ADVERTISEMENT

ಉಭಯ ರಾಜ್ಯಗಳ ಫಲಿತಾಂಶ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ?

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 11:01 IST
Last Updated 18 ಡಿಸೆಂಬರ್ 2017, 11:01 IST
ಉಭಯ ರಾಜ್ಯಗಳ ಫಲಿತಾಂಶ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ?
ಉಭಯ ರಾಜ್ಯಗಳ ಫಲಿತಾಂಶ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ?   

ಬೆಂಗಳೂರು: ‘ಏಕ ವ್ಯಕ್ತಿ ದಂಡನಾಯಕ’ನಾಗಿ ನಿಂತು ತವರು ರಾಜ್ಯ ಗುಜರಾತ್‌ನಲ್ಲಿ ಪಕ್ಷಕ್ಕೆ ಗೆಲವು ತಂದುಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ಗುರಿ 2018ರ ಕರ್ನಾಟಕ ವಿಧಾನಸಭೆ ಚುನಾವಣೆ.

ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿನ ಫಲಿತಾಂಶವು ಮುಂದಿನ ವರ್ಷ ನಡೆಯಲಿರುವ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ವಿಧಾನಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎರಡೂ ರಾಜ್ಯಗಳಲ್ಲಿ ಬಜೆಪಿ ಮುನ್ನಡೆ ಸಾಧಿಸಿದ್ದಾಗಲೇ, ಪೂರ್ಣ ಫಲಿತಾಂಶ ಹೊರ ಬೀಳುವ ಮೊದಲೇ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರದು’ ಎಂದು ಹೇಳಿದ್ದಾರೆ. ಜತೆಗೆ, ‘ಗುಜರಾತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಶಂಕರ್ ಸಿಂಗ್ ವಘೇಲ ಮತ್ತು ಕಾಂಗ್ರೆಸ್‌ನ 18 ಶಾಸಕರು ಬಿಜೆಪಿಗೆ ಸೇರಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ, ಪಕ್ಷ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗಳಿಸಿದೆ. ಅದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಭಾವವೂ ಕಾರಣ’ ಎಂದು ಪಕ್ಷದ ನೂತನ ನಾಯಕ ರಾಹುಲ್‌ ಅವರನ್ನು ಸಮರ್ಥಿಸಿಕೊಳ್ಳುವ ಮಾತನ್ನಾಡಿದ್ದಾರೆ.

ADVERTISEMENT

ಇನ್ನು ಸಿಎಂ ಪ್ರತಿಕ್ರಿಯೆಗೆ ಪೂರಕ ಎಂಬಂತೆ ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು, ಗುಜರಾತ್‌ನಲ್ಲಿ ‘ಕಾಂಗ್ರೆಸ್ ಉತ್ತಮ ಸಾಧನೆ ತೋರಿದೆ’ ಎಂದಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್ 2018ರ ಏಪ್ರಿಲ್‌/ಮೇನಲ್ಲಿ ನಡೆಯುವ ಮುಂದಿನ ವಿಧಾನಸಭೆಯಲ್ಲಿ ಮತ್ತೆ ಅಧಿಕಾರಕ್ಕೇರಬೇಕು ಎಂಬ ಹವಣಿಕೆಯಲ್ಲಿದೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು ‘ಪರಿವರ್ತನಾ ಯಾತ್ರೆ’ ಕೈಗೊಂಡಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ.

ಅತ್ತ, ಮಾಜಿ ಮುಖ್ಯಮಂತ್ರಿ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು, ‘ಬಿಜೆಪಿ, ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದೀರಿ. ನನಗೂ ಒಂದು ಅವಕಾಶ ಕೊಡಿ. ನಿಮ್ಮ ಕಷ್ಟಗಳನ್ನು ದೂರಮಾಡುತ್ತೇನೆ’ ಎಂದು ಭರವಸೆ ನೀಡುತ್ತಾ ಚುನಾವಣೆಗೆ ತಯಾರಿ ನಡೆಸಿದ್ದಾರೆ.

ಈ ಮೂವರ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ಅಥವಾ ತಮ್ಮ ಸಾಮರ್ಥ್ಯ ಏನೆಂಬುದನ್ನು ಮತ ಚಲಾವಣೆ ವೇಳೆ ತೋರಿಸುತ್ತೇವೆ ಎಂಬ ವಿಶ್ವಾಸದಲ್ಲಿ ಜನರಿದ್ದಾರೆ.

ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಅವರ ಮತಗಳನ್ನು ಸೆಳೆಯುವಲ್ಲಿ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ರಾಜ್ಯದಲ್ಲಿ ಬಿಜೆಪಿಯ ಪಾಲಿಗೆ ಹೇಗೆ ಪೂರಕವಾಗಲಿದೆ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.