ADVERTISEMENT

ಅಶ್ವಿನ್‌ ರಾವ್‌ ಬ್ಯಾಂಕ್‌ ಖಾತೆ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ಬೆಂಗಳೂರು: ಅನುಮಾನಾಸ್ಪದವಾಗಿ ಹಣ ವರ್ಗಾವಣೆ ಮಾಡಿದ ಆರೋಪದ ಅಡಿ ಲೋಕಾಯುಕ್ತ ವೈ. ಭಾಸ್ಕರ ರಾವ್ ಪುತ್ರ ಅಶ್ವಿನ್ ರಾವ್ ಅವರ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಈ ಖಾತೆಗಳಲ್ಲಿ ಒಟ್ಟು ₹ 4.9 ಕೋಟಿ ಅನುಮಾನಾಸ್ಪದವಾಗಿ ವರ್ಗಾವಣೆ ಆಗಿರುವುದನ್ನು ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪತ್ತೆ ಮಾಡಿತ್ತು.

ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಮೂರ್ತಿ ಅವರಿಂದ ಲೋಕಾಯುಕ್ತ ಕಚೇರಿಯಲ್ಲೇ ಲಂಚ ಕೇಳಲಾಯಿತು ಎಂಬ ಪ್ರಕರಣದ ಕುರಿತು ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿ ಇ.ಡಿ ಪ್ರಕರಣವೊಂದನ್ನು ದಾಖಲಿಸಿಕೊಂಡಿತ್ತು.

ಹೈದರಾಬಾದ್‌ನ ಕೊಟಕ್‌ ಮಹೀಂದ್ರ ಬ್ಯಾಂಕ್‌ ಶಾಖೆಯಲ್ಲಿ ಅಶ್ವಿನ್‌ ಅವರ ಹೆಸರಿನಲ್ಲಿರುವ ಖಾತೆಯಲ್ಲಿ ಈ ವರ್ಷದ ಜನವರಿ ನಂತರ ಅನುಮಾನಕ್ಕೆ ಆಸ್ಪದ ನೀಡುವಂತೆ ಹಣ ವರ್ಗಾವಣೆ ಆಗಿರುವುದು ಎಸ್‌ಐಟಿ ಗಮನಕ್ಕೆ ಬಂದಿತ್ತು.
ಹೈದರಾಬಾದ್‌ನ ಅಮೀರಪೇಟೆಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿ ಅಶ್ವಿನ್‌ ಹೆಸರಿನಲ್ಲಿ ಎರಡು ಖಾತೆಗಳು, ಜ್ಯುಬಿಲಿ ಹಿಲ್‌ ಶಾಖೆಯಲ್ಲಿ ಅಶ್ವಿನ್‌ ಪತ್ನಿ  ಶ್ರೀಲತಾ ಹೆಸರಿನಲ್ಲಿ ಎರಡು ಖಾತೆಗಳು ಮತ್ತು ಅಬಿಡ್ಸ್‌ ರಸ್ತೆಯ ಕೊಟಕ್ ಮಹೀಂದ್ರ ಬ್ಯಾಂಕ್‌ ಶಾಖೆಯಲ್ಲಿ ಅಶ್ವಿನ್–ಶ್ರೀಲತಾ ಹೆಸರಿನಲ್ಲಿ ಜಂಟಿ ಖಾತೆ ಇರುವುದನ್ನು ಎಸ್‌ಐಟಿ ಅಧಿಕಾರಿಗಳು ಕಂಡುಕೊಂಡಿದ್ದರು.

ಅಕ್ರಮ–ಸಕ್ರಮ:  ಹೈದರಾಬಾದ್‌ ಮೂಲದ ಮಹತಿ ಸಾಫ್ಟ್‌ವೇರ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ರಿತಾ ಕಮಾಡಿಟಿ ಪ್ರೈವೇಟ್ ಲಿಮಿಟೆಡ್, ಕೋಲ್ಕತ್ತ ಮೂಲದ ಎಕ್ಸೆಲ್‌ ವಾಣಿಜ್ಯ ಪ್ರೈವೇಟ್‌ ಲಿಮಿಟೆಡ್‌, ಇಂಟೆಲಿಜೆಂಟ್ ಪಿಚ್ ಕನ್ಸಲ್ಟೆನ್ಸಿ ಮತ್ತು ಕ್ವಾಲಿಟಿ ಆಗ್ರೊ ಪ್ರೊಡಕ್ಟ್‌ ಕಂಪೆನಿಗಳು ಅಶ್ವಿನ್‌ ಅವರ ಈ ಹಣ ಸಕ್ರಮಗೊಳಿಸುತ್ತಿದ್ದವು ಎಂದು ಮೂಲಗಳು ತಿಳಿಸಿವೆ.
‘ಮಹತಿ’ ಖಾತೆಯಲ್ಲಿ ₹ 90 ಲಕ್ಷ, ‘ಇಂಟೆಲಿಜೆಂಟ್‌ ಪಿಚ್‌’ನಲ್ಲಿ  ₹ 1 ಕೋಟಿ, ‘ರಿತಾ’ದಲ್ಲಿ ₹ 1 ಕೋಟಿ, ‘ಎಕ್ಸೆಲ್‌’ನಲ್ಲಿ ₹ 1.75 ಕೋಟಿ ಮತ್ತು ‘ಕ್ವಾಲಿಟಿ’ಯಲ್ಲಿ ₹ 25 ಲಕ್ಷವನ್ನು ಅಶ್ವಿನ್‌ ಕಡೆಯ ವ್ಯಕ್ತಿಗಳು ಜಮಾ ಮಾಡಿದ್ದರು. ಈ ಹಣ ನಂತರದ ದಿನಗಳಲ್ಲಿ ಅಶ್ವಿನ್ ಅವರ ಖಾತೆಗೆ ವರ್ಗಾವಣೆ ಆಗಿದೆ.

‘ಹಣವನ್ನು ಸಕ್ರಮಗೊಳಿಸಲು ಸಹಾಯ ಮಾಡಿರುವ ಈ ಕಂಪೆನಿಗಳ ಮೂಲ ಪತ್ತೆ ಮಾಡಬೇಕಿದೆ. ಹಣದ ವರ್ಗಾವಣೆ ಅಕ್ರಮವಾಗಿ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ, ಬ್ಯಾಂಕ್‌ ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಹಣ ಬಳಸಿ ನಿವೇಶನಗಳನ್ನು ಖರೀದಿಸಲಾಗಿದೆಯೇ ಎಂಬ ಬಗ್ಗೆ ಕೂಡ ತನಿಖೆ ನಡೆದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಾವಿರದಿಂದ ಲಕ್ಷ ಲಕ್ಷ ಹಣದ ವಹಿವಾಟು!
ಕೊಟಕ್‌ ಮಹೀಂದ್ರ ಬ್ಯಾಂಕಿನಲ್ಲಿ ಅಶ್ವಿನ್‌ ಅವರು ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ಹೊಂದಿದ್ದಾರೆ. ಇದರ ಮೂಲಕ ಅವರು ಕೋಟ್ಯಂತರ ರೂಪಾಯಿ ವಹಿವಾಟು ಮಾಡಿದ್ದಾರೆ. ಈ ಖಾತೆಯಲ್ಲಿ 2014ರ ಸೆಪ್ಟೆಂಬರ್‌ವರೆಗೆ ಕೇವಲ

₹ 7,441 ಇತ್ತು. ಈ ವರ್ಷದ ಜನವರಿ 16ರಂದು ಒಮ್ಮೆಗೆ ₹ 18 ಲಕ್ಷ, ಇನ್ನೊಮ್ಮೆ ₹ 7 ಲಕ್ಷ ಜಮಾ ಆಯಿತು.
ಇದಾದ ನಂತರ ಕೆಲವು ಕಂಪೆನಿಗಳು ಈ ಖಾತೆಗೆ ರಾಷ್ಟ್ರೀಯ ಎಲೆಕ್ಟ್ರಾನಿಕ್‌ ಹಣ ವರ್ಗಾವಣೆ (ಎನ್‌ಇಎಫ್‌ಟಿ) ಮತ್ತು ಆರ್‌ಟಿಜಿಎಸ್‌ ಮೂಲಕ ದೊಡ್ಡ ಮೊತ್ತದ ಹಣವನ್ನು ಜಮಾ ಮಾಡಿವೆ ಎಂದು ಮೂಲಗಳು ತಿಳಿಸಿವೆ.

ಇಲ್ಲಿ ಆಗಿರುವ ಹಣ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಇಬ್ಬರು ಚಾರ್ಟರ್ಡ್‌ ಅಕೌಂಟೆಂಟ್‌ಗಳ ಹೇಳಿಕೆ ಪಡೆದಿದ್ದಾರೆ. ಆದಾಯ ತೆರಿಗೆ ವಿವರ ಸಲ್ಲಿಸುವ ಸಂದರ್ಭದಲ್ಲಿ ಅಶ್ವಿನ್ ಅವರು ಇವರಿಬ್ಬರನ್ನು ಸಂಪರ್ಕಿಸಿದ್ದರು.
‘ಹಣದ ಮೂಲ ಯಾವುದು ಎಂಬುದನ್ನು ವಿವರಿಸುವುದು ತುಸು ಕಷ್ಟ. ಈ ಸಮಸ್ಯೆ ಪರಿಹರಿಸುವುದು ಹೇಗೆ’ ಎಂಬ ಬಗ್ಗೆ ಸಲಹೆ ನೀಡುವಂತೆ ಅಶ್ವಿನ್ ಅವರು ತಮ್ಮನ್ನು ಸಂಪರ್ಕಿಸಿದ್ದರು ಎಂದು ಚಾರ್ಟರ್ಡ್‌ ಅಕೌಂಟೆಂಟ್‌ ಬಿ.ಎನ್. ಶಿರೀಶ ಅವರು ಹೇಳಿಕೆ ನೀಡಿದ್ದರು.

‘ಅಶ್ವಿನ್ ಅವರು ಪ್ರಭಾವಿ ವ್ಯಕ್ತಿ. ಅವರ ತಂದೆ (ಭಾಸ್ಕರ ರಾವ್) ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿದ್ದವರು. ನಾನು ಅಶ್ವಿನ್ ಅವರ ಮಾತು ನಂಬಿದೆ. ಮೂಲ ಯಾವುದು ಎಂಬುದನ್ನು ವಿವರಿಸಲು ಕಷ್ಟವಿರುವ ₹ 4.9 ಕೋಟಿಯನ್ನು ಸಕ್ರಮ ಹಣವನ್ನಾಗಿ ಪರಿವರ್ತಿಸಲು ನಾನು ಸಹಾಯ ಮಾಡಿದೆ’ ಎಂದು ಶಿರೀಶ್ ಅವರು ಹೇಳಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.