ADVERTISEMENT

ಎಗ್ಗಿಲ್ಲದೆ ನಡೆಯುತ್ತಿದೆ ಗರ್ಭಕೋಶ ತೆಗೆಯುವ ದಂಧೆ

ಹೇಮಾ ವೆಂಕಟ್
Published 7 ಮಾರ್ಚ್ 2016, 19:57 IST
Last Updated 7 ಮಾರ್ಚ್ 2016, 19:57 IST
ಎಗ್ಗಿಲ್ಲದೆ ನಡೆಯುತ್ತಿದೆ ಗರ್ಭಕೋಶ ತೆಗೆಯುವ ದಂಧೆ
ಎಗ್ಗಿಲ್ಲದೆ ನಡೆಯುತ್ತಿದೆ ಗರ್ಭಕೋಶ ತೆಗೆಯುವ ದಂಧೆ   

ಬೆಂಗಳೂರು: ಗಂಭೀರ ಕಾಯಿಲೆಗಳಿಲ್ಲದಿದ್ದರೂ ಗರ್ಭಕೋಶವನ್ನು  ತೆಗೆದು ಹಾಕುವ ದಂಧೆ ರಾಜ್ಯದೆಲ್ಲೆಡೆ ವ್ಯಾಪಕವಾಗಿ ನಡೆಯುತ್ತಿದೆ. ಹಣ ಮಾಡುವ ಉದ್ದೇಶದಿಂದಲೇ ಇಂತಹ ಕೃತ್ಯ ನಡೆಯುತ್ತಿರುವುದು ಪತ್ತೆಯಾಗಿದ್ದು ಈ ಬಗ್ಗೆ ಸಿಒಡಿ ತನಿಖೆ ನಡೆಸಬೇಕು ಎಂದು ಸರ್ಕಾರವೇ ರಚಿಸಿದ್ದ ಸಮಿತಿ ಶಿಫಾರಸು ಮಾಡಿದ್ದರೂ ಸಮಿತಿ ವರದಿ ದೂಳು ತಿನ್ನುತ್ತಿದೆ.

ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಣ್ಣಪುಟ್ಟ ಸಮಸ್ಯೆಗಳಿಗೂ ಗರ್ಭಕೋಶ ತೆಗೆಯುವುದು ಪರಿಹಾರ ಎಂದು ವೈದ್ಯರು ಹೇಳುತ್ತಿದ್ದು ಒಂದು ಶಸ್ತ್ರ ಚಿಕಿತ್ಸೆಗೆ ₹ 25 ಸಾವಿರದಿಂದ ₹ 1 ಲಕ್ಷದವರೆಗೂ ವೆಚ್ಚವಾಗುತ್ತಿದೆ. ಸರ್ಕಾರಿ ವೈದ್ಯರೂ ಕೂಡ ಗರ್ಭಕೋಶ ಕತ್ತರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಖಾಸಗಿ ಆಸ್ಪತ್ರೆಗಳಿಂದ ಕಮಿಷನ್‌ ಪಡೆಯುತ್ತಿದ್ದಾರೆ ಎಂಬ ಆರೋಪಗಳೂ ಇವೆ.

ಬೀರೂರು ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು 1,475 ಮಹಿಳೆಯರ ಗರ್ಭಕೋಶವನ್ನು ತೆಗೆದು ಹಾಕಿರುವ ಬಗ್ಗೆ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಭಂಡಾರಿ, ವಾಣಿ ಕೋರಿ ಮತ್ತು ಡಾ. ಸುಧಾ ಅವರನ್ನು ಒಳಗೊಂಡ ಸಮಿತಿಯನ್ನು  ಸರ್ಕಾರ ರಚಿಸಿತ್ತು. ಸಮಿತಿ ವರದಿ ನೀಡಿ ವರ್ಷ ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ.

ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿಯೂ ಗರ್ಭಕೋಶ ತೆಗೆಯುವ ದಂಧೆ ನಡೆಯುತ್ತಿರುವ ದೂರು ಬಂದಿದ್ದರಿಂದ ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಲಾಗಿದೆ.  

‘ಬೀರೂರಿನ ಪ್ರಕರಣ ರಾಜ್ಯದಾದ್ಯಂತ ಸುದ್ದಿ ಮಾಡಿದರೂ ಹಾಸನ, ಚಿತ್ರದುರ್ಗ, ದಾವಣಗೆರೆಗಳಲ್ಲಿ  ಗೊಲ್ಲರಹಟ್ಟಿಯ ಮಹಿಳೆಯರ ಗರ್ಭಕೋಶಕ್ಕೆ ಕತ್ತರಿ ಹಾಕುವ ದಂಧೆ ಈಗಲೂ ನಡೆಯುತ್ತಿದೆ’ ಎಂದು ಕೆಲ ಸಾಮಾಜಿಕ ಕಾರ್ಯಕರ್ತರು ದೂರುತ್ತಾರೆ.

ರಾಜ್ಯ ಮಹಿಳಾ ಆಯೋಗ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಅಲ್ಲಿನ ಗೊಲ್ಲರಹಟ್ಟಿಗಳಲ್ಲಿ ಸಮೀಕ್ಷೆ ನಡೆಸಿದಾಗ, ಜಿಲ್ಲೆಯ ಒಟ್ಟು 36 ಗೊಲ್ಲರಹಟ್ಟಿಗಳಲ್ಲಿರುವ 15ರಿಂದ 45ವರ್ಷದೊಳಗಿನ 288 ಹೆಣ್ಣುಮಕ್ಕಳು ಗರ್ಭಕೋಶವನ್ನು ತೆಗೆಸಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಹಾಸನದ ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ‘ಪ್ರಜಾವಾಣಿಗೆ’ ಮಾಹಿತಿ ನೀಡಿದರು. 

‘ಇದೊಂದು ಗಂಭೀರ ಪ್ರಕರಣ. ಗರ್ಭಕೋಶ ತೆಗೆಸಿಕೊಂಡವರ ಸಮೀಕ್ಷೆ  ಎಲ್ಲ ಜಿಲ್ಲೆಗಳಲ್ಲಿ ನಡೆಸಬೇಕು. ತಪ್ಪಿತಸ್ಥ ವೈದ್ಯರಿಗೆ ಶಿಕ್ಷೆ ವಿಧಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಮುಟ್ಟಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗೊಲ್ಲರಹಟ್ಟಿಯ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಗರ್ಭಕೋಶವನ್ನು ತೆಗೆಸಿಕೊಳ್ಳುತ್ತಿದ್ದಾರೆ.  ಗೊಲ್ಲರಹಟ್ಟಿಯ ನಲವತ್ತು ವರ್ಷದೊಳಗಿನ 90ರಷ್ಟು ಹೆಣ್ಣುಮಕ್ಕಳಿಗೆ ಗರ್ಭಕೋಶಗಳೇ ಇಲ್ಲ.  ಹೆಣ್ಣುಮಕ್ಕಳ ಅಮಾಯಕತೆಯನ್ನು ಬಳಸಿಕೊಂಡು ಕೆಲ ವೈದ್ಯರು ಇದನ್ನೇ ದಂಧೆ ಮಾಡಿಕೊಂಡಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತೆ ರತ್ನಾ ದೂರಿದರು.

‘ಕಲಬುರ್ಗಿ ಜಿಲ್ಲೆಯಲ್ಲಿಯೂ ಇದು ವ್ಯಾಪಕವಾಗಿದೆ. ಆದಿವಾಸಿ ಮಹಿಳೆಯರಲ್ಲಿ ಈ ಪ್ರಕರಣ ಹೆಚ್ಚು ಕಂಡು ಬಂದಿದೆ.  ಇದಕ್ಕೆ ಬಾಲ್ಯ ವಿವಾಹ, ಕುಟುಂಬದ ನಿರ್ಲಕ್ಷ್ಯ, ದಾಂಪತ್ಯ ಸಮಸ್ಯೆಯೂ ಕಾರಣವಾಗಿದೆ’ ಎಂದು ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ  ತಿಳಿಸಿದರು.

‘ಆರೋಗ್ಯ ಸಮಸ್ಯೆಗೆ ಅಂಗವನ್ನೇ ಕಿತ್ತು ಹಾಕುವುದು ಪರಿಹಾರವಲ್ಲ. ಕ್ಯಾನ್ಸರ್‌ನಂಥ ಕಾರಣಗಳಿದ್ದಲ್ಲಿ ಮಾತ್ರ ತೆಗೆದು ಹಾಕಬೇಕು ಎಂಬ  ಅರಿವು ಮೂಡಿಸುವುದು, ಗರ್ಭಕೋಶ ತೆಗೆದು ಹಾಕುವುದರಿಂದ ಉಂಟಾಗುವ  ಸಮಸ್ಯೆಗಳ ಬಗ್ಗೆ ತಿಳುವಳಿಕೆ ನೀಡುವುದು ವೈದ್ಯರ ಜವಾಬ್ದಾರಿ’ ಎಂದು ಅವರು ಹೇಳಿದರು.

‘ಗ್ರಾಮೀಣ ಭಾಗಗಳಲ್ಲಿ ಈ ಪ್ರಕರಣಗಳು ಹೆಚ್ಚು ಕಂಡು ಬರುತ್ತಿರುವುದು ಬಾಲ್ಯ ವಿವಾಹದ ಕಾರಣದಿಂದ ಎಂಬ ಅಂಶ ಅಧ್ಯಯನದಿಂದ ತಿಳಿದುಬಂದಿದೆ’ ಎಂದು ಅವರು ಮಾಹಿತಿ ನೀಡಿದರು.

ಆನಂತರದ ಸಮಸ್ಯೆಗಳು: ಚಿಕ್ಕ ವಯಸಿನಲ್ಲಿ ಗರ್ಭಕೋಶ ತೆಗೆಸಿಕೊಂಡವರಿಗೆ  ಕ್ಯಾಲ್ಸಿಯಂ ಕೊರತೆಯಿಂದ ಮೂಳೆ ಸವೆತ ಉಂಟಾಗುತ್ತದೆ. ಅನೇಕ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ. ನಿಶಕ್ತಿ, ತಲೆ ಸುತ್ತು ಬರುವುದು ಮುಂತಾದ ಸಮಸ್ಯೆಗಳು ತಲೆದೋರುವ ಸಾಧ್ಯತೆ ಇದೆ. ಪುಟ್ಟ ಮಕ್ಕಳಿರುವ ತಾಯಂದಿರಿಗೆ, ಮಕ್ಕಳನ್ನು ಕಳೆದುಕೊಂಡರೆ ಮತ್ತೆ ಹೆರಲಾಗದು ಎಂಬ  ಭಯ ನಿರಂತರವಾಗಿ ಕಾಡುತ್ತಿರುತ್ತದೆ. ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಡಾ.ಗಿರಿಜಮ್ಮ ವಿವರಿಸಿದರು.   

ಯಾವಾಗ ತೆಗೆಸಬಹುದು? ಗರ್ಭಕೋಶದ ಸಮಸ್ಯೆ ಅಥವಾ ತಿಂಗಳ ಮುಟ್ಟಿನ ಸಮಸ್ಯೆಗಳಿಗೆ ಬೇರೆ ಬೇರೆ ಚಿಕಿತ್ಸೆಗಳಿವೆ. ಸಣ್ಣಪುಟ್ಟ ಸಮಸ್ಯೆಗಳನ್ನು ಆಹಾರ, ವ್ಯಾಯಾಮದ ಮೂಲಕವೂ ನಿವಾರಿಸಿಕೊಳ್ಳಬಹುದು. ಗರ್ಭಕೋಶದಲ್ಲಿ ಏನಾದರೂ ಸಮಸ್ಯೆ ಕಂಡುಬಂದರೆ  ಬಯಾಪ್ಸಿ ಪರೀಕ್ಷೆ ನಡೆಸಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆಯೇ ಎಂದು ಪತ್ತೆ ಮಾಡಲಾಗುತ್ತದೆ.  ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ ಎಂದಾದರೆ ಮಾತ್ರ ಗರ್ಭಕೋಶ ತೆಗೆಸಬಹುದು ಎಂದು ಹಿರಿ ವೈದ್ಯೆ ಡಾ. ಗಿರಿಜಮ್ಮ ಮಾಹಿತಿ ನೀಡಿದರು.

ಕೆಲ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ವಯಸಿನಲ್ಲಿ ವಾರಗಟ್ಟಲೆ  ರಕ್ತಸ್ರಾವವಾಗುವುದಿದೆ. ಇದರಿಂದ ರಕ್ತಹೀನತೆ ಉಂಟಾಗಬಹುದು. ಅಂಥವರು ನಲುವತ್ತು ವರ್ಷ ದಾಟಿದ್ದರೆ ಗರ್ಭಕೋಶ ತೆಗೆಸಬಹುದು. ಗರ್ಭಕಂಠದಲ್ಲಿ ಹುಣ್ಣು ಆದಾಗಲೂ ಆ ಭಾಗವನ್ನು ಮಾತ್ರ ಕತ್ತರಿಸಿ ತೆಗೆದು ಗರ್ಭಕೋಶವನ್ನು ಉಳಿಸಿಕೊಳ್ಳಬಹುದು ಎಂದು  ಅವರು ತಿಳಿಸಿದರು.

ಪ್ರತ್ಯೇಕ ಕಾನೂನು ಇಲ್ಲ: ಗರ್ಭಕೋಶವನ್ನು ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸುವುದಕ್ಕೆ ಸಂಬಂಧಪಟ್ಟಂತೆ ನಮ್ಮಲ್ಲಿ  ಪ್ರತ್ಯೇಕ ಕಾನೂನು ಇಲ್ಲ. ಈ ವಿಷಯಕ್ಕೆ ಸಂಬಂಧಪಟ್ಟ ಅಪರಾಧಗಳನ್ನು ಸಂವಿಧಾನದ ಪರಿಚ್ಛೇಧ 21,  ಭಾರತೀಯ ದಂಡ ಸಂಹಿತೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಕರಾರು ಕಾಯ್ದೆಗಳ ಅಡಿಯಲ್ಲಿ ಪ್ರಕ್ರಿಯೆಗೆ ಒಳ ಪಡಿಸಲಾಗುತ್ತದೆ ಎಂದು ವಕೀಲೆ ಅಂಜಲಿ ರಾಮಣ್ಣ ಮಾಹಿತಿ ನೀಡಿದರು.

ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು, 1972 ಮತ್ತು 1975 ರ ತಿದ್ದುಪಡಿ ಹಾಗು ಭಾರತೀಯ ವೈದ್ಯಕೀಯ ಗರ್ಭಪಾತ ತಿದ್ದುಪಡಿ ಕಾನೂನು 2002 ಅಧಿನಿಯಮಗಳ ಪ್ರಕಾರ ಗರ್ಭಕೋಶವನ್ನು  ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕುವ ಅವಕಾಶವನ್ನು ವೈದ್ಯರಿಗೆ ನೀಡಲಾಗಿದೆ. ಆದರೆ, ಅಂತಹ ಸಂದರ್ಭವನ್ನೂ ವಿವರಿಸಲಾಗಿದೆ. ಅಪರೂಪದಲ್ಲಿ ಅಪರೂಪ ಎನ್ನುವ ಪರಿಸ್ಥಿಯಲ್ಲಿ ಗರ್ಭಿಣಿಗೆ ಸಹಜ ಹೆರಿಗೆ ಸಾಧ್ಯವಾಗದಿದ್ದಾಗ, ಸಿಜೇರಿಯನ್ ಮೂಲಕವೂ ಮಗುವನ್ನು ಹೊರ ತೆಗೆಯಲು ಸಾಧ್ಯವೇ ಇಲ್ಲದಿದ್ದಾಗ, ಮಹಿಳೆಯನ್ನು ಪ್ರಾಣಾಪಾಯದಿಂದ ರಕ್ಷಿಸಲು ಗರ್ಭಾಶಯದ ಜೊತೆಯಲ್ಲಿಯೇ ಮಗುವನ್ನು ಹೊರ ತೆಗೆಯುವ ಒಂದೇ ಆಯ್ಕೆ ಉಳಿದು ಕೊಂಡಾಗ ಈ ರೀತಿ ಮಾಡಬಹುದಾಗಿದೆ ಎಂದು ಅವರು ವಿವರಿಸಿದರು.
*
ಪುರುಷರ ಒತ್ತಾಸೆ!
ಸಾಮಾಜಿಕ ಕಾರ್ಯಕರ್ತರು, ಪೊಲೀಸ್‌ ಅಧಿಕಾರಿಗಳು ವರ್ಷದ ಹಿಂದೆ ಅರಸೀಕೆರೆ ತಾಲ್ಲೂಕು ಗೋಪಾಲಪುರ ಗೊಲ್ಲರಹಟ್ಟಿಗೆ ಭೇಟಿ ನೀಡಿ ಅಲ್ಲಿನ ಹಿರಿಯರ ಮನವೊಲಿಸಿ ಊರ ಹೊರಗೆ ಗೂಡ್ಲುಗಳಲ್ಲಿ ಮಹಿಳೆಯರನ್ನು ಇಡದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಮುಟ್ಟಾದ ಮಹಿಳೆಯರು ಊರೊಳಗೆ ಇರುವ ಕಾರಣ ದೇವರಿಗೆ ಮೈಲಿಗೆಯಾಗುತ್ತದೆ ಎಂಬ ಭಯ ಮಾತ್ರ ಗ್ರಾಮಸ್ಥರ ಮನಸಿನಿಂದ ದೂರವಾಗಿಲ್ಲ. ಈ ಕಾರಣಕ್ಕೆ ಅಲ್ಲಿನ ಪುರುಷರೂ ಗರ್ಭಕೋಶ ತೆಗೆಸುವಂತೆ ಪುಸಲಾಯಿಸುತ್ತಾರೆ’  ಎಂದು ಕೆಲವರು  ವಿವರಿಸಿದರು.
*
ಬಾಲ್ಯ ವಿವಾಹದ ನಂಟು
ಪ್ರಕರಣದ ಸಂಬಂಧ ವಾಸ್ತವ ಅರಿಯಲು  ಅರಸೀಕೆರೆಯ ಗೋಪಾಲಪುರದ ಗೊಲ್ಲರಹಟ್ಟಿಗೆ ಭೇಟಿ ನೀಡಿದಾಗ ಅಲ್ಲಿ  ಬಹುತೇಕ  ಮಹಿಳೆಯರದ್ದು ಬಾಲ್ಯವಿವಾಹ ಎಂಬುದು ಗೊತ್ತಾಯಿತು. ಪ್ರತಿ ಮನೆಯಲ್ಲೂ ಆಟವಾಡುವ ವಯಸಿನ ಪುಟ್ಟ ಅಮ್ಮಂದಿರು,  ಕಂಕುಳಲ್ಲಿ ಮಗುವನ್ನು  ಎತ್ತಿಕೊಂಡಿರುವುದು ಕಂಡುಬಂತು. ಗರ್ಭಕೋಶ ತೆಗೆಸಿಕೊಂಡವರು ಪ್ರತಿ ಮನೆಯಲ್ಲಿಯೂ ಸಿಕ್ಕಿದರು.  ತಿಮ್ಮಮ್ಮನಿಗೆ ಈಗ 43 ವರ್ಷ. ಆಕೆ ಗರ್ಭಕೋಶ ತೆಗೆಸಿಕೊಂಡು ಹತ್ತು ವರ್ಷವಾಗಿದೆ.

‘ಮಕ್ಕಳು ಚಿಕ್ಕವರಿದ್ದರು. ನಾನು ಊರ ಹೊರಗಿದ್ದಾಗ ಮಕ್ಕಳಿಗೆ ಊಟ ತಿಂಡಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ತೆಗೆಸಿಕೊಂಡೆ’ ಎಂದು ಆಕೆ ಹೇಳಿದರು.40ವರ್ಷ ವಯಸಿನ ಕಮಲಮ್ಮ ಆರು ತಿಂಗಳ ಹಿಂದೆ ಗರ್ಭಕೋಶ ತೆಗೆಸಿಕೊಂಡಿದ್ದಾರೆ. ‘ಪದೇ ಪದೇ ಹೊಟ್ಟೆ ನೋವು ಬರುತ್ತಿತ್ತು. ಗರ್ಭಕೋಶ ತೆಗೆಸಿದರೆ ಸಮಸ್ಯೆಯೇ ಇರುವುದಿಲ್ಲ ಎಂದು ವೈದ್ಯರು ಹೇಳಿದರು. ಶಸ್ತ್ರಚಿಕಿತ್ಸೆ ಆದ ನಂತರ ನಿಲ್ಲಲೂ ಶಕ್ತಿ ಇಲ್ಲ. ತಲೆ ಸುತ್ತು, ಸಂಕಟ, ಸೊಂಟ ನೋವು ಕಾಡುತ್ತಿದೆ’ ಎಂದು ಮರುಗಿದರು.

ಮುಟ್ಟಿನ ಸಂದರ್ಭದಲ್ಲಿ ವಿಪರೀತ ಹೊಟ್ಟೆ ನೋವು ಎಂದು ವೈದ್ಯರ ಬಳಿಗೆ ಹೋದ  30 ವರ್ಷದ ಚಂದ್ರಮ್ಮನಿಗೂ ವೈದ್ಯರು ಗರ್ಭಕೋಶ ತೆಗೆಯುವ ಸಲಹೆಯನ್ನೇ ನೀಡಿದ್ದಾರೆ. ಆಕೆ ವರ್ಷದ ಹಿಂದೆ ಗರ್ಭಕೋಶ ತೆಗೆಸಿಕೊಂಡಿದ್ದಾರೆ.  ವಯಸ್ಸೇ ಗೊತ್ತಿಲ್ಲದ (ಅಂದಾಜು 35ವರ್ಷ) ಮೀನಾಕ್ಷಿ ಮುಂದಿನ ಗುರುವಾರ ಗರ್ಭಕೋಶ ತೆಗೆಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಆಕೆಗೆ ಅದಾಗಲೇ ಮೊಮ್ಮಕ್ಕಳೂ ಇದ್ದಾರೆ. ‘ಆರು ತಿಂಗಳಿಂದ ಕಿಬ್ಬೊಟ್ಟೆ ನೋವು ಕಾಣಿಸಿಕೊಂಡಿದೆ. ಎರಡನೇ ಬಾರಿ ಹೋದಾಗ ಗರ್ಭಕೋಶ ತೆಗೆಯಬೇಕು. ಇದೇ ಗುರು ವಾರ ಬನ್ನಿ ಎಂದಿದ್ದಾರೆ. ಪತಿಯೇ ತೆಗೆಸುವ ನಿರ್ಧಾರ ಮಾಡಿದ್ದಾರೆ ’ ಎಂದರು.
*
ಕೆಲ ವೈದ್ಯರು ಇದನ್ನು ದಂಧೆ ಮಾಡಿಕೊಂಡಿರುವುದು ನಿಜ. ಗಂಭೀರ ಕಾಯಿಲೆಯಿಲ್ಲದೆ ಗರ್ಭಕೋಶ ತೆಗೆದು ಹಾಕುವುದು ಶಿಕ್ಷಾರ್ಹ ಅಪರಾಧ. ಅಂಥವರಿಗೆ ಶಿಕ್ಷೆಯಾಗಬೇಕು.
–ಡಾ. ಗಿರಿಜಮ್ಮ, ಹಿರಿಯ ವೈದ್ಯೆ
*
ಬೀರೂರಿನ ವೈದ್ಯರೊಬ್ಬರ ಮೇಲಿನ ಆರೋಪದ ತನಿಖೆಗೆ ಸರ್ಕಾರವೇ ರಚಿಸಿದ ಸಮಿತಿ  ವರದಿ ನೀಡಿ ಒಂದು ವರ್ಷವಾಗಿದೆ. ಆದರೆ, ಯಾವುದೇ  ಕ್ರಮ ಕೈಗೊಂಡಿಲ್ಲ. ಸರ್ಕಾರ ಈ ವರದಿಯನ್ನು ಬಹಿರಂಗಪಡಿಸಬೇಕು. ಕಠಿಣ ಕ್ರಮ ಜರುಗಿಸಬೇಕು.
–ರೂಪ ಹಾಸನ, ಸಾಮಾಜಿಕ ಕಾರ್ಯಕರ್ತೆ
*
ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿಯ ಆಧಾರದಲ್ಲಿ  ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಯಾವುದೇ ಕ್ರಮ ಜರುಗಿಸಿಲ್ಲ.
–ಮಂಜುಳಾ ಮಾನಸ, ಮಹಿಳಾ ಆಯೋಗದ ಅಧ್ಯಕ್ಷೆ
*
ದಾಖಲೆಗಳ ಸಹಿತ ಭಾರತೀಯ ವೈದ್ಯಕೀಯ ಮಂಡಳಿಗೆ ಯಾರಾದರೂ ದೂರು ನೀಡಿದರೆ ಮಂಡಳಿಯ ನೀತಿ ಸಮಿತಿ ತನಿಖೆ ನಡೆಸುತ್ತಿದೆ.  ಮಂಡಳಿಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಅವಕಾಶವಿಲ್ಲ.
–ಡಾ. ರವೀಂದ್ರ, ಮಂಡಳಿಯ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.