ADVERTISEMENT

ಉಕ್ಕಿನ ಸೇತುವೆ ಕೈಬಿಟ್ಟ ಸರ್ಕಾರ

ವಿವಾದಾತ್ಮಕ ಯೋಜನೆಯಿಂದ ಹಿಂದೆ ಸರಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 17:36 IST
Last Updated 3 ಮಾರ್ಚ್ 2017, 17:36 IST
ಉಕ್ಕಿನ ಸೇತುವೆ ಕೈಬಿಟ್ಟ ಸರ್ಕಾರ
ಉಕ್ಕಿನ ಸೇತುವೆ ಕೈಬಿಟ್ಟ ಸರ್ಕಾರ   

ಬೆಂಗಳೂರು: ಇಲ್ಲಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆವರೆಗೆ ನಿರ್ಮಿಸಲು ಉದ್ದೇಶಿಸಿದ್ದ ₹1,791 ಕೋಟಿ ವೆಚ್ಚದ ವಿವಾದಾಸ್ಪದ ಉಕ್ಕಿನ ಸೇತುವೆ ಯೋಜನೆಯಿಂದ ಹಿಂದೆ ಸರಿಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರಿನ ನೀರಿನ ಸಮಸ್ಯೆ ಕುರಿತಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆದ ಸಭೆ ಬಳಿಕ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರು ಉಕ್ಕಿನ ಸೇತುವೆ ಯೋಜನೆ ರದ್ದು ಮಾಡುವ ತೀರ್ಮಾನ ಪ್ರಕಟಿಸಿದರು.

‘ಜನಹಿತ ಹಾಗೂ ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆ ಜನರಿಗೆ ಬೇಡವಾಗಿದೆ. ಸುಖಾಸುಮ್ಮನೆ ಭ್ರಷ್ಟಾಚಾರದ ಆಪಾದನೆ ಹೊತ್ತುಕೊಂಡು ಅನುಷ್ಠಾನ ಮಾಡುವುದು ಬೇಡ ಎಂಬ ಕಾರಣಕ್ಕೆ ಈ ಯೋಜನೆ ಕೈಬಿಡಲಾಗಿದೆ’ ಎಂದೂ ಅವರು ಹೇಳಿದರು.

‘ತಜ್ಞರ ವರದಿ ಮತ್ತು ಶಿಫಾರಸು ಆಧರಿಸಿ ಯೋಜನೆ ಅನುಷ್ಠಾನ ಮಾಡಲು ಸರ್ಕಾರ ಮುಂದಾಯಿತು. ರಾಜಕೀಯ ಪಿತೂರಿಯಿಂದ ಕಿಕ್‌ಬ್ಯಾಕ್‌ ಆರೋಪವನ್ನು ಬಿಜೆಪಿ ಬೆಂಬಲಿತ ಸಂಸದ ರಾಜೀವ್ ಚಂದ್ರಶೇಖರ್‌ ಮಾಡಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರು ₹65 ಕೋಟಿ ಕಪ್ಪ ಮುಖ್ಯಮಂತ್ರಿ ಕುಟುಂಬಕ್ಕೆ ತಲುಪಿದೆ ಎಂದು ಸುಳ್ಳು ಆರೋಪ ಹೊರಿಸಿದರು. ಯಾವುದೇ  ತಪ್ಪು ಮಾಡದೇ ಇದ್ದರೂ ಸುಳ್ಳು ಆಪಾದನೆಗಳಿಂದ ಸರ್ಕಾರಕ್ಕೆ ಕಳಂಕ ತಟ್ಟಬಾರದು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಜತೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಜಾರ್ಜ್‌ ಹೇಳಿದರು.

ಸಭೆಯಲ್ಲಿ ಮಾತಿನ ಚಕಮಕಿ: ‘ಉಕ್ಕಿನ ಸೇತುವೆ ಕುರಿತು ಅನಗತ್ಯ ಆರೋಪ ಕೇಳಿಬಂದಿದ್ದು, ಅನುಮಾನಗಳು ಮೂಡಿವೆ. ಇದರ ಬಗ್ಗೆ ಚರ್ಚೆ ಮಾಡಲು ಅವಕಾಶ ಕೊಡಿ’ ಎಂದು ಕಾಂಗ್ರೆಸ್‌ ಶಾಸಕರು ಬೇಡಿಕೆ ಮುಂದಿಟ್ಟಾಗ, ಬಿಜೆಪಿಯ ಅರವಿಂದ ಲಿಂಬಾವಳಿ, ವೈ.ಎ. ನಾರಾಯಣಸ್ವಾಮಿ ಬಲವಾಗಿ ಆಕ್ಷೇಪಿಸಿದರು. ‘ಕುಡಿಯುವ ನೀರಿಗೆ ಮಾತ್ರ ಚರ್ಚೆ ಸೀಮಿತಗೊಳಿಸಿ ’ಎಂದು ಒತ್ತಾಯಿಸಿದರು.

ಮಧ್ಯ ಪ್ರವೇಶಿಸಿದ ಸಚಿವ ಜಾರ್ಜ್‌, ‘ಉಕ್ಕಿನ ಸೇತುವೆ ಬೇಡ ಎಂಬುವವರ ಧ್ವನಿ ಜೋರಾಗಿದೆ. ಹಸಿರು ನ್ಯಾಯಮಂಡಳಿ ಇನ್ನೂ ತೀರ್ಮಾನ ಪ್ರಕಟಿಸಿಲ್ಲ. ಜನವಿರೋಧ ನೋಡಿದ ಎಂಜಿನಿಯರ್‌ಗಳು ಯೋಜನೆ ಅನುಷ್ಠಾನ ಮಾಡುವುದಕ್ಕೆ ಜನ ಬಿಡುತ್ತಾರೆಯೇ ಎಂದು ಭೀತಿಗೊಂಡಿದ್ದಾರೆ.  ಒಂದೇ ಒಂದು ಪೈಸೆ ದುಡ್ಡು ತೆಗೆದುಕೊಂಡಿಲ್ಲ. ನನ್ನ ಮೇಲೆ ಆರೋಪ ಬಂದರೆ ಪರವಾಗಿಲ್ಲ. ಮುಖ್ಯಮಂತ್ರಿ ಮೇಲೆ ಬಂದಿರುವುದು ಸರಿಯಲ್ಲ. ಹಾಗಾಗಿ ಚರ್ಚೆ ಮಾಡೋಣ’  ಎಂದು ಜಾರ್ಜ್‌ ಹೇಳಿದರು.

ಇದಕ್ಕೆ ಆಕ್ಷೇಪಿಸಿದ ಅರವಿಂದ ಲಿಂಬಾವಳಿ, ‘ಡೈರಿಯಲ್ಲಿ ಎಲ್ಲವೂ ಬಹಿರಂಗವಾಗಿದೆ. ಕಿಕ್‌ಬ್ಯಾಕ್‌ ಪಡೆದಿದ್ದೀರಲ್ಲವೇ’ ಎಂದು ಧ್ವನಿಯೇರಿಸಿದರು.
‘ಸಂಚಾರ ದಟ್ಟಣೆ ಬೆಂಗಳೂರಿನ ದೊಡ್ಡ ಸಮಸ್ಯೆ. ಅದನ್ನು ಬಗೆಹರಿಸುವುದು ಬಿಜೆಪಿಗೆ ಬೇಕಿಲ್ಲ. ಡಿ.ಕೆ.ರವಿ, ಗಣಪತಿ ಆತ್ಮಹತ್ಯೆ ಪ್ರಕರಣ... ಹೀಗೆ ಎಲ್ಲಾ ಆರೋಪವನ್ನೂ ಬಿಜೆಪಿಯವರು ಕಾಂಗ್ರೆಸ್‌ ತಲೆಗೆ ಕಟ್ಟಿದರು. ಈಗ ಕಪ್ಪ ಕಾಣಿಕೆ ಆರೋಪ ಮಾಡುತ್ತಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಕೂರಬೇಕಾ’ ಎಂದು ಸಚಿವ ಕೃಷ್ಣ ಬೈರೇಗೌಡ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲಿಂಬಾವಳಿ, ‘ನಾವು ಆರೋಪ ಮಾಡಿದ್ದೇವೆ. ಅದಕ್ಕೆ ದಾಖಲೆಯೂ ಇದೆ’ ಎಂದು ದೂರಿದರು. ಈ ಹಂತದಲ್ಲಿ ಉಭಯ ಪಕ್ಷಗಳ ಶಾಸಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.



ಬುಧವಾರ ಸಂಜೆಯೇ ನಿರ್ಧಾರ!
ಉಕ್ಕಿನ ಸೇತುವೆ ಬಗ್ಗೆ ಕೇಳಿಬಂದ ಆಪಾದನೆಗಳನ್ನು ಎದುರಿಸಲಾಗದ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನದಿಂದ ಹಿಂದೆ ಸರಿಯುವ ನಿರ್ಧಾರವನ್ನು ಬುಧವಾರ ಸಂಜೆಯೇ ತೆಗೆದುಕೊಂಡಿತ್ತು ಎಂದು  ಮೂಲಗಳು ತಿಳಿಸಿವೆ.

‘ಉಕ್ಕಿನ ಸೇತುವೆ ಗುತ್ತಿಗೆದಾರರು ಸಿದ್ದರಾಮಯ್ಯ ಕುಟುಂಬದವರಿಗೆ ನೇರವಾಗಿ ₹65 ಕೋಟಿ ತಲುಪಿಸಿದ್ದಾರೆ ಎಂಬ ಮಾಹಿತಿ ಗೋವಿಂದರಾಜ್‌ ಡೈರಿಯಲ್ಲಿ ಉಲ್ಲೇಖವಾಗಿದೆ’ ಎಂದು ಯಡಿಯೂರಪ್ಪ ಆಪಾದನೆ ಮಾಡಿದ್ದರು. ಸಿದ್ದರಾಮಯ್ಯ ಅವರ ಕುಟುಂಬದವರನ್ನು ಈ ಹಗರಣದಲ್ಲಿ ಎಳೆದು ತಂದಿದ್ದರಿಂದಾಗಿ ಸರ್ಕಾರದ ಪ್ರಮುಖರು ಕಂಗೆಟ್ಟಿದ್ದರು ಎನ್ನಲಾಗಿದೆ.

ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳ ಜತೆ ಬುಧವಾರ ಸಂಜೆಯೇ ಚರ್ಚಿಸಿದ್ದ  ಸಿದ್ದರಾಮಯ್ಯ ಅವರು, ಬೆಂಗಳೂರು ನೀರಿನ ಸಮಸ್ಯೆ ಕುರಿತು ಸಭೆ ಕರೆದು ಅದರಲ್ಲಿ ಈ ತೀರ್ಮಾನ ಪ್ರಕಟಿಸಿ ಎಂದು ಸೂಚಿಸಿದ್ದರು.

ಉಕ್ಕಿನ ಸೇತುವೆಗೆ  ಕಪ್ಪ ಪಡೆಯಲಾಗಿದೆ ಎಂದು  ಬಿಜೆಪಿ ಮಾಡುತ್ತಿರುವ  ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಬೇಕು, ಬಿಜೆಪಿಯನ್ನು ಬೆಂಗಳೂರಿನ ಅಭಿವೃದ್ಧಿ ವಿರೋಧಿ ಎಂದು ಬಿಂಬಿಸಬೇಕು ಎಂಬ ಕಟ್ಟಪ್ಪಣೆಯನ್ನು ತಮ್ಮ ಸಹೊದ್ಯೋಗಿಗಳಿಗೆ  ಸಿದ್ದರಾಮಯ್ಯ ಹಾಕಿದ್ದರು ಎಂದು ಗೊತ್ತಾಗಿದೆ.

ಹೀಗಾಗಿಯೇ  ನೀರಿನ ಸಮಸ್ಯೆ ಕುರಿತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾಮಾನ್ಯವಾಗಿ ನಡೆಯುವ ಸಭೆಯನ್ನು ವಿಧಾನಸೌಧದಲ್ಲಿ ನಡೆಸಲಾಯಿತು. ಇಲ್ಲಿ ನಡೆದರೆ ಮಾತ್ರ ಮಾಧ್ಯಮದ ಗಮನ ಸೆಳೆಯಬಹುದು ಎಂಬುದು ಇದರ ಹಿಂದಿನ ಲೆಕ್ಕಾಚಾರವಾಗಿತ್ತು ಎನ್ನಲಾಗಿದೆ.

ಇಷ್ಟೆಲ್ಲಾ ಆರೋಪ ಬಂದ ಮೇಲೂ  ಯೋಜನೆ ಮುಂದುವರಿಸಿಯೇ ತೀರುತ್ತೇವೆ ಎಂದು ಹಟಕ್ಕೆ ಬಿದ್ದರೆ, ಕಪ್ಪ ಪಡೆದಿರುವ ಕಾಂಗ್ರೆಸ್‌ ಸರ್ಕಾರ ಯೋಜನೆಯಿಂದ ಹಿಂದೆ ಸರಿಯುತ್ತಿಲ್ಲ ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡುತ್ತದೆ.  ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿಯಿದ್ದು, ಇದನ್ನು ಬಿಜೆಪಿ ಜೀವಂತವಾಗಿ ಇಡುತ್ತದೆ. ಯೋಜನೆಯನ್ನೇ ಕೈಬಿಟ್ಟರೆ ಕಪ್ಪ ಕಾಣಿಕೆ ಪಡೆದ ಆರೋಪದಿಂದ ತಪ್ಪಿಸಿಕೊಳ್ಳಬಹುದು ಎಂಬುದು ಸರ್ಕಾರದ ಚಿಂತನೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಇಡೀ ಸಭೆಯ ಬಹುತೇಕ ಸಮಯ ಉಕ್ಕಿನ ಸೇತುವೆಗೆ  ಬಳಕೆಯಾಯಿತು. ಬಿಜೆಪಿ–ಕಾಂಗ್ರೆಸ್‌ ಶಾಸಕರ ಮಧ್ಯೆ ವಾಗ್ವಾದವೂ ನಡೆಯಿತು.  ಏರಿದ ಧ್ವನಿಯಲ್ಲಿ ಪರಸ್ಪರರು ಬೈದಾಡಿಕೊಂಡರು. ಸಭೆಯ ಮಧ್ಯೆಯೇ ಮುಖ್ಯಮಂತ್ರಿ ಜತೆ ದೂರವಾಣಿಯಲ್ಲಿ ಮಾತನಾಡಿದ ಸಚಿವ ಜಾರ್ಜ್‌ ಸಭೆ ಮುಗಿದ ಬಳಿಕ ಯೋಜನೆ ಕೈಬಿಟ್ಟ ತೀರ್ಮಾನ ಪ್ರಕಟಿಸಿದರು.

ಭ್ರಷ್ಟಾಚಾರ ಹಗರಣದಲ್ಲಿ ಸಿಲುಕುತ್ತೇನೆ ಎನ್ನುವ ಭಯದಿಂದ ಸಿದ್ದರಾಮಯ್ಯ ಉಕ್ಕಿನ ಸೇತುವೆ ಯೋಜನೆ ರದ್ದು ಮಾಡಿದ್ದಾರೆ. ಇದು ಬಿಜೆಪಿ ಹೋರಾಟಕ್ಕೆ ಸಿಕ್ಕ ಜಯ.
ಜಗದೀಶ ಶೆಟ್ಟರ್,
ವಿರೋಧ ಪಕ್ಷದ ನಾಯಕ

ಯೋಜನೆಯನ್ನು ಬೆಂಗಳೂರು ಜನರೇ ಬೇಡ ಎಂದಿದ್ದಾರೆ. ಅವರಿಗೆ ಬೇಡವಾದರೆ ಸರ್ಕಾರಕ್ಕೂ ಬೇಡ.  ಬಿಜೆಪಿ ಆರೋಪಕ್ಕೆ ಹೆದರಿ ಈ ಯೋಜನೆ ಕೈಬಿಟ್ಟಿದ್ದಲ್ಲ.
ಜಿ.ಪರಮೇಶ್ವರ್,
ಗೃಹ ಸಚಿವ

ನಾನು ಒಂದು ನಯಾಪೈಸೆ ಕಪ್ಪ  ಪಡೆದಿಲ್ಲ. ಸಂಶಯ ಇದ್ದರೆ ಅಗ್ನಿಕುಂಡ ಸಿದ್ಧಪಡಿಸಿ. ಸೀತೆಯಂತೆ ಅಗ್ನಿಪರೀಕ್ಷೆ ಎದುರಿಸುವೆ. ದಾಖಲೆ ಇದ್ದರೆ ಬಿಜೆಪಿ ಬಿಡುಗಡೆ ಮಾಡಲಿ.
ಕೆ.ಜೆ. ಜಾರ್ಜ್‌,
ಬೆಂಗಳೂರು ಅಭಿವೃದ್ಧಿ ಸಚಿವ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.