ADVERTISEMENT

ಆಕರ ಕೋಶಗಳಿಂದ ಮೂಳೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 19:30 IST
Last Updated 26 ಡಿಸೆಂಬರ್ 2017, 19:30 IST
ಸೋಮವಾರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಡಾ. ಎ.ಎ ಶೆಟ್ಟಿ ಮತ್ತು ಡಾ. ಎಸ್.ಜೆ.ಕಿಮ್ ಅವರು, ಮೂಳೆ ಚಿಕಿತ್ಸೆಗೆ ಸಂಬಂಧಿಸಿದ ಸಂಶೋಧನೆಯನ್ನು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಹಸ್ತಾಂತರಿಸಿದರು.
ಸೋಮವಾರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಡಾ. ಎ.ಎ ಶೆಟ್ಟಿ ಮತ್ತು ಡಾ. ಎಸ್.ಜೆ.ಕಿಮ್ ಅವರು, ಮೂಳೆ ಚಿಕಿತ್ಸೆಗೆ ಸಂಬಂಧಿಸಿದ ಸಂಶೋಧನೆಯನ್ನು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಹಸ್ತಾಂತರಿಸಿದರು.   

ಉಜಿರೆ: ಮೂಳೆಗೆ ಸಂಬಂಧಿಸಿದ ಕಾಯಿಲೆಗಳಿಗೆ ತ್ವರಿತ ಹಾಗೂ ಕಡಿಮೆ ವೆಚ್ಚದ ನೂತನ ಚಿಕಿತ್ಸಾ ವಿಧಾನ ಇದೀಗ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಲಭ್ಯವಾಗಲಿದೆ. ಸದ್ಯ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸಾ ತಜ್ಞರಾಗಿರುವ ಕುಂದಾಪುರದ ಡಾ.ಎ.ಎ. ಶೆಟ್ಟಿ ಅವರು ತಮ್ಮ ಸಂಶೋಧನೆಯನ್ನು ಜನರ ಸೇವೆಗಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ಅರ್ಪಿಸಿದ್ದಾರೆ.

ಸಹ ಸಂಶೋಧಕ ದಕ್ಷಿಣ ಕೊರಿಯಾದ ಡಾ. ಎಸ್.ಜೆ.ಕಿಮ್ ಅವರೊಂದಿಗೆ ಸೋಮವಾರ ಧರ್ಮಸ್ಥಳಕ್ಕೆ ಬಂದಿದ್ದ ಡಾ.ಎ.ಎ. ಶೆಟ್ಟಿ, ಧರ್ಮಾ
ಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ತಮ್ಮ ಸಂಶೋಧನೆಯನ್ನು ಹಸ್ತಾಂತರಿಸಿದರು.

‘ಮೊಣಕಾಲಿನ ಕೀಲು ನೋವು, ಕಾಲು ನೋವು, ಮೂಳೆ ಮುರಿತಕ್ಕೊಳಗಾದ ಸಂದರ್ಭದಲ್ಲಿ ಆಕರ ಜೀವಕೋಶ (ಸ್ಟೆಮ್ ಸೆಲ್) ಚಿಕಿತ್ಸೆ ನೀಡುವ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸಿದ್ದು, ಇದರಿಂದಾಗಿ ಮೂಳೆ ತುಂಡಾದಾಗ ಲೋಹದ ಮೂಳೆ ಅಳವಡಿಸುವ ಅಗತ್ಯವಿಲ್ಲ’ ಎಂದು ಡಾ.ಎ.ಎ. ಶೆಟ್ಟಿ ತಿಳಿಸಿದ್ದಾರೆ.

ADVERTISEMENT

ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಶೆಟ್ಟಿ, ಆಕರ ಕೋಶಗಳನ್ನು ದೇಹಕ್ಕೆ ಸೇರಿಸುವ ಮೂಲಕ ಬಾಹ್ಯ ವಸ್ತುಗಳಿಲ್ಲದೇ, ಮೂಳೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವಿಧಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಡಾ. ಶೆಟ್ಟಿ ಹೇಳುವ ಪ್ರಕಾರ ‘ಚಿಕಿತ್ಸೆ ಅಗತ್ಯವಿರುವ ವ್ಯಕ್ತಿಯ ಮೂಳೆಯ ಆಕರ ಜೀವಕೋಶಗಳನ್ನು ತೆಗೆದು, ಪ್ರಯೋಗಾಲಯದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ನಂತರ ಅವುಗಳನ್ನು ಮರಳಿ ದೇಹಕ್ಕೆ ಸೇರಿಸಲಾಗುತ್ತದೆ. ಆಗ ಬದಲಿ ಮೂಳೆ ಅಳವಡಿಸುವ ಅಗತ್ಯವಿಲ್ಲ. ಎಲುಬಿನ ಆಕರ ಕೋಶಗಳೇ ಅಭಿವೃದ್ಧಿ ಹೊಂದಿ, ಮೂಳೆ ತಾನಾಗಿ ಜೋಡಣೆಯಾಗುತ್ತದೆ’.

ತಮ್ಮ ಚಿಕಿತ್ಸಾ ಸಂಶೋಧನೆಗೆ 2016 ರಲ್ಲಿ ಇಂಗ್ಲೆಂಡ್ ಸರ್ಕಾರ ಮಾನ್ಯತೆ ಹಾಗೂ ಪೇಟೆಂಟ್ ನೀಡಿದೆ. ಡಾ. ಶೆಟ್ಟಿ ಅವರು, ಧರ್ಮಸ್ಥಳದ ಭಕ್ತರಾಗಿದ್ದು, ನೂತನ ಚಿಕಿತ್ಸಾ ತಂತ್ರಜ್ಞಾನವನ್ನು ಸೇವೆಗಾಗಿ ಧರ್ಮಸ್ಥಳಕ್ಕೆ ಅರ್ಪಿಸಿದ್ದಾರೆ.

ಧಾರವಾಡದ ಎಸ್‌ಡಿಎಂ ಆಸ್ಪತ್ರೆಯ ಡಾ. ಸುಘೋಷ್ ಕುಲಕರ್ಣಿ, ಡಾ.ಮಲ್ಲಿಕಾರ್ಜುನ ಮತ್ತು ಡಾ. ವೇಣು ಶರ್ಮಾ ಈ ಸಂದರ್ಭದಲ್ಲಿ ಹಾಜರಿದ್ದರು.

ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ

ಎಸ್‌ಡಿಎಂ ಆಸ್ಪತ್ರೆಯ ಮೂವರು ವೈದ್ಯರಿಗೆ ತರಬೇತಿ

ಸಂಶೋಧನೆಗೆ 2016 ರಲ್ಲಿ ಪೇಟೆಂಟ್‌ ಪಡೆದಿರುವ ಡಾ. ಶೆಟ್ಟಿ

ಆಕರ ಜೀವಕೋಶ ಚಿಕಿತ್ಸಾ ತಂತ್ರಜ್ಞಾನದಿಂದ ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಬಹುದಾಗಿದೆ.

–ಡಾ.ಎ.ಎ. ಶೆಟ್ಟಿ, ಶಸ್ತ್ರ ಚಿಕಿತ್ಸಾ ತಜ್ಞ

ಇದೊಂದು ಮಹತ್ತರ ಕ್ಷಣವಾಗಿದ್ದು, ಈ ನೂತನ ಚಿಕಿತ್ಸೆಯು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ದೊರೆಯಲಿದೆ

–ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.