ADVERTISEMENT

ಆರ್ಡರ್ಲಿ ಬದಲು ‘ಅನುಯಾಯಿ’

ಗೃಹ ಇಲಾಖೆ ಆದೇಶ

ಸಂತೋಷ ಜಿಗಳಿಕೊಪ್ಪ
Published 9 ಮಾರ್ಚ್ 2017, 19:30 IST
Last Updated 9 ಮಾರ್ಚ್ 2017, 19:30 IST
ಆರ್ಡರ್ಲಿ ಬದಲು ‘ಅನುಯಾಯಿ’
ಆರ್ಡರ್ಲಿ ಬದಲು ‘ಅನುಯಾಯಿ’   

ಬೆಂಗಳೂರು: ಪೊಲೀಸ್‌ ಇಲಾಖೆಯಲ್ಲಿ ಚಾಲ್ತಿಯಲ್ಲಿದ್ದ ಆರ್ಡರ್ಲಿ ವ್ಯವಸ್ಥೆಯನ್ನು ಪರಿಷ್ಕರಿಸಿ ಅಧಿಕೃತ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು ‘ಆರ್ಡರ್ಲಿ’ಗಳ ಜಾಗದಲ್ಲಿ ‘ಅನುಯಾಯಿ’ಗಳ ನೇಮಕಕ್ಕೆ ಒಪ್ಪಿಗೆ ನೀಡಿದೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಸಲ್ಲಿಸಿದ್ದ ಪ್ರಸ್ತಾವವನ್ನು ಪರಿಶೀಲಿಸಿದ ಗೃಹ ಇಲಾಖೆಯು ಮಾರ್ಚ್‌ 8ರಂದು ಆದೇಶ ಹೊರಡಿಸಿದೆ.
ಆರ್ಡರ್ಲಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದ ಪೊಲೀಸ್‌ ಅಧಿಕಾರಿಗಳು ಹೊಸ ಆದೇಶದಂತೆ ಇನ್ನು ಮುಂದೆ ಅನುಯಾಯಿಗಳನ್ನು ಮಾತ್ರ ನೇಮಿಸುವ ಅಧಿಕಾರ ಹೊಂದಲಿದ್ದಾರೆ.

ಆರ್ಡರ್ಲಿಗಳಾಗಿದ್ದ  ಕಾನ್‌ಸ್ಟೆಬಲ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ಗಳು,  ಆಯಾ ಅಧಿಕಾರಿಗಳ ಕಚೇರಿಯ ಸಹಾಯಕರಾಗಿ ಹಾಗೂ ಇಲಾಖೆಯ ಕೆಲಸಕ್ಕೆ ನಿಯೋಜನೆಗೊಳ್ಳಲಿದ್ದಾರೆ.

ಡಿಜಿಪಿ ಸಲ್ಲಿಸಿದ್ದ ಪ್ರಸ್ತಾವದಲ್ಲಿ ಇದ್ದದ್ದು: ಕರ್ನಾಟಕ ಪೊಲೀಸ್‌ ಮ್ಯಾನುವಲ್‌ ಆದೇಶ ಸಂಖ್ಯೆ–862 ರನ್ವಯ ಪೊಲೀಸ್‌ ಅಧಿಕಾರಿಗಳ ದರ್ಜೆಗೆ ಅನುಸಾರ ಆರ್ಡರ್ಲಿಗಳನ್ನು ನಿಯೋಜಿಸಲು ಅವಕಾಶವಿದ್ದು, ಈ ವ್ಯವಸ್ಥೆಯನ್ನು ಪರಿಷ್ಕರಣೆ ಮಾಡುವಂತೆ ಕೋರಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು (ಡಿಜಿಪಿ)  ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

‘ಆರ್ಡರ್ಲಿ ವ್ಯವಸ್ಥೆಯಿಂದಾಗಿ  ಕಾನ್‌ಸ್ಟೆಬಲ್‌ಗಳಿಗೆ ಗಾರ್ಡ್‌ ಸೆಂಟ್ರಿ, ಗಣ್ಯ ವ್ಯಕ್ತಿಗಳ ಭದ್ರತೆ, ಚುನಾವಣಾ ಕರ್ತವ್ಯ, ವಿಶೇಷ ಗಸ್ತು, ಡಕಾಯಿತಿ ಪ್ರತಿಬಂಧಕ ಕಾರ್ಯಾಚರಣೆ ಹಾಗೂ ನೈಸರ್ಗಿಕ ವಿಕೋಪ ಕಾರ್ಯಾಚರಣೆ ಬಗ್ಗೆ ನೀಡಿದ್ದ  ತರಬೇತಿ ವ್ಯರ್ಥವಾಗುತ್ತಿದೆ. ಬೆಂಗಳೂರಿನಲ್ಲೇ 1,239 ಆರ್ಡರ್ಲಿಗಳಿದ್ದು ಅವರ ಸೇವೆ  ಇಲಾಖೆಗೆ ದೊರೆಯದಿದ್ದರಿಂದ ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿ ನಿಯಂತ್ರಣ ವಿಳಂಬವಾಗುತ್ತಿದೆ’ ಎಂದು ಪ್ರಸ್ತಾವದಲ್ಲಿ ಹೇಳಲಾಗಿತ್ತು.

‘ಸದ್ಯ ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) ಹಾಗೂ ತರಬೇತಿ ಘಟಕಗಳಲ್ಲಿ  ಸ್ವೀಪರ್‌, ಜವಾನ, ಕ್ಷೌರಿಕ, ಲ್ಯಾಬ್‌ ಅಸಿಸ್ಟೆಂಟ್‌ ಸೇರಿ ಹಲವು ಹುದ್ದೆಗಳಿಗೆ ಅನುಯಾಯಿಗಳನ್ನು  ನೇಮಕ ಮಾಡಿಕೊಳ್ಳಲಾಗಿದೆ. ಆ ಘಟಕದ ಅಧಿಕಾರಿಗಳು ಆಯ್ದ ಅನುಯಾಯಿಗಳನ್ನೇ ಸಹಾಯಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ.’

‘ಅದೇ ಮಾದರಿಯಲ್ಲಿ ಇಲಾಖೆಯ ಉಳಿದ ಅಧಿಕಾರಿಗಳಿಗೆ ಅನುಯಾಯಿಗಳನ್ನು ನೇಮಕ ಮಾಡಿಕೊಂಡರೆ ವೆಚ್ಚವೂ ಕಡಿಮೆಯಾಗಲಿದೆ’ ಎಂದು ಅಭಿಪ್ರಾಯಪಡಲಾಗಿತ್ತು.

‘ಆರ್ಡರ್ಲಿಗಳಿಗೆ ನೀಡುತ್ತಿದ್ದ ವೇತನ ಹಾಗೂ ವೇತನೇತರ ಸೌಲಭ್ಯಗಳು ವೆಚ್ಚದಾಯಕವಾಗಿದೆ. ಹೀಗಾಗಿ ಆರ್ಡರ್ಲಿಗಳನ್ನು ಇಲಾಖೆಯ ಸೇವೆಗೆ ಬಳಸಿಕೊಂಡು ಆ ಜಾಗದಲ್ಲಿ  ಅನುಯಾಯಿಗಳನ್ನು ನೇಮಿಸಿಕೊಳ್ಳಲು ಒಪ್ಪಿಗೆ ನೀಡಬೇಕು’ ಎಂದು ಕೋರಲಾಗಿತ್ತು.



ಅನುಯಾಯಿಗಳ ನೇಮಕ ಹೇಗೆ?: ಆರ್ಡರ್ಲಿ ವ್ಯವಸ್ಥೆ ರದ್ದು ಮಾಡಿರುವುದರಿಂದ ಅವರ ಜಾಗಕ್ಕೆ ಅನುಯಾಯಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಧಿಕಾರಿಗಳಿಗೆ ಭತ್ಯೆಯನ್ನು ನೀಡಲು ನಿರ್ಧರಿಸಲಾಗಿದೆ.

ಈ ಹಿಂದೆ ‘ಆರ್ಡರ್ಲಿ’ಗಳಾಗಿದ್ದವರು  ಅವರ ಮೂಲ ಹುದ್ದೆಗೆ ನಿಗದಿಪಡಿಸಿದ್ದ ₹18ರಿಂದ ₹40 ಸಾವಿರದವರೆಗೆ  (ಪ್ರತಿ ತಿಂಗಳು) ವೇತನ ಪಡೆಯುತ್ತಿದ್ದರು. ಈಗ ಅನುಯಾಯಿಗಳು, ಅಧಿಕಾರಿಗಳಿಗೆ ನೀಡುವ ಭತ್ಯೆಯನ್ನೇ ತಮ್ಮ ವೇತನವನ್ನಾಗಿ ಪಡೆದು ಕೆಲಸ ಮಾಡಬೇಕಿದೆ.

ಅನುಯಾಯಿಗಳಿಗೆ ನೀಡಲು ನಿಗದಿಪಡಿಸಿರುವ ₹2ರಿಂದ ₹8 ಸಾವಿರ ಭತ್ಯೆಯನ್ನು (ಪ್ರತಿ ತಿಂಗಳು) ಆಯಾ ಅಧಿಕಾರಿಗಳ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತದೆ. ಆ ಭತ್ಯೆಯಲ್ಲೇ ಅಧಿಕಾರಿಗಳು ತಮ್ಮ ಸಹಾಯಕರನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬಹುದು. 
ಡಿವೈಎಸ್ಪಿ, ಇನ್‌ಸ್ಟೆಕ್ಟರ್‌ಗೂ ಸೌಲಭ್ಯ: ಸದ್ಯ ಡಿವೈಎಸ್ಪಿ, ಡೆಪ್ಯುಟಿ ಕಮಾಂಡೆಂಟ್‌, ಸಹಾಯಕ ಕಮಾಂಡೆಂಟ್‌, ಇನ್‌ಸ್ಪೆಕ್ಟರ್‌ ಹಾಗೂ ರಿಸರ್ವ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರಿಗೆ ಆರ್ಡಲಿಗಳು ಇರಲಿಲ್ಲ. ಹೊಸ ಆದೇಶದನ್ವಯ ಅವರಿಗೆ ಅನುಯಾಯಿಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಶೇ 50ರಷ್ಟು ಕಡಿತ: ‘ಚಾಲ್ತಿಯಲ್ಲಿದ್ದ ಆರ್ಡರ್ಲಿ ವ್ಯವಸ್ಥೆ ಪರಿಷ್ಕರಿಸಿ ಆ ಹುದ್ದೆಗಳ ಸಂಖ್ಯೆಯಲ್ಲಿ ಶೇ 50ರಷ್ಟು ಕಡಿತ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆ ಜಾಗದಲ್ಲಿ ಅನುಯಾಯಿಗಳನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ. ಆ ಅನುಯಾಯಿಗಳನ್ನು ಯಾವ ರೀತಿ ನೇಮಕ ಮಾಡಿಕೊಳ್ಳಬೇಕು ಎಂಬುದನ್ನು ಸದ್ಯದಲ್ಲೇ ನಿರ್ಧರಿಸುತ್ತೇವೆ’ ಎಂದು ಡಿಜಿಪಿ ಆರ್‌.ಕೆ.ದತ್ತ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲಸ ಒಂದೇ; ಹೆಸರು ಬೇರೆ: ‘ಒಂದೆಡೆ ಆರ್ಡರ್ಲಿ ವ್ಯವಸ್ಥೆ ರದ್ದುಪಡಿಸಿರುವ ಸರ್ಕಾರ, ಇನ್ನೊಂದೆಡೆ ಅನುಯಾಯಿ ಮೂಲಕ ಆ ಕೆಲಸವನ್ನು ಮಾಡಿಸಲು ಮುಂದಾಗಿದೆ’ ಎಂದು ಆರ್ಡರ್ಲಿ ಆಗಿದ್ದ ಕಾನ್‌ಸ್ಟೆಬಲೊಬ್ಬರು ಹೇಳಿದರು.

‘ಹೊಸದಾಗಿ ಅನುಯಾಯಿಗಳನ್ನು ನೇಮಕ ಮಾಡಿಕೊಳ್ಳಲಿರುವ ಅಧಿಕಾರಿಗಳು, ಅವರಿಂದ ತಮ್ಮ ಎಲ್ಲ ಕೆಲಸ ಮಾಡಿಸಿಕೊಳ್ಳಲಿದ್ದಾರೆ. ನಿಗದಿತ ಭತ್ಯೆಯನ್ನೇ ವೇತನವನ್ನಾಗಿ ಅವರಿಗೆ ಕೊಟ್ಟರೆ ಯಾವುದಕ್ಕೂ ಸಾಲವುದಿಲ್ಲ. ಏನೇ ಆದರೂ ನಮಗೆ ಮುಕ್ತಿ ಸಿಕ್ಕಂತಾಗಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.