ADVERTISEMENT

‘ಅಸ್ಪೃಶ್ಯತೆ ತೊಲಗದೆ ಸುಧಾರಣೆ ಅಸಾಧ್ಯ’

ಮಂಗಳೂರು ವಿ.ವಿ: ನಾರಾಯಣಗುರು ಪೀಠ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:46 IST
Last Updated 19 ಜನವರಿ 2017, 19:46 IST
ಮಂಗಳೂರು ವಿವಿಯಲ್ಲಿ ನಾರಾಯಣ ಗುರು ಅಧ್ಯಯನ ಪೀಠವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಿದರು. ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ, ಸಚಿವ ಬಿ. ರಮಾನಾಥ ರೈ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಶಾಸಕ ವಿನಯಕುಮಾರ್‌ ಸೊರಕೆ, ಸಾಹಿತಿ ಬರಗೂರು ರಾಮಚಂದ್ರಪ್ಪ, ಕುಲಪತಿ ಡಾ. ಕೆ. ಭೈರಪ್ಪ ಚಿತ್ರದಲ್ಲಿದ್ದಾರೆ     –ಪ್ರಜಾವಾಣಿ ಚಿತ್ರ
ಮಂಗಳೂರು ವಿವಿಯಲ್ಲಿ ನಾರಾಯಣ ಗುರು ಅಧ್ಯಯನ ಪೀಠವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಿದರು. ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ, ಸಚಿವ ಬಿ. ರಮಾನಾಥ ರೈ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಶಾಸಕ ವಿನಯಕುಮಾರ್‌ ಸೊರಕೆ, ಸಾಹಿತಿ ಬರಗೂರು ರಾಮಚಂದ್ರಪ್ಪ, ಕುಲಪತಿ ಡಾ. ಕೆ. ಭೈರಪ್ಪ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಮುಡಿಪು: ‘ಅಸ್ಪೃಶ್ಯತೆ ಎಂಬುದು ಒಂದು ಮನೋರೋಗ. ಇದನ್ನು ನಾವೇ ಸೃಷ್ಟಿ ಮಾಡಿದ್ದು. ಚಿಕಿತ್ಸೆ ಮಾಡದೆ ಈ ಮನೋರೋಗವನ್ನು ದೂರಮಾಡಲು ಸಾಧ್ಯವಿಲ್ಲ.ಮಾತ್ರವಲ್ಲ ಸಮಾಜದ ಅಭಿವೃದ್ಧಿಯೂ ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಹಾಗೂ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬ್ರಹ್ಮಶ್ರೀ ನಾರಾಯಣ ಗುರು ಅವರೊಬ್ಬ ಸಮಾಜ ಸುಧಾರಕ ಹಾಗೂ ದಾರ್ಶನಿಕ. ಅವರು ಜಾತಿ ವ್ಯವಸ್ಥೆಯ ಕರಾಳ ಸ್ವರೂಪವನ್ನು ನೋಡಿದವರು ಮತ್ತು ಸ್ವತಃ ಅನುಭವಿಸಿದವರು.

ಅಂದಿನ ಕಾಲದಲ್ಲಿ ಶೂದ್ರರು ದೇವಸ್ಥಾನದ ರಸ್ತೆಗಳಲ್ಲಿಯೇ ಹೋಗಲು ಅವಕಾಶ ಇರಲಿಲ್ಲ, ಅಲ್ಲದೆ ಸವರ್ಣೀಯರು ಬಂದಾಗ ಅವರ ಎದುರಲ್ಲಿ ಶೂದ್ರರಿಗೆ ನಿಲ್ಲಲು ಅವಕಾಶವಿರಲಿಲ್ಲ. ಹೀಗೆ ಅತ್ಯಂತ ಕೆಟ್ಟ ಸಂಪ್ರದಾಯ, ವ್ಯವಸ್ಥೆಗಳಿದ್ದಾಗ ನಾರಾಯಣ ಗುರು ಅವರು ಯಾವುದೇ ಕ್ರಾಂತಿಕಾರಕ ಹೋರಾಟಕ್ಕೆ ಇಳಿಯದೆ ಸೌಮ್ಯವಾಗಿಯೇ ಸಮಾಜದಲ್ಲಿ ಸುಧಾರಣೆ ತರಲು ಯತ್ನಿಸಿದರು. ಇಂತಹ ಮಹಾನ್ ವ್ಯಕ್ತಿಯ ಅಧ್ಯಯನ ಪೀಠ ಸ್ಥಾಪನೆಯಾಗಿರುವುದು ಸಂತಸ ತಂದಿದೆ’ ಎಂದರು.

ಮಾಡ್ಯುಲರ್ ಪ್ರಯೋಗಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು, ‘ಬೋಧನೆ, ಶಿಸ್ತಿನೊಂದಿಗೆ ಅತ್ಯಂತ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಮಂಗಳೂರು ವಿಶ್ವವಿದ್ಯಾಲಯವು ರಾಜ್ಯ ವಿಶ್ವವಿದ್ಯಾಲಯಗಳ ಪೈಕಿ ನಂಬರ್ ಒನ್ ಆಗಿದೆ’ ಎಂದರು.

ಪ್ರಸಾರಾಂಗದ ರಜತ ಗ್ರಂಥ ಸರಣಿಯ 19 ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು, ‘ಇಂದು  ವಿವಿಗಳಲ್ಲಿ ಬಹಳಷ್ಟು ಅಧ್ಯಯನ ಪೀಠಗಳಿವೆ. ಹೆಚ್ಚಿನ ಪೀಠಗಳು ಬಡ್ಡಿಯ ಹಣದಿಂದಲೇ ನಡೆಯುವುದರಿಂದ ಬಡ್ಡಿ ಪೀಠಗಳಾಗಿ ಕೆಲಸ ಮಾಡುತ್ತಿದ್ದು, ಅದನ್ನು ಅಸಲು ಪೀಠಗಳನ್ನಾಗಿ ಪರಿವರ್ತಿಸಬೇಕು. ಅಲ್ಲದೆ ಸಾಂಕೇತಿಕ ಪೀಠಗಳಾಗದೆ ಸಾರ್ಥಕ ಪೀಠಗಳಾದರೆ ಅದಕ್ಕೊಂದು ರೂಪು ಬರುತ್ತದೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.