ADVERTISEMENT

‘ಇನ್‌ಸ್ಟೆಮ್‌’ನಲ್ಲಿ ಖರ್ಚು–ವೆಚ್ಚದಲ್ಲಿ ಅಕ್ರಮ

ನಿಯಮ ಗಾಳಿಗೆ ತೂರಿದ ವೈಜ್ಞಾನಿಕ ಸಂಶೋಧನಾ ಸಂಸ್ಥೆ

ಎಸ್.ರವಿಪ್ರಕಾಶ್
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
‘ಇನ್‌ಸ್ಟೆಮ್‌’ನಲ್ಲಿ ಖರ್ಚು–ವೆಚ್ಚದಲ್ಲಿ ಅಕ್ರಮ
‘ಇನ್‌ಸ್ಟೆಮ್‌’ನಲ್ಲಿ ಖರ್ಚು–ವೆಚ್ಚದಲ್ಲಿ ಅಕ್ರಮ   

ಬೆಂಗಳೂರು: ದೇಶದ ಪ್ರತಿಷ್ಠಿತ ವೈಜ್ಞಾನಿಕ ಸಂಶೋಧನಾ ಸಂಸ್ಥೆ ಇನ್ಸ್‌ಟಿಟ್ಯೂಟ್‌ ಆಫ್‌ ಸ್ಟೆಮ್‌ಸೆಲ್‌ ಬಯಾಲಜಿ ಅಂಡ್‌ ರೀಜನೆರೇಟಿವ್‌ ಮೆಡಿಸಿನ್ಸ್‌ (ಇನ್‌ಸ್ಟೆಮ್‌)ನಲ್ಲಿ ಆಡಳಿತ, ನೇಮಕಾತಿ, ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರದ ನೀತಿ–ನಿಯಮಗಳನ್ನು ಗಾಳಿಗೆ ತೂರಿರುವುದರಿಂದ ಸುಮಾರು ₹ 5 ಕೋಟಿಯಷ್ಟು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ನಗರದ ಜಿಕೆವಿಕೆ ಕ್ಯಾಂಪಸ್‌ನಲ್ಲಿರುವ ಇನ್ಸ್‌ಟಿಟ್ಯೂಟ್‌ ಆಫ್‌ ಸ್ಟೆಮ್‌ಸೆಲ್‌ ಬಯಾಲಜಿ ಅಂಡ್‌ ರೀಜನೆರೇಟಿವ್‌ ಮೆಡಿಸಿನ್ಸ್‌ ಕೇಂದ್ರ ಸರ್ಕಾರದಿಂದ ಸ್ಥಾಪನೆಗೊಂಡಿರುವ ಸಂಶೋಧನಾ ಸಂಸ್ಥೆ.

ಕೇಂದ್ರ ಸರ್ಕಾರದ ಮಹಾಲೇಖಪಾಲರ ವರದಿ (2016) ಸಂಸ್ಥೆಯ ಕಾರ್ಯ ವೈಖರಿ ಮತ್ತು ಹಣಕಾಸಿನ ನಿರ್ವಹಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ₹ 5 ಕೋಟಿ ಅನಗತ್ಯ ಖರ್ಚಿಗೆ ಕಾರಣವಾಗಿರುವ ಹಲವು ಲೋಪಗಳನ್ನೂ ಪತ್ತೆ ಮಾಡಿದೆ.

2008 ರಿಂದೀಚೆಗೆ ಸಂಸ್ಥೆಯಲ್ಲಿ ನಡೆದಿರುವ ನೇಮಕಾತಿಯಲ್ಲಿ ಸರ್ಕಾರದ ನಿಯಮ ಪಾಲಿಸದೇ ಇರುವುದರ ಜೊತೆಗೆ ಕೇಂದ್ರ ಹಣಕಾಸು ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅನುಮೋದನೆ ಪಡೆಯದೇ ಸಾಕಷ್ಟು ಹುದ್ದಗೆಗಳನ್ನು ಭರ್ತಿ ಮಾಡಿರುವುದು ಮಾತ್ರವಲ್ಲದೆ, ಬೇಕಾ– ಬಿಟ್ಟಿ ಸಂಬಳ ನಿಗದಿ ಮಾಡುವ ಮೂಲಕ ₹ 2.86 ಕೋಟಿಗಳಷ್ಟು ಅಕ್ರಮವೂ ಇಲ್ಲಿ ನಡೆದಿದೆ.

ಸಂಶೋಧನಾ ಸಂಸ್ಥೆ: ಮಾನವ ಆಕರಕೋಶದಿಂದ (ಸ್ಟೆಮ್‌ ಸೆಲ್‌) ಸಂಕೀರ್ಣ ಸ್ವರೂಪದ ಕಾಯಿಲೆಗಳಿಗೆ ಔಷಧವನ್ನು ಅಭಿವೃದ್ಧಿಪಡಿಸಲು ಸಂಶೋಧನೆ ನಡೆಸುವ ಉದ್ದೇಶದಿಂದ ಒಂದು ಯೋಜನೆಯ ರೂಪದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು.

ಮುಖ್ಯವಾಗಿ, ಆಕರಕೋಶ ಸಂಶೋಧನೆಯಲ್ಲಿ ಪರಿಣತಿ ಹೆಚ್ಚಿಸುವುದು, ವಿಜ್ಞಾನಿಗಳು, ವೈದ್ಯರು ಮತ್ತು ತಜ್ಞರ ಮಧ್ಯೆ ಸಂವಾದಕ್ಕೆ  ಅವಕಾಶ  ಕಲ್ಪಿಸುವುದು ಹಾಗೂ  ಮಾನವ ಆಕರ ಕೋಶಗಳಿಂದ ಜೀವ ರಕ್ಷಕ ಔಷಧಿಯನ್ನು ತಯಾರಿಸಲು ಇರುವ ಅಡ್ಡಿ ನಿವಾರಿಸುವುದು ಸಂಸ್ಥೆಯ ಸ್ಥಾಪನೆಯ ಉದ್ದೇಶವಾಗಿತ್ತು.

ನಾಲ್ಕು ವರ್ಷಗಳ ಅವಧಿಗೆ 2008–09 ರಿಂದ 2011–12 ರವರೆಗೆ .  ಸಂಸ್ಥೆಯ ಸ್ಥಾಪನೆಗಾಗಿ ₹ 203.10 ಕೋಟಿ ಒದಗಿಸಿತ್ತು. ಈ ಮಧ್ಯೆ ಅವಧಿಯನ್ನು 2016 ರ ಮಾರ್ಚ್‌ವರೆಗೆ ವಿಸ್ತರಿಸಲಾಯಿತು.

‘ಸ್ವಾಯತ್ತ ಸ್ವರೂಪ ಹೊಂದಿದ್ದರೂ ಆಡಳಿತ ಸೇರಿದಂತೆ ಎಲ್ಲ ವಿಷಯಗಳಲ್ಲೂ ಕೇಂದ್ರ ಸರ್ಕಾರದ ನೀತಿ– ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಲೇ ಬೇಕು.  ಆದರೆ, ಹಣಕಾಸಿನ ನಿರ್ವಹಣೆಯಲ್ಲಿ ಸಾಕಷ್ಟು ಲೋಪಗಳಾಗಿವೆ’ ಎಂದು ಸಿಎಜಿ ವರದಿ ಹೇಳಿದೆ.

ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ನಿಯಮಾವಳಿ ಪ್ರಕಾರ, ಯಾವುದೇ ಒಂದು ಹುದ್ದೆಯನ್ನು ಸೃಷ್ಟಿಸುವಾಗ ಅಥವಾ ಸೇವೆಯನ್ನು ಆರಂಭಿಸುವಾಗ ಇಲಾಖೆಯ ಗಮನಕ್ಕೆ ತರಬೇಕು. ಅದಕ್ಕಾಗಿ ನಿಯಮವನ್ನೂ ರೂಪಿಸಬೇಕು.

ಆ ನಿಯಮವು ಪ್ರತಿ ಹುದ್ದೆಗೆ ಆಯ್ಕೆಯ ಮಾನದಂಡ,  ಶೈಕ್ಷಣಿಕ ಅರ್ಹತೆ, ಅನುಭವ, ಮೀಸಲಾತಿ ರೋಸ್ಟರ್‌, ವಯೋಮಿತಿ, ಆಯ್ಕೆ ಸಮಿತಿ ರಚನೆ ಇತ್ಯಾದಿಯನ್ನು ಒಳಗೊಂಡಿರಲೇಬೇಕು. ಆದರೆ, ಇನ್‌ಸ್ಟೆಮ್‌  ಯಾವುದೇ ನಿಯಮವನ್ನೂ ರೂಪಿಸದಿರುವುದು ವರದಿಯಿಂದ ಬೆಳಕಿಗೆ ಬಂದಿದೆ.

ಫ್ಯಾಕಲ್ಟಿ ವಿಭಾಗಕ್ಕೆ ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ 8 ಹುದ್ದೆಗಳಿಗೆ ಒಪ್ಪಿಗೆ ನೀಡಿತ್ತು. ಆದರೆ, ಇದಕ್ಕೆ ಹಣಕಾಸು ಇಲಾಖೆ,  ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅನುಮೋದನೆ ದೊರಕಿರಲಿಲ್ಲ.

ಹೀಗಿದ್ದರೂ ಐದು ಮಂದಿಯನ್ನು ನೇಮಕ  ಮಾಡಿಕೊಳ್ಳಲಾಗಿದೆ. ಅಲ್ಲದೆ, 9 ಶೈಕ್ಷಣಿಕ ಮತ್ತು 11 ಆಡಳಿತಾತ್ಮಕ ಹುದ್ದೆಗಳ ನೇಮಕದ ಪ್ರಸ್ತಾವನೆ ಮೂರು ಇಲಾಖೆಗಳು ಮುಂದಿದೆ. ಆದರೆ ಹಸಿರು ನಿಶಾನೆ ಸಿಕ್ಕಿಲ್ಲ. ಈ ಮಧ್ಯೆ ಒಂಭತ್ತು ಮಂದಿ ತಾತ್ಕಾಲಿಕ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಮಿಳುನಾಡು ವೆಲ್ಲೂರಿನ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜಿನಲ್ಲಿ (ಸಿಎಂಸಿ) ಸೆಂಟರ್‌ಫಾರ್‌ ಸ್ಟೆಮ್‌ಸೆಲ್‌ ರೀಸರ್ಚ್‌ (ಸಿಎಸ್‌ಸಿಆರ್‌) ಕಾರ್ಯನಿರ್ವಹಿಸುತ್ತಿದೆ.  ಸಿಎಂಸಿಯು ಇನ್ಸ್‌ಸ್ಟೆಮ್‌ನ ಜೊತೆ ನೇರ ಸಂಬಂಧ ಹೊಂದಿದೆ.  ಅಚ್ಚರಿಯ ಸಂಗತಿ ಎಂದರೆ, ಸಿಎಸ್‌ಸಿಆರ್‌ಯ ಸಿಬ್ಬಂದಿ ಸಿಎಂಸಿಯಲ್ಲೂ ಕಾರ್ಯ ನಿರ್ವಹಿಸುತ್ತಾರೆ.

ಅವರಿಗೆ ಪ್ರತ್ಯೇಕವಾಗಿ ಕಾರ್ಯ ನಿಗದಿ ಮಾಡಿಲ್ಲ. ಈ ಸಿಬ್ಬಂದಿಗಾಗಿ 2011–12 (₹ 33.05 ಲಕ್ಷ) 2012–13 (₹37.45 ಲಕ್ಷ) ಮತ್ತು 2013–14 (₹83.14 ಲಕ್ಷ)  ಒಟ್ಟು  ₹ 1.54 ಕೋಟಿ ವೆಚ್ಚ ಮಾಡಲಾಗಿದೆ.

ಪ್ರವಾಸಿ ಭತ್ಯೆ: 2009–14 ರ ಅವಧಿಯಲ್ಲಿ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದವರು ಬೆಂಗಳೂರಿನ ಇನ್‌ಸ್ಟೆಮ್‌ಗೆ ಕೆಲಸ ಬದಲಿಸಿ ಬಂದ ಕಾರಣಕ್ಕೆ  ₹ 34.64 ಲಕ್ಷ ಪ್ರವಾಸ ಭತ್ಯೆ ನೀಡಲಾಗಿದೆ.

ಕೆಂದ್ರ ಸರ್ಕಾರದ ನಿಯಮಾವಳಿ ಪ್ರಕಾರ, ಕೇಂದ್ರ ಸರ್ಕಾರಿ ನೌಕರ ಒಂದು ಊರಿನಿಂದ ಮತ್ತೊಂದು ಊರಿಗೆ ವರ್ಗಾವಣೆಗೊಂಡಾಗ ಸ್ಥಳಾಂತರಕ್ಕೆಂದು ಈ  ಭತ್ಯೆ ನೀಡಲಾಗುತ್ತದೆ. ಆದರೆ, ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿದವರಿಗೆ ಇದು ಅನ್ವಯವಾಗುವುದಿಲ್ಲ.

ವಿಜ್ಞಾನಿಗಳು ವಿದೇಶಗಳಲ್ಲಿ ನಡೆಯುವ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಪ್ರಬಂಧ ಮಂಡಿಸಲು ತೆರಳುವುದು ಸಾಮಾನ್ಯ. ಆದರೆ, ಈ ಸಂಸ್ಥೆಯಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆಯ ಒಪ್ಪಿಗೆಯನ್ನು ಪಡೆಯದೇ ಡೀನ್‌ ಸಮ್ಮತಿಯ ಮೂಲಕ ವಿದೇಶಿ ಪ್ರವಾಸಕ್ಕೆ ಒಪ್ಪಿಗೆ ನೀಡಲಾಗಿತ್ತು.

ಇದರಿಂದ ಸಂಸ್ಥೆಗೆ ₹ 1.08 ಕೋಟಿ ಅನಗತ್ಯ ವೆಚ್ಚವಾಗಿದೆ. ಇದೇ ಅವಧಿಯಲ್ಲಿ ಮೂವರು ವೃತ್ತಿಪರರಲ್ಲದ ಸಲಹೆಗಾರರನ್ನು ನೇಮಿಸಿಕೊಂಡಿದ್ದರಿಂದ ಅವರಿಗೆ ಸಂಸ್ಥೆಯು ₹1.06 ಕೋಟಿ ಅನಗತ್ಯ ಖರ್ಚು ಮಾಡಿದೆ ಎಂದು ವರದಿ ಹೇಳಿದೆ.

*
ಆಕರಕೋಶ ಸಂಶೋಧನೆ ಏಕೆ ಮುಖ್ಯ

ಹೊಕ್ಕಳು ಬಳ್ಳಿಯ ರಕ್ತ, ಅಸ್ಥಿ ಮಜ್ಜೆಯಿಂದಲೂ ಆಕರ ಕೋಶಗಳನ್ನು ಪಡೆಯಲಾಗುತ್ತದೆ. ಈ ಆಕರ ಕೋಶಗಳಿಗೆ ಸ್ವಯಂ ನವೀಕರಣ ಮತ್ತು ಪ್ರತ್ಯೇಕಗೊಳ್ಳುವ ಗುಣಗಳಿವೆ.

ಈ ಗುಣದಿಂದಾಗಿಯೇ ಆಕರ ಕೋಶವು ಮೆದುಳಿನ ಜೀವ ಕೋಶ, ಕೆಂಪು ರಕ್ತಕಣ, ಸ್ನಾಯು ಜೀವಕೋಶವನ್ನು ರೂಪಿಸಬಹುದು.

*
ಸತ್ಯಜಿತ್‌ ಮೇಯರ್‌ ಸ್ಪಷ್ಟನೆ
ಸಿಎಜಿಯ ಪ್ರಾಥಮಿಕ ವರದಿ ನಮಗೆ ಕೆಲವೇ ದಿನಗಳ ಹಿಂದಷ್ಟೇ ಸಿಕ್ಕಿದೆ. ಈ ಸಂಬಂಧ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಸಲಹೆ ಸೂಚನೆ ಪಡೆದು ಅದಕ್ಕೆ ಉತ್ತರ ನೀಡಬೇಕಿದೆ.

ಮಹಾಲೇಖಪಾಲರು ಎತ್ತಿರುವ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲಿದ್ದೇವೆ ಎಂದು ‘ಇನ್ಸ್‌ಟಿಟ್ಯೂಟ್‌ ಆಫ್‌ ಸ್ಟೆಮ್‌ಸೆಲ್‌ ಬಯಾಲಜಿ ಅಂಡ್‌ ರೀಜನೆರೇಟಿವ್‌ ಮೆಡಿಸಿನ್ಸ್‌’ನ ನಿರ್ದೇಶಕ ಸತ್ಯಜಿತ್‌ ಮೇಯರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT