ADVERTISEMENT

ಈ ಸಲ ಎರಡು ಎನ್‌ಇಇಟಿ

ವೈದ್ಯ ಶಿಕ್ಷಣ: ಬೇರೆ ಬೇರೆ ಪ್ರವೇಶ ಪರೀಕ್ಷೆಗಳಿಗೆ ಅವಕಾಶವೇ ಇಲ್ಲ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ನವದೆಹಲಿ/ ಬೆಂಗಳೂರು: ವೈದ್ಯಕೀಯ (ಎಂಬಿಬಿಎಸ್‌) ಮತ್ತು ದಂತ ವೈದ್ಯಕೀಯ (ಬಿಡಿಎಸ್‌) ಕೋರ್ಸ್‌ಗಳ ಪ್ರವೇಶಾತಿಗಾಗಿ ದೇಶದಾದ್ಯಂತ ಏಕರೂಪದ ‘ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯು (ಎನ್‌ಇಇಟಿ) ಈ ವರ್ಷದ  (2016–17) ಮಟ್ಟಿಗೆ ಮಾತ್ರ ಎರಡು ಸಲ ನಡೆಯಲಿದೆ.

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಗುರುವಾರ ಮುಂದಿಟ್ಟಿರುವ ಪರೀಕ್ಷಾ ವೇಳಾಪಟ್ಟಿಗೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)  ಮೇ 1ರಂದು ನಡೆಸಲು ಉದ್ದೇಶಿಸಿರುವ ಅಖಿಲ ಭಾರತ ಪೂರ್ವಭಾವಿ ವೈದ್ಯಕೀಯ ಪರೀಕ್ಷೆಯನ್ನು (ಎಐಎಂಪಿಟಿ) ‘ಎನ್‌ಇಇಟಿ–1’ ಎಂದು ಪರಿಗಣಿಸಲು ಕೋರ್ಟ್‌ ಸಮ್ಮತಿಸಿದೆ.

‘ಎಐಪಿಎಂಟಿ’ಗೆ ಅರ್ಜಿ ಹಾಕದಿರುವ ಅಭ್ಯರ್ಥಿಗಳಿಗಾಗಿ ಜುಲೈ 24ರಂದು ಎರಡನೇ ಬಾರಿಗೆ ಎನ್‌ಇಇಟಿ ನಡೆಯಲಿದೆ. ಸೆಪ್ಟೆಂಬರ್‌ 30ರ ಒಳಗಾಗಿ ಕಾಲೇಜುಗಳಿಗೆ ಪ್ರವೇಶ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶದಿಂದ ಎರಡೂ ಪರೀಕ್ಷೆಗಳ ಫಲಿತಾಂಶ ಆಗಸ್ಟ್17ರಂದು ಪ್ರಕಟಿಸಲು ಅದು ಸೂಚಿಸಿದೆ.

ಸಿಬಿಎಸ್‌ಇ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿಂಕಿ ಆನಂದ್‌ ಅವರು, ಪರೀಕ್ಷಾ ವೇಳಾಪಟ್ಟಿಯನ್ನು ನ್ಯಾಯಮೂರ್ತಿ ಅನಿಲ್‌ ಆರ್. ದವೆ ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠಕ್ಕೆ ಸಲ್ಲಿಸಿದರು.

ವಿರೋಧ: ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ತೆಲಂಗಾಣ ರಾಜ್ಯ ಸರ್ಕಾರಗಳ ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಕಾಲೇಜುಗಳ ಒಕ್ಕೂಟದ ವಕೀಲರು ಎನ್‌ಇಇಟಿಯನ್ನು  ವಿರೋಧಿಸಿದರು.

‘ಎನ್‌ಇಇಟಿ ವಿರುದ್ಧ ನಾವು ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇನ್ನೂ ಇತ್ಯರ್ಥ ಪಡಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ಒಪ್ಪದ ನ್ಯಾಯಪೀಠ, ‘ಇತ್ಯರ್ಥವಾಗದಿರುವ ಅರ್ಜಿಗಳ ವಿಚಾರಣೆಗೆ ಈ ತೀರ್ಪಿನಿಂದ ಯಾವುದೇ ಧಕ್ಕೆ ಇಲ್ಲ’ ಎಂದು ಸ್ಪಷ್ಟಪಡಿಸಿತು.

ಈ ವರ್ಷದಿಂದಲೇ ಎನ್‌ಇಇಟಿ ನಡೆಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಂಕಲ್ಪ ಚಾರಿಟೇಬಲ್‌ ಟ್ರಸ್ಟ್‌  ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿತ್ತು.

6.67 ಲಕ್ಷ ಅಭ್ಯರ್ಥಿಗಳು: ಮೇ 1ರಂದು ನಡೆಯಲಿರುವ ಮೊದಲ ಎನ್‌ಇಇಟಿಗೆ 6.67 ಲಕ್ಷ ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ.  ಮೇ–1ರಂದು ನಿಗದಿಯಾಗಿದ್ದ ಅಖಿಲ ಭಾರತ ಪೂರ್ವಭಾವಿ ವೈದ್ಯಕೀಯ ಪರೀಕ್ಷೆಗೆ (ಎಐಎಂಪಿಟಿ) 6,67,637 ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ.  ಈಗ ಇದೇ ‘ಎನ್‌ಇಇಟಿ–1’ ಆಗಲಿದೆ.

ಕಾಲೇಜುಗಳ ಮನವಿ ತಿರಸ್ಕೃತ
ಎನ್‌ಇಇಟಿ ವಿರುದ್ಧ ತಾವು ಸಲ್ಲಿಸಿರುವ ಅರ್ಜಿಗಳು ಇತ್ಯರ್ಥವಾಗುವವರೆಗೂ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ತಡೆ ಹಿಡಿಯಬೇಕು ಎಂದು ವಿವಿಧ ರಾಜ್ಯಗಳು, ವೈದ್ಯಕೀಯ ಕಾಲೇಜುಗಳು ಮತ್ತು ಕಾಲೇಜುಗಳ ಒಕ್ಕೂಟಗಳು ಮಾಡಿದ್ದ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿತು.

‘ಎನ್‌ಇಇಟಿ ರದ್ದುಪಡಿಸಿ 2013ರಲ್ಲಿ ಹೊರಡಿಸಿದ್ದ ತೀರ್ಪನ್ನು ಸುಪ್ರೀಂಕೋರ್ಟ್‌ ವಾಪಸ್‌ ಪಡೆದಿದೆ. ಹಾಗಾಗಿ ಎನ್‌ಇಇಟಿ ನಡೆಸುವ ಸಂಬಂಧ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಮತ್ತು ದಂತ ವೈದ್ಯಕೀಯ ಮಂಡಳಿಗಳು 2010ರ ಡಿಸೆಂಬರ್‌ 21ರಂದು ಹೊರಡಿಸಿದ್ದ ಅಧಿಸೂಚನೆ ಈಗಲೂ ಊರ್ಜಿತದಲ್ಲಿದೆ’ ಎಂದು ಅದು ಹೇಳಿತು.

‘ಪ್ರತಿವಾದಿಗಳು (ಕೇಂದ್ರ ಸರ್ಕಾರ, ಸಿಬಿಎಸ್‌ಇ ಮತ್ತು ಎಂಸಿಐ) ನೀಡಿರುವ ಮುಚ್ಚಳಿಕೆಗೆ ಅನುಗುಣವಾಗಿ ಪರೀಕ್ಷೆ ನಡೆಯಬೇಕು. ಎನ್ಇಇಟಿಗೆ ಸಂಬಂಧಿಸಿದಂತೆ ಈ ಹಿಂದೆ ಯಾವುದೇ ನ್ಯಾಯಾಲಯ ತೀರ್ಪು ನೀಡಿದ್ದರೆ ಅದು ಈಗ ಅನ್ವಯವಾಗುವುದಿಲ್ಲ. ಸುಪ್ರೀಂ ಕೋರ್ಟ್‌ನ ಈಗಿನ ತೀರ್ಪೇ ಅಂತಿಮ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ವೇಳಾಪಟ್ಟಿ
ಮೇ 1–ಮೊದಲ ಪರೀಕ್ಷೆ
ಜುಲೈ 24–ಎರಡನೇ ಪರೀಕ್ಷೆ
ಆಗಸ್ಟ್‌ 17– ಫಲಿತಾಂಶ ಪ್ರಕಟ
ಸೆಪ್ಟೆಂಬರ್‌ 30– ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕೊನೆಯ ದಿನ.

ಚರ್ಚಿಸಿ ನಿರ್ಧಾರ 
‘ಸುಪ್ರೀಂ’ ನಿರ್ದೇಶನದ ಬಗ್ಗೆ ಅಡ್ವೊಕೇಟ್‌ ಜನರಲ್‌ ಮತ್ತು ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಇಟಿ, ಕಾಮೆಡ್‌–ಕೆ ಅಥವಾ ಇತರೆ ಪ್ರವೇಶ ಪರೀಕ್ಷೆ ಇವುಗಳಲ್ಲಿ ಯಾವುದನ್ನು  ಅನುಸರಿಸುವುದು ಎಂಬ ಬಗ್ಗೆ ತೀರ್ಮಾನ ಆಗಿಲ್ಲ ಎಂದರು.  ‘ಕೋರ್ಟ್‌ ಆದೇಶ ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗಿಲ್ಲ.  ವಕೀಲರ ಜೊತೆ ಚರ್ಚಿಸುತ್ತೇವೆ’ ಎಂದು ಕಾಮೆಡ್‌ ಕೆ ಕಾರ್ಯದರ್ಶಿ ಎಸ್‌. ಕುಮಾರ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.