ADVERTISEMENT

ಆನೆಗಳಿದ್ದಲ್ಲಿ ಮಾನವ ಚಟುವಟಿಕೆ ಹೆಚ್ಚು

ವನ್ಯಜೀವಿ ಸಂರಕ್ಷಣಾ ಸೊಸೈಟಿ ಸಂಶೋಧನೆಯಿಂದ ಬಹಿರಂಗ

​ಪ್ರಜಾವಾಣಿ ವಾರ್ತೆ
Published 25 ಜುಲೈ 2015, 20:16 IST
Last Updated 25 ಜುಲೈ 2015, 20:16 IST

ಬೆಂಗಳೂರು: ‘ಏಷ್ಯಾದ ಆನೆಗಳಿಗೆ ಕಡೆಯದಾಗಿ ಉಳಿದುಕೊಂಡಿರುವ ಗಟ್ಟಿ ನೆಲೆ ಪಶ್ಚಿಮ ಘಟ್ಟ. ಈ ಭೂಪ್ರದೇಶದ ಬಹುಭಾಗದಲ್ಲಿ ಮಾನವ ಚಟುವಟಿಕೆಗಳು ಹೆಚ್ಚಾಗಿವೆ’ ಎಂಬ ಅಂಶ ವನ್ಯಜೀವಿ ಸಂರಕ್ಷಣಾ ಸೊಸೈಟಿಯ (ಡಬ್ಲುಸಿಎಸ್ ಸೈನ್ಸ್) ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಮಲೆನಾಡು ಭೂ ಪ್ರದೇಶದ 38 ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಸಂಶೋಧನೆ ನಡೆಸಲಾಯಿತು. ಕ್ಷೇತ್ರ ಹಾಗೂ ವಿಶ್ಲೇಷಣಾತ್ಮಕ ವಿಧಾನ ಒಳಗೊಂಡ ‘ಇರುವಿಕೆ ಮಾದರಿ’ ಅನುಸರಿಸಿ ಡಬ್ಲುಸಿಎಸ್ ವಿಜ್ಞಾನಿಗಳು ಆನೆಗಳ ಸಂಖ್ಯೆ ಹಂಚಿಕೆಯಾಗಿರುವುದನ್ನು ಗುರುತಿಸಿದ್ದಾರೆ. ಈ ಅಧ್ಯಯನವು ಬಹುಮುಖ್ಯವಾಗಿ ಹುಲಿಯನ್ನು ಹಾಗೂ ಈ ಭಾಗದಲ್ಲಿ ದೊರೆಯುವ ಅದರ ಬೇಟೆ ಪ್ರಾಣಿಗಳನ್ನು ಗುರುತಿಸುವುದಾಗಿತ್ತು. ಇದಕ್ಕೆ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗ ನೀಡಿದೆ.

‘ದೇಶದಲ್ಲಿ ಆನೆಗಳ ಸಂಖ್ಯೆಗೆ ಸಂಬಂಧಿಸಿದಂತೆ ವಿಶ್ವಾಸಾರ್ಹವೆನಿಸುವ ಸ್ವಲ್ಪ ಮಾಹಿತಿ ಲಭ್ಯವಿದೆ. ಭೂ ಪ್ರದೇಶದ ಆಧಾರದಲ್ಲಿ ಹಂಚಿಕೆಯಾಗಿರುವ ಅಥವಾ ಸಂಖ್ಯೆಯ ಬಗ್ಗೆ ನಿಖರವಾದ ಮಾಹಿತಿ ಇಲ್ಲದೆ ಪರಿಣಾಮಕಾರಿಯಾಗಿ  ಆನೆಯ ಸಂರಕ್ಷಣೆ ಮಾಡುವುದಾಗಲೀ, ಮಾನವ ಸಂಘರ್ಷ, ಬೇಟೆಯಿಂದ ಕ್ಷೀಣಿಸುತ್ತಿರುವ ಅವುಗಳ ಸಂತತಿಯನ್ನು ಉಳಿಸುವುದು ಅಸಾಧ್ಯ’ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

‘ಆನೆಗಳ ಸಂಖ್ಯೆ ತಿಳಿಯಲು ಹಲವು ವಿಧಾನಗಳಿವೆ. ಅದರಲ್ಲಿ ‘ಇರುವಿಕೆ’  ವಿಧಾನ ಹೊರತುಪಡಿಸಿ ಉಳಿದವು ಸೂಕ್ತ ಕ್ರಮ ಅಲ್ಲ. ಇರುವಿಕೆ ವಿಧಾನ ದೊಡ್ಡ ಭೂಪ್ರದೇಶಗಳಿಗೆ ಸಲೀಸಾಗಿ ಹೊಂದಿಕೆಯಾಗುತ್ತದೆ. ಜತೆಗೆ ಈ ಮಾಹಿತಿಯನ್ನು ನಂಬಬಹುದು’ ಎಂದು ಸಂಶೋಧನಾ ಪ್ರಬಂಧದ ಸಹ ಲೇಖಕರೂ ಆಗಿರುವ ಡಬ್ಲ್ಯುಸಿಎಸ್ ಸೈನ್ಸ್-ಏಷ್ಯಾ ನಿರ್ದೇಶಕ ಡಾ.ಕೆ.ಉಲ್ಲಾಸ ಕಾರಂತ ಅಭಿಪ್ರಾಯಪಡುತ್ತಾರೆ.

‘ದೇಶದ ಉಳಿದ ಭಾಗದಲ್ಲಿ ಈ ವಿಧಾನ ಅನುಸರಿಸುವ ತುಡಿತ ಇದೆ. ಏಷ್ಯಾ ಆನೆಗಳು ಸೇರಿದಂತೆ ಅವನತಿಯತ್ತ ಸಾಗುತ್ತಿರುವ ವನ್ಯ ಜೀವಿಗಳು, ಅವುಗಳ ಸ್ಥಿತಿ ಹಾಗೂ ಭೌಗೋಳಿಕ ಹಂಚಿಕೆ ಬಗ್ಗೆ ತಿಳಿವಳಿಕೆ ಹೆಚ್ಚಿಸಿಕೊಳ್ಳುವುದಕ್ಕೆ ಈ ತಂತ್ರಗಳು ಸಹಕಾರಿ’ ಎನ್ನುತ್ತಾರೆ. ‘ಪರಿಸರದ ಲಕ್ಷಣಗಳಿಗಿಂತ ಮನುಷ್ಯರ ಇರುವಿಕೆಯೇ ಆನೆಗಳು ಇರುವುದನ್ನು ಗುರುತಿಸಲು ಮುಖ್ಯ ಅಂಶ’ ಎನ್ನುತ್ತಾರೆ  ಅಧ್ಯಯನದ ಮುಖ್ಯ ಲೇಖಕ ದೇವಚರಣ್ ಜತ್ತಣ್ಣ.

21 ಸಾವಿರ ಚದರ ಕಿ.ಮೀ.ನಷ್ಟಿರುವ ಅವುಗಳ ಆವಾಸಸ್ಥಾನವನ್ನು ಉಳಿಸಿಕೊಳ್ಳಲು ಅನುಸರಿಸಬೇಕಾದ ಕಠಿಣ ನಿಯಮಗಳ ಬಗ್ಗೆ ಸಂಶೋಧನಾ ತಂಡ ಬೆಳಕು ಚೆಲ್ಲಿದೆ. ಈ ಸಂಶೋಧನೆಯು ಆನೆಗಳ ಸಂಖ್ಯೆ ಹಂಚಿಕೆ ಅಧ್ಯಯನಕ್ಕೆ ವಿಶ್ವಾಸಾರ್ಹ ಶಿಷ್ಟಾಚಾರ ರೂಪಿಸುತ್ತದೆ. ಆಯಾ ವ್ಯಾಪ್ತಿಯಲ್ಲಿ ಆನೆಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡ ಸರ್ಕಾರಿ, ಸ್ವಯಂಸೇವಾ ಸಂಸ್ಥೆಗಳು ಈ ವಿಧಾನವನ್ನು ಅನುಸರಿಸಬಹುದು ಎಂದು ಅವರು ಸಲಹೆ ನೀಡುತ್ತಾರೆ.

ಡಬ್ಲುಸಿಎಸ್‌ನ  ಡಾ.ಎನ್. ಸಾಂಬಕುಮಾರ್, ಡಾ.ಕೃತಿ ಕೆ.ಕಾರಂತ್ ಹಾಗೂ ಡಾ.ವರುಣ್ ಆರ್.ಗೋಸ್ವಾಮಿ ಅವರನ್ನು ಒಳಗೊಂಡ ಈ ಅಧ್ಯಯನದ ವಿವರ ಅಂತರರಾಷ್ಟ್ರೀಯ ವೈಜ್ಞಾನಿಕ ಪತ್ರಿಕೆ ‘ಪಿಎಲ್ಒಎಸ್ ಒನ್’ ನಲ್ಲಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.