಗಳು ಉಳಿದಿವೆ ಎಂಬುದು ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ (ಕೆಎಎಂಪಿಎ – ಕಂಪ) ನಡೆಸಿದ ಗಣತಿ­ಯಲ್ಲಿ ಪತ್ತೆಯಾಗಿದೆ.

ಔಷಧೀಯ ಅಂಶ ಹೊಂದಿರುವ ಸಸ್ಯ ಗಳಲ್ಲಿ ಅಗ್ರಸ್ಥಾನ ಪಡೆದಿರುವ ಅಶೋಕ ವೃಕ್ಷದ ಲಭ್ಯತೆಯ ಬಗ್ಗೆ ಅರಣ್ಯ ಇಲಾಖೆ ಬಳಿ ಸರಿಯಾದ ಮಾಹಿತಿ ಇರಲಿಲ್ಲ. ಅತ್ಯಮೂಲ್ಯ ಗುಣಗಳಿರುವ ಈ ವೃಕ್ಷ ಸಂತತಿಯ ರಕ್ಷಣೆಗೆ ಅರಣ್ಯ ಇಲಾಖೆ ಈವರೆಗೆ ಕೈಗೊಂಡ ಕಾರ್ಯ­ಕ್ರಮ­ಗಳ ಪ್ರಮಾಣವೂ ಸೀಮಿತ­ವಾಗಿತ್ತು. ವೈಜ್ಞಾ­ನಿಕ ವಿಧಾನದ ಮೂಲಕ ವೃಕ್ಷ ಗಣತಿ ನಡೆಸಿರುವ ‘ಕಂಪ’, ಅಶೋಕ ವೃಕ್ಷದ ಪ್ರಭೇದವೇ ರಾಜ್ಯದಿಂದ ಕಣ್ಮರೆ­ಯಾಗುವ ಹಂತ ತಲುಪಿದೆ ಎಂಬುದನ್ನು ಖಚಿತಪಡಿಸಿದೆ.

ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈಗ ಅಶೋಕ ವೃಕ್ಷಗಳು ಕಾಣಸಿಗುತ್ತಿವೆ. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇದು ಅತ್ಯಂತ ವಿರಳ. ಪಶ್ಚಿಮ ಘಟ್ಟದ ಎತ್ತರದ ಪ್ರದೇಶದಲ್ಲಿ ಹೆಚ್ಚು ಅಶೋಕ ಮರಗಳಿವೆ. ಬಹುತೇಕ ಕಡೆಗಳಲ್ಲಿ ಈ ವೃಕ್ಷ ಸಂತತಿ ಅಪಾಯದ ಅಂಚಿನಲ್ಲಿದೆ ಎಂದು ‘ಕಂಪ’ ಮುಖ್ಯ ಕಾರ್ಯ­ನಿರ್ವಾ­ಹಕ ಅಧಿಕಾರಿ ಡಾ.ಯು.ವಿ.­ಸಿಂಗ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಪಿಎಸ್‌ ಬಳಕೆ: ಈಗ ಇರುವ ಅಶೋಕ ವೃಕ್ಷಗಳ ಸಂಖ್ಯೆಯನ್ನು ಮಾತ್ರವಲ್ಲ, ಅವು ಇರುವ ಭೂ ಪ್ರದೇಶದ ಖಚಿತ ಮಾಹಿತಿಯನ್ನೂ ಗಣತಿಯಲ್ಲಿ ದಾಖಲು ಮಾಡಲಾಗಿದೆ. ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ (ಜಿಪಿಎಸ್‌) ತಂತ್ರಜ್ಞಾನ ಬಳಸಿ ಗಣತಿ ನಡೆಸಲಾಗಿದೆ. ಜಿಪಿಎಸ್‌ ಮೂಲಕ ಅಶೋಕ ವೃಕ್ಷಗಳಿರುವ ಸ್ಥಳದ ಅಕ್ಷಾಂಶ ಮತ್ತು ರೇಖಾಂಶದ ವಿವರಗಳು ಆ ಭೂಪ್ರದೇಶದ ನಕ್ಷೆಯಲ್ಲಿವೆ.

ಸದ್ಯಕ್ಕೆ ಅರಣ್ಯ ಇಲಾಖೆ ಮತ್ತು ಕಂಪ ಬಳಕೆಗಷ್ಟೇ ಈ ಮಾಹಿತಿ ಲಭ್ಯವಾಗಲಿದೆ ಎಂದು ಸಿಂಗ್‌ ಹೇಳಿದರು.

ಹೆಚ್ಚಿದ ಬೇಡಿಕೆ: ಆಯುರ್ವೇದ ಔಷಧಿಗಳ ತಯಾರಿ­ಕೆಗೆ ಅಶೋಕ ವೃಕ್ಷದ ಕಾಂಡ, ಹೂವು, ಬೀಜ ಮತ್ತಿತರ ಅಂಗಗಳನ್ನು ಬಳಕೆ ಮಾಡಲಾಗುತ್ತಿದೆ. ಕರ್ನಾಟಕ ಭಾರತೀಯ ವೈದ್ಯ ಪದ್ಧತಿ ಔಷಧಿ ತಯಾರಕರ ಸಂಘದ ಪ್ರಕಾರ, ರಾಜ್ಯದಲ್ಲಿ ವಾರ್ಷಿಕ 300 ಕ್ವಿಂಟಲ್‌ ಅಶೋಕ ವೃಕ್ಷದ ತೊಗಟೆ ಬಳಕೆ­ಯಾಗುತ್ತಿದೆ. ವೃಕ್ಷದ ತೊಗಟೆಗೆ ಪ್ರತಿ ಕೆ.ಜಿ.ಗೆ ₨ 150ರಿಂದ ₨ 300ರ ವ ರೆಗೂ ಬೆಲೆ ಇದೆ. ಹೀಗಾಗಿ ಕಳ್ಳ ಸಾಗಣೆಯೂ ಹೆಚ್ಚಿದೆ. ಈ ವೃಕ್ಷ ಸಂತತಿ ವಿನಾಶದ ಅಂಚಿಗೆ ತಲುಪಲು ಕಳ್ಳಸಾ­ಗಣೆ ಕೂಡ ಪ್ರಮುಖ ಕಾರಣ ಎನ್ನು­ತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT