ADVERTISEMENT

‘ಆಸ್ಪತ್ರೆ ಮಸೂದೆ ಚರ್ಚೆಗೆ ಪಂಥಾಹ್ವಾನ’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 19:30 IST
Last Updated 14 ನವೆಂಬರ್ 2017, 19:30 IST

ಬೆಳಗಾವಿ: ‘ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಮಸೂದೆಯು ಸಾರ್ವಜನಿಕ ಹಿತ ರಕ್ಷಿಸುವುದಿಲ್ಲ ಎಂದು ಬಿಜೆಪಿ ಮುಖಂಡರು ಸಾಬೀತುಪಡಿಸಿದರೆ ರಾಜಕೀಯ ಜೀವನದಿಂದ ನಿವೃತ್ತಿ ಹೊಂದುತ್ತೇನೆ‘ ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶಕುಮಾರ್ ವಿಧಾನ ಪರಿಷತ್ತಿನಲ್ಲಿ ಸವಾಲು ಹಾಕಿದರು.

‘ವೈದ್ಯರ ಮುಷ್ಕರಕ್ಕೆ ಮೂವರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಸಮಸ್ಯೆ ಪರಿಹಾರಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳವಾರ ಶೂನ್ಯ ವೇಳೆಯಲ್ಲಿ ಮಹಾಂತೇಶ ಕವಟಗಿಮಠ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

‘ಸೈದ್ದಾಂತಿಕವಾಗಿ ಆರ್‌ಎಸ್ಎಸ್ ಹಾಗೂ ಬಿಜೆಪಿಯೊಂದಿಗೆ ಎಂದೂ ಸಹಮತ ವ್ಯಕ್ತಪಡಿಸಿಲ್ಲ. ಆದರೂ, ಆರ್‌ಎಸ್‌ಎಸ್‌ ಕಾರ್ಯಕರ್ತರ ಸಭೆ ಕರೆಯಿರಿ. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ಬಗ್ಗೆ ನಾನು ಹೇಳುತ್ತೇನೆ. ನೀವೂ ನಿಮ್ಮ ಅಭಿಪ್ರಾಯ ಹೇಳಿ’ ಎಂದು ಆಹ್ವಾನ ನೀಡಿದರು.

ADVERTISEMENT

‘ಮನುಷ್ಯನಾಗಿ, ಸಚಿವನಾಗಿ ಮೂವರ ಸಾವಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ಅವರ ಕುಟುಂಬದವರಿಗೆ ಸಾಂತ್ವನ ಹೇಳುತ್ತೇನೆ. ಈ ವಿಷಯದಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ನನ್ನ ಹಠದಿಂದ ಪ್ರಾಣ ಹೋಗಿದೆ ಎಂಬ ಭಾವನೆ ಇದ್ದರೆ ಜನರ ಕ್ಷಮೆ ಕೇಳುತ್ತೇನೆ. ಜವಾಬ್ದಾರಿಯನ್ನು ನಿರ್ವಹಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಭಾವುಕರಾಗಿ ಹೇಳಿದರು.

‘ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ನನ್ನನ್ನು ಕೊಲೆಗಡುಕ ಹಾಗೂ  ಮಕ್ಕಳಿಲ್ಲದವನು ಎಂದಿದ್ದಾರೆ. ಅವರು ಹಿರಿಯರು. ಸಂಭವನೀಯ ಮುಖ್ಯಮಂತ್ರಿ. ಅಷ್ಟು ಎತ್ತರಕ್ಕೆ ನಾನು ಬೆಳೆದಿಲ್ಲ. ನನಗೆ ಇಬ್ಬರು ಮಕ್ಕಳಿದ್ದಾರೆ, ಮೊಮ್ಮಕ್ಕಳೂ ಇದ್ದಾರೆ. ಸಾಹೇಬರಿಗೆ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

‘ಪಿತೃ ಸಮಾನರಾದ ದಿವಂಗತ ಕೆ.ಎಚ್‌. ರಂಗನಾಥ ತೋರಿಸಿದ ದಾರಿಯಲ್ಲಿ ನಡೆಯುತ್ತಿದ್ದೇನೆ. ವಯಸ್ಸಾಗಿದೆ. ಜತೆಗೆ ಮರೆವು ಇದೆ. ಕೊಲೆ ಮಾಡಿದ ನೆನಪಿಲ್ಲ. ಮಗ ಕರೆ ಮಾಡಿ, ಕೊಲೆ ಬಗ್ಗೆ ಕೇಳಿದ. ಜಾಮೀನು ತೆಗೆದುಕೊಳ್ಳಬಹುದು ಎಂದ. ಕೊಲೆ ಕೇಸ್‌ ಬಗ್ಗೆ ತಿಳಿಸಿ. ಸಹಾಯ ಆಗುತ್ತೆ’ ಎಂದು ಕಟುಕಿದರು.

‘ಪುಟ್ಟಪರ್ತಿ ಸಾಯಿಬಾಬಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತಿದೆ. ನಾನು ತರುತ್ತಿರುವ ಮಸೂದೆ ಬಗ್ಗೆ ಎಲ್ಲ ಪಕ್ಷಗಳಲ್ಲೂ ಪರ– ವಿರುದ್ಧದ ನಿಲುವುಗಳಿವೆ. ಮುಖ್ಯಮಂತ್ರಿ ಸಾರ್ವಜನಿಕ ಹಿತ ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳುತ್ತಾರೆ’ ಎಂದರು.

‘ನಿಲುವಳಿ ಸೂಚನೆ, ಸಂತಾಪ ಮಂಡನೆಗಳು ಅರ್ಥ ಕಳೆದುಕೊಂಡಿವೆ. ಹೃದಯದಿಂದ ಮಾತುಗಳು ಬರುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಬಹು ಅಭಿಪ್ರಾಯಕ್ಕೆ ತಲೆಬಾಗಬೇಕಾಗುತ್ತದೆ’ ಎಂದು ಹೇಳುವಾಗ ಗದ್ಗದಿತರಾದರು

ಈಶ್ವರಪ್ಪ ಉತ್ತರ ಕೊಡಲು ಎದ್ದು ನಿಂತಾಗ ಶೂನ್ಯವೇಳೆಯಲ್ಲಿ ಉತ್ತರಕ್ಕೆ ಅವಕಾಶವಿಲ್ಲ ಎಂದು ಸಭಾನಾಯಕ ಸೀತಾರಾಂ, ಸಚಿವರಾದ ಡಿ.ಕೆ. ಶಿವಕುಮಾರ್, ಬಸವರಾಜ ರಾಯರೆಡ್ಡಿ, ಎ. ಮಂಜು ವಿರೋಧ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ, ವಿರೋಧ ಪಕ್ಷದ ಮುಖಂಡರು ಹಾಗೂ ಸಂಘಟನೆಗಳ ಸಭೆ ಕರೆದು ಚರ್ಚಿಸಬೇಕು’ ಎಂದು ಈಶ್ವರಪ್ಪ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.