ADVERTISEMENT

ಇಲ್ಲಿ ಸೌಲಭ್ಯ ಇದೆ, ಆದರೆ ಕಾಯಂ ಶಿಕ್ಷಕರೇ ಇಲ್ಲ!

ಕೊರಗ ಸಮುದಾಯಕ್ಕೆ ಮಾತ್ರ ಮೀಸಲಾದ ಜಿಲ್ಲೆಯ ಏಕೈಕ ವಸತಿ ಶಾಲೆ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST
ಸುರತ್ಕಲ್ ಸಮೀಪದ ಚೇಳ್ಯಾರ್‌ ಗ್ರಾಮದ ಮಧ್ಯ ಎಂಬಲ್ಲಿರುವ ಕೇಂದ್ರೀಯ ಮಾದರಿ ವಸತಿ ಶಾಲೆ
ಸುರತ್ಕಲ್ ಸಮೀಪದ ಚೇಳ್ಯಾರ್‌ ಗ್ರಾಮದ ಮಧ್ಯ ಎಂಬಲ್ಲಿರುವ ಕೇಂದ್ರೀಯ ಮಾದರಿ ವಸತಿ ಶಾಲೆ   

ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗ ಕೊರಗ. ಆ ಜನಾಂಗದ ಮಕ್ಕಳಿಗಾಗಿ ನಿರ್ಮಿಸಲಾದ ಜಿಲ್ಲೆಯ ಏಕೈಕ ವಸತಿಯುತ ಶಾಲೆ ಸುರತ್ಕಲ್‌ ಸಮೀಪದ ಚೇಳ್ಯಾರು ಗ್ರಾಮದ ಮಧ್ಯ ಎಂಬಲ್ಲಿದೆ. ಕೇಂದ್ರೀಯ ಮಾದರಿ ವಸತಿ ಶಾಲೆ ಹೆಸರಿನ ಈ ಶಾಲೆ ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಶೂನ್ಯ ‘ಸಾಧನೆ’ ಮಾಡಿದೆ.

ಪರೀಕ್ಷೆಗೆ ಹಾಜರಾದವರು ಕೇವಲ 5 ಮಂದಿ. ಇವರಲ್ಲಿ ಇಬ್ಬರು ಹುಡುಗರು, ಮೂವರು ಹುಡುಗಿಯರು. ಎಲ್ಲರೂ ಫೇಲ್‌. ಭವ್ಯ ಎಂಬಾಕೆ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವಷ್ಟು ಅಂಕ ಗಳಿಸಿದ್ದರೂ, ಗಣಿತದಲ್ಲಿ 3 ಅಂಕ ಕಳೆದುಕೊಂಡು ಅನುತ್ತೀರ್ಣಳಾಗಿದ್ದಾಳೆ. ಉಳಿದ ವಿದ್ಯಾರ್ಥಿಗಳೂ ಒಂದೆರಡು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ.

ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಈ ಶಾಲೆ 1984 ರಲ್ಲಿ ಆರಂಭವಾಗಿತ್ತು. 1ರಿಂದ 10ನೇ ತರಗತಿವರೆಗೆ 250 ಮಂದಿಗೆ ವ್ಯಾಸಂಗಕ್ಕೆ ಅಗತ್ಯವಾದ ಎಲ್ಲ ಸೌಲಭ್ಯವೂ ಇಲ್ಲಿದೆ. ಸುಸಜ್ಜಿತವಾದ ಎರಡಂತಸ್ತಿನ ಶಾಲಾ ಕಟ್ಟಡ, ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ, ಸಮೀಪದಲ್ಲೇ ವಿದ್ಯಾರ್ಥಿ ನಿಲಯ, ಅಗಾಧ ಪುಸ್ತಕಗಳಿರುವ ಗ್ರಂಥಾಲಯ, ಆಟದ ಮೈದಾನ, ಶುದ್ಧ ನೀರು, ಪೌಷ್ಟಿಕ ಆಹಾರ, ಕ್ರಿಯಾತ್ಮಕ ಚಟುವಟಿಕೆಗಳಿಗೆ ಸ್ಥಳ... ಹೀಗೆ ವಿದ್ಯಾರ್ಥಿಗಳ ಮಾನಸಿಕ ವಿಕಸನಕ್ಕೆ ಬೇಕಾಗಿರುವ ಎಲ್ಲ ಸೌಕರ್ಯಗಳೂ ಇವೆ. ಆದರೆ ಕೊರತೆಯಾಗಿರುವುದು ಮಾತ್ರ ಕಾಯಂ ಶಿಕ್ಷಕರು.

ಈ ಶಾಲೆಯಲ್ಲಿ ಸದ್ಯ ವ್ಯಾಸಂಗ ಮಾಡುತ್ತಿರುವವರ ಸಂಖ್ಯೆ ಕೇವಲ 70. ಇಲ್ಲಿ ಇರುವುದು ಕೇವಲ ಆರು ಮಂದಿ ಶಿಕ್ಷಕರು. ಅವರೆಲ್ಲರೂ ಗುತ್ತಿಗೆ ಆಧಾರದ ಶಿಕ್ಷಕರು. ವಾರ್ಡನ್ ಮತ್ತು ಮುಖ್ಯೋಪಾಧ್ಯಾಯರು ಎನ್ನುವ ಎರಡು ಪ್ರತ್ಯೇಕ ಹುದ್ದೆ ಇದ್ದರೂ ಇಲ್ಲಿಗೆ ನೇಮಕವಾಗಿರುವವರು ಒಬ್ಬರೇ, ಅವರೇ ವಾರ್ಡನ್, ಅವರೇ ಮುಖ್ಯೋಪಾಧ್ಯಾಯ!

ಇಲ್ಲಿರುವ ಹೆಚ್ಚಿನ ವಿದ್ಯಾರ್ಥಿಗಳು ದಕ್ಷಿಣ ಕನ್ನಡ, ಕೊಡಗು ಮತ್ತು ಉಡುಪಿ ಜಿಲ್ಲೆಯ ತೀರಾ ಗ್ರಾಮೀಣ ಭಾಗ ಅದರಲ್ಲೂ ಅರಣ್ಯ ತಪ್ಪಲಿನ ಪ್ರದೇಶದಲ್ಲಿ ಇದ್ದು ಶಿಕ್ಷಣದಿಂದ ವಂಚಿತರಾಗಿ ಸಾಮಾನ್ಯ ಮಕ್ಕಳಿಗಿಂತ ವಿಭಿನ್ನರಾಗಿರುವವರು. ಅಂತಹ ವಿದ್ಯಾರ್ಥಿಗಳನ್ನು ಸಾಮಾನ್ಯ ಶಿಕ್ಷಣಕ್ಕೆ ಒಗ್ಗಿಸಿಕೊಳ್ಳುವುದು ಶಿಕ್ಷಕರಿಗಿರುವ ಬಲು ದೊಡ್ಡ ಸವಾಲು.

ಯಾವುದೇ ಶಾಲೆಯಲ್ಲಿ ವಿಷಯವಾರು ಶಿಕ್ಷಕರು ಶಿಕ್ಷಣವನ್ನು ನೀಡುತ್ತಿದ್ದಾರೆ. ಆದರೆ ಈ ವಸತಿ ಶಾಲೆಯಲ್ಲಿ ಆರಂಭದಿಂದಲೂ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕೊರತೆ ಕಾಡುತ್ತಲೇ ಇದೆ. ಈ ವಿಷಯದ ಪರಿಣಿತ ಶಿಕ್ಷಕರು ಇಲ್ಲವಾದ ಕಾರಣ ಇತರ ಶಿಕ್ಷಕರೇ ಕಳೆದ ಜೂನ್‌ನಿಂದ ಗಣಿತ ಮತ್ತು ವಿಜ್ಞಾನ ತರಗತಿಯನ್ನು ನಡೆಸುತ್ತಿದ್ದಾರೆ. ಗಣಿತ ಮತ್ತು ವಿಜ್ಞಾನ ವಿಷಯ ಪರಿಣಿತರು ಬಂದರೂ ಇಲ್ಲಿನ ವೇತನ ಸಾಲದೆ ತಿಂಗಳ ಅವಧಿಯಲ್ಲಿಯೇ ಕೆಲಸ ಬಿಟ್ಟು ತೆರಳುತ್ತಿದ್ದಾರೆ. ಜೂನ್‌ನಿಂದ ಖಾಲಿ ಇದ್ದ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಸ್ಥಾನವನ್ನು ಫೆಬ್ರುವರಿಯಲ್ಲಿ ತುಂಬಲಾಯಿತು. ಈ ಅವಧಿ ಪರೀಕ್ಷಾ ಪೂರ್ವದ ದಿನಗಳಾದ ಕಾರಣದಿಂದ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ತಲುಪಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯ ವಿಜಯ ಕುಮಾರ್‌.

ಇಲ್ಲಿ ಎಲ್ಲವೂ ಉತ್ತಮವಾಗಿದೆ, ಆದರೆ ನಮಗೆ ಶಿಕ್ಷಕರನ್ನು ನೇಮಿಸಿ ಎಂದರೆ ಶಿಕ್ಷಣ ಇಲಾಖೆಯಾಗಲಿ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಪೂರಕವಾಗಿ ಸ್ಪಂದಿಸಲೇ ಇಲ್ಲ. ಗುತ್ತಿಗೆ ಆಧಾರದ ಶಿಕ್ಷಕರ ಬದಲು ಕಾಯಂ ನೆಲೆಯಲ್ಲಿ ಶಿಕ್ಷಕರನ್ನು ಮತ್ತು ಮುಖ್ಯೋಪಾಧ್ಯಾಯರನ್ನು ನೀಡಿದರೆ ಶಿಕ್ಷಣ ಗುಣಮಟ್ಟವನ್ನು ಕಾಪಾಡಬಹುದು ಎನ್ನುವುದು ಇಲ್ಲಿನ ಶಿಕ್ಷಕರ ಅಭಿಮತ.

ಸೀಮಿತ ಅವಕಾಶ: ಶೈಕ್ಷಣಿಕ ಗುಣಮಟ್ಟ ಕುಸಿಯಲು ಮತ್ತೊಂದು ಮುಖ್ಯ ಕಾರಣವೆಂದರೆ ಇಲ್ಲಿನ ವ್ಯವಸ್ಥೆ.  ಒಂದು ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ಶಿಕ್ಷಣ ಪಡೆಯುವ ಅವಕಾಶ. ಕೆಲ ವರ್ಷಗಳ ಹಿಂದೆ ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ಯತ್ನವನ್ನು ನಡೆಸಲಾಗಿತ್ತು. ಎಲ್ಲ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಇಲ್ಲಿ ಶಿ್ಷಣ ನೀಡುವ ಅವಕಾಶ ಕಲ್ಪಿಸಲಾಗಿತ್ತು. ಆಗ ವಿವಿಧ ಕೊರಗ ಸಮುದಾಯದ ಸಂಘಟನೆಗಳು ಈ ವ್ಯವಸ್ಥೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ಹೀಗಾಗಿ ಮತ್ತೆ ಒಂದೇ ಸಮುದಾಯಕ್ಕೆ ಸೀಮಿತವಾಗಿ ಈ ಶಾಲೆ ಉಳಿಯಬೇಕಾಯಿತು. ಆದರೆ ಈ ಬಾರಿ ಮತ್ತೆ ಎಲ್ಲಾ ಮಕ್ಕಳಿಗೆ ಇಲ್ಲಿ ಅವಕಾಶ ನೀಡುವ ಪ್ರಸ್ತಾಪವನ್ನು ಮಂಡಿಸಲಾಗಿದೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.  ಮುಂದಿನ ಜೂನ್‌ನಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಸಮುದಾಯದ ಬಡ ವಿದ್ಯಾರ್ಥಿಗಳೂ ಇಲ್ಲಿ ಶಿಕ್ಷಣವನ್ನು ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳ ಕೊರತೆ ಇದ್ದರೂ ಶಾಲೆ ಕಟ್ಟಡ, ಹಾಸ್ಟೆಲ್‌ ಕಟ್ಟಡದ ದುರಸ್ತಿಗೆ ಈ ಬಾರಿ ₹ 2 ಕೋಟಿ ಮಂಜೂರಾಗಿದ್ದು, ಕಟ್ಟಡದ ದುರಸ್ತಿಗೆ, ಶೌಚಾಲಯ, ರಸ್ತೆ, ಕುಡಿಯುವ ನೀರಿನ ಟ್ಯಾಂಕ್‌, ಮೈದಾನ, ಗ್ರಂಥಾಲಯ ಹೀಗೆ ಹತ್ತಾರು ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಕಾಯಂ ಶಿಕ್ಷಕರ ನೇಮಕದ ಪ್ರಸ್ತಾವ ಮಾತ್ರ ಇಲ್ಲ.

******
ನಮ್ಮಲ್ಲಿ ಎಲ್ಲ ವ್ಯವಸ್ಥೆ ಇದೆ, ಆದರೆ ಶಿಕ್ಷಕರ ಕೊರತೆ ತುಂಬಾ ಇದೆ. ಹೆತ್ತವರೂ ಮಕ್ಕಳನ್ನು ಸೇರಿಸಿದ ಮೇಲೆ ಅವರ ಜವಾಬ್ದಾರಿ ಆಯ್ತು ಎಂದು ಕೊಂಡು ತೆರಳುತ್ತಾರೆ, ಆಮೇಲೆ ಅವರು ಯಾವ ಸಂಪರ್ಕಕ್ಕೂ ಸಿಗಲ್ಲ.
-ವಿಜಯ ಕುಮಾರ್, ವಾರ್ಡನ್ ಮತ್ತು ಮುಖ್ಯೋಪಾಧ್ಯಾಯ

ಈ ವಸತಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದು ನಿಜ. ಇಲ್ಲಿಗೆ ನಿಯೋಜನೆ ಮೇಲಾದರೂ ಶಿಕ್ಷಕರನ್ನು ನೇಮಿಸಲು ಸಾಕಷ್ಟು ಪ್ರಯತ್ನಿಸಲಾಗಿದೆ. 5 ತಿಂಗಳ ಹಿಂದೆಯೇ ಡಿಡಿಪಿಐ ಅವರಿಗೆ ಪತ್ರ ಬರೆಯಲಾಗಿದೆ.
-ಡಾ.ಹೇಮಲತಾ, ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿ, ದ.ಕ ಜಿಲ್ಲೆ.

ಈ ಶಾಲೆಗೆ ಕಾಯಂ ಶಿಕ್ಷಕರ ನೇಮಕಾತಿ ಅಧಿಕಾರ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಇಲ್ಲ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯೇ ಇದನ್ನು ಮಾಡಬೇಕಾಗುತ್ತದೆ.
-ವಾಲ್ಟರ್ ಡಿಮೆಲ್ಲೊ, ಡಿಡಿಪಿಐ

ADVERTISEMENT

*******************
ಶಾಲೆಗಳ ವಾಸ್ತವ ಚಿತ್ರಣ

ಈ ಬಾರಿ ಎಸ್‌ಎಸ್ಎಲ್‌ಸಿಯಲ್ಲಿ ರಾಜ್ಯದ 52 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಇವುಗಳಲ್ಲಿ 3 ಸರ್ಕಾರಿ ಶಾಲೆಗಳೂ ಸೇರಿವೆ. ಶೂನ್ಯ ಫಲಿತಾಂಶ ಪಡೆದ ಬಹುತೇಕ ಖಾಸಗಿ ಶಾಲೆಗಳು ಅನುದಾನದ ಆಸೆಯಿಂದ ಶಾಲೆಯನ್ನು ನಡೆಸುತ್ತಿವೆ. ಈ ಬಗ್ಗೆ ‘ಪ್ರಜಾವಾಣಿ’ ಸಮೀಕ್ಷೆ ನಡೆಸಿದಾಗ ಕಂಡು ಬಂದ ಚಿತ್ರವೇ ಬೇರೆ. ಈ ಶಾಲೆಗಳ ವಾಸ್ತವ ಚಿತ್ರಣ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.