ADVERTISEMENT

ಎಚ್ಚರಿಕೆಗೆ ಮೆತ್ತಗಾದ ಈಶ್ವರಪ್ಪ

ವೈ.ಗ.ಜಗದೀಶ್‌
Published 5 ಮೇ 2017, 20:17 IST
Last Updated 5 ಮೇ 2017, 20:17 IST
ಎಚ್ಚರಿಕೆಗೆ ಮೆತ್ತಗಾದ ಈಶ್ವರಪ್ಪ
ಎಚ್ಚರಿಕೆಗೆ ಮೆತ್ತಗಾದ ಈಶ್ವರಪ್ಪ   

ಮೈಸೂರು: ‘ಪಕ್ಷದ ಅಧಿಕೃತ ಕಾರ್ಯಕ್ರಮದಿಂದ ದೂರ ಉಳಿದು ರಾಯಣ್ಣ ಬ್ರಿಗೇಡ್‌ ಚಟುವಟಿಕೆ ಮುಂದುವರಿಸಿದರೆ  ಶಿಸ್ತುಕ್ರಮ  ಎದುರಿಸಬೇಕಾಗುತ್ತದೆ’ ಎಂಬ ವರಿಷ್ಠರ ಎಚ್ಚರಿಕೆಯಿಂದ ಮೆತ್ತಗಾದ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.

ಮೈಸೂರಿನಲ್ಲಿ ಶನಿವಾರ ಆರಂಭವಾಗಲಿರುವ ಎರಡು ದಿನಗಳ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳದೇ ಪಕ್ಷದೊಳಗಿನ ವಿದ್ಯಮಾನ ಕುರಿತು  ವರಿಷ್ಠರ ಗಮನ ಸೆಳೆಯಲು ಈಶ್ವರಪ್ಪ ಬಣ ಉದ್ದೇಶಿಸಿತ್ತು.

ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಬೆಂಗಳೂರಿನ ಚಕ್ರವರ್ತಿ ಲೇಔಟ್‌ನಲ್ಲಿರುವ ಈಶ್ವರಪ್ಪ ಮನೆಗೆ ಭೇಟಿ ನೀಡಿದ್ದ ಮಾಧ್ಯಮ ಪ್ರತಿನಿಧಿಗಳು, ‘ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುತ್ತೀರಾ’ ಎಂದು ಪ್ರಶ್ನಿಸಿದರು. ಇದರಿಂದ ಸಿಡಿಮಿಡಿಗೊಂಡ ಈಶ್ವರಪ್ಪ, ‘ನಾನು ಎಲ್ಲಿಗೆ ಬೇಕಾದರೂ ಹೋಗುತ್ತೇನೆ, ಕೇಳಲು ನೀವು ಯಾರು? ನಾನು ಎಲ್ಲಿಗೆ ಹೋದರೂ ಹಿಂಬಾಲಿಸಿಕೊಂಡು ಬರುವುದು ಬಿಟ್ಟು ನಿಮಗೇನೂ ಕೆಲಸವಿಲ್ಲವೆ? ಇನ್ನೊಮ್ಮೆ ನನ್ನನ್ನು ಹಿಂಬಾಲಿಸಿದರೆ ನಿಮ್ಮ ಕತೆ ಅಷ್ಟೆ’ ಎಂದು   ಅಬ್ಬರಿಸಿದ್ದರು.

ವಿಧಾನಸೌಧದಲ್ಲಿ ಸಂಜೆ ಐದೂವರೆ ಸುಮಾರಿಗೆ  ಮಾತನಾಡಿದ ಅವರು, ‘ರಾಯಚೂರಿನಲ್ಲಿ ಇದೇ 8ರಂದು ಹಮ್ಮಿಕೊಂಡಿದ್ದ ರಾಯಣ್ಣ ಬ್ರಿಗೇಡ್‌ನ ಅಭ್ಯಾಸ ವರ್ಗವನ್ನು ಮುಂದೂಡಲಾಗಿದೆ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಯಾವ ಕಾರ್ಯಕ್ರಮವನ್ನೂ ತಪ್ಪಿಸಿಕೊಂಡಿಲ್ಲ. ಮೈಸೂರಿನ ಕಾರ್ಯಕಾರಿಣಿಯಲ್ಲೂ ಪಾಲ್ಗೊಳ್ಳುತ್ತೇನೆ’ ಎಂದು ಹೇಳಿದರು.

ಈಶ್ವರಪ್ಪನವರ ನಿಲುವು ಬದಲಾವಣೆಗೆ ರಾಜ್ಯದ ಉಸ್ತುವಾರಿ ಮುರಳೀಧರರಾವ್‌ ನೀಡಿದ ಎಚ್ಚರಿಕೆಯೇ ಕಾರಣ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಕಾರ್ಯಕಾರಣಿಯಿಂದ ದೂರ ಉಳಿದರೆ ಶಿಸ್ತುಕ್ರಮದ ಪರಿಣಾಮ ಎದುರಿಸಬೇಕಾಗುತ್ತದೆ. ಇದು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಕಟ್ಟಪ್ಪಣೆ’ ಎಂದು ರಾವ್‌ ಎಚ್ಚರಿಸಿದರು. ಹೀಗಾಗಿ ಈಶ್ವರಪ್ಪ ಮೆತ್ತಗಾದರು ಎಂದು ಮೂಲಗಳು ತಿಳಿಸಿವೆ.

ಸ್ಫೋಟಿಸಲಿದೆ ಆಂತರಿಕ ವೈಷಮ್ಯ:
ಕಳೆದ 15 ದಿನಗಳಿಂದ ಪಕ್ಷದಲ್ಲಿ ನಡೆದ ವಿದ್ಯಮಾನಗಳು, ನಾಯಕರ ಮಧ್ಯೆ ಧುಮುಗುಡುತ್ತಿರುವ ವೈಷಮ್ಯ ಕಾರ್ಯಕಾರಿಣಿ ಸಭೆಯಲ್ಲಿ ಮತ್ತೆ ಸ್ಫೋಟಗೊಳ್ಳುವ ಸಾಧ್ಯತೆಯಿದೆ.

‘ಭಿನ್ನಾಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕು, ಬೀದಿಯಲ್ಲಿ ನಿಂತು ಕಚ್ಚಾಡಿದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ’ ಎಂದು ವರಿಷ್ಠರು ಎಲ್ಲ ನಾಯಕರಿಗೂ ಎಚ್ಚರಿಕೆ ನೀಡಿದ್ದರು.  ಹೀಗಾಗಿ, ಯಡಿಯೂರಪ್ಪ ಬಣದ ಏಕಪಕ್ಷೀಯ ತೀರ್ಮಾನಗಳ ವಿರುದ್ಧ  ಇರುವ ಅಸಮಾಧಾನ, ಅಸಹನೆಗಳನ್ನು ಕಾರ್ಯಕಾರಿಣಿಯಲ್ಲಿಯೇ ಪ್ರಸ್ತಾಪಿಸಲು ಈಶ್ವರಪ್ಪ ಬಣದ ನಾಯಕರು, ಪಕ್ಷದ ಹಿರಿಯರು ನಿರ್ಧರಿಸಿದ್ದಾರೆ. ಈ ವಿಷಯ ಪ್ರಸ್ತಾಪವಾದರೆ ಸಭೆಯಲ್ಲಿ ಗೊಂದಲ, ವಾದ–ವಿವಾದಗಳು ನಡೆಯುವ ಸಂಭವವಿದೆ.

ಎಂ.ಬಿ. ಭಾನುಪ್ರಕಾಶ್‌, ನಿರ್ಮಲಕುಮಾರ್ ಸುರಾನ ಅವರನ್ನು ಪಕ್ಷದ ಉಪಾಧ್ಯಕ್ಷ ಹುದ್ದೆಯಿಂದ ಪದಚ್ಯುತಿಗೊಳಿಸಿರುವುದು, ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚಿಸದೇ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಉಪಾಧ್ಯಕ್ಷರಾಗಿ ನೇಮಿಸಿರುವುದು, ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಯಡಿಯೂರಪ್ಪ ಬಣದ ಶಾಸಕರು ಮಾಡಿರುವ ಆಗ್ರಹ ಹಾಗೂ ‘ಸಂಘಟನೆ ಉಳಿಸಿ’ ಸಭೆಯಲ್ಲಿ ಯಡಿಯೂರಪ್ಪ ವಿರುದ್ಧ ಮಾಡಿದ ಟೀಕೆಗಳು ಕಾರ್ಯಕಾರಿಣಿಯಲ್ಲಿ ಪ್ರತಿಧ್ವನಿಸುವ ಸೂಚನೆಗಳಿವೆ.

ಪಕ್ಷದ ಬೇರು ಮಟ್ಟದಲ್ಲಿ ತನ್ನದೇ ಆದ ಹಿಡಿತ ಹೊಂದಿರುವ ಸಂತೋಷ್‌ ವಿರುದ್ಧ ಯಡಿಯೂರಪ್ಪ ಹರಿಹಾಯ್ದ ಪ್ರಕರಣವನ್ನು ಈಶ್ವರಪ್ಪ ಮಾತ್ರವಲ್ಲದೇ, ಸಿ.ಟಿ. ರವಿ, ಪ್ರಹ್ಲಾದ ಜೋಶಿ ಮೊದಲಾದವರು ಪ್ರಸ್ತಾಪಿಸಲು ಅಣಿಯಾಗಿದ್ದಾರೆ ಎಂದು ಹೇಳಲಾಗಿದೆ.

ಈಶ್ವರಪ್ಪ ಬಣಕ್ಕೆ ಗೋಷ್ಠಿಗಳಲ್ಲಿ ಸಿಗದ ಅವಕಾಶ
ಬಿಜೆಪಿ ರಾಜ್ಯ ಕಾರ್ಯಕಾರಿಣಿಯ  ವಿವಿಧ ಗೋಷ್ಠಿಗಳಲ್ಲಿ  ಬಂಡಾಯ ಗುಂಪಿನ ನೇತೃತ್ವ ವಹಿಸಿರುವ ಈಶ್ವರಪ್ಪ ಬಣಕ್ಕೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಗುಂಪನ್ನು ಗೋಷ್ಠಿಗಳಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ವ್ಯಕ್ತವಾಗಿದೆ.

ADVERTISEMENT

ಶುಕ್ರವಾರ ಬೆಳಿಗ್ಗೆ 11ಗಂಟೆಗೆ ಕೇಂದ್ರ ಸಂಸದೀಯ ಮತ್ತು ರಸಗೊಬ್ಬರ ಸಚಿವ ಎಚ್‌.ಎನ್‌. ಅನಂತಕುಮಾರ್‌ ಕಾರ್ಯಕಾರಿಣಿ ಉದ್ಘಾಟಿಸಲಿದ್ದು, ಪಕ್ಷದ ರಾಜ್ಯ ಉಸ್ತುವಾರಿ ಪಿ. ಮುರಳೀಧರರಾವ್‌, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಭಾಗಿಯಾಗಲಿದ್ದಾರೆ. ಭಾನುವಾರ ಮಧ್ಯಾಹ್ನದ ಬಳಿಕ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಾಣಿಜ್ಯ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತರಾಮನ್‌ ಮತ್ತು ಯಡಿಯೂರಪ್ಪ ಭಾಗವಹಿಸಲಿದ್ದಾರೆ.
ನಿರ್ಣಯಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ನಿರ್ಣಯಗಳನ್ನು ಮಂಡಿಸಲಿದ್ದಾರೆ. ಉಭಯ ಸದನಗಳ ವಿರೋಧ ಪಕ್ಷದ ಉಪ ನಾಯಕರಾದ ಆರ್. ಅಶೋಕ್‌, ಕೆ.ಬಿ. ಶಾಣಪ್ಪ ಹಾಗೂ ಸಂಸದ ಶ್ರೀರಾಮುಲು ನಿರ್ಣಯಗಳನ್ನು  ಅನುಮೋದಿಸಲಿದ್ದಾರೆ.

ಕೇಂದ್ರದ ಸಾಧನೆಗಳ ಕುರಿತು ಸಂಸದ ಪ್ರಹ್ಲಾದ ಜೋಶಿ, ಪಕ್ಷದ ಸಂಘಟನಾ ಚಟುವಟಿಕೆ ಕುರಿತು ಅರವಿಂದ ಲಿಂಬಾವಳಿ ವಿಷಯ ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರದ ಸಾಧನೆ ಕುರಿತು ಸಚಿವ ಡಿ.ವಿ. ಸದಾನಂದಗೌಡ ನಿರ್ಣಯ ಮಂಡಿಸಲಿದ್ದು, ಈ ಸಂಬಂಧ ನಡೆಯಲಿರುವ ಚರ್ಚೆಯಲ್ಲಿ ಕೇಂದ್ರ ಸಚಿವರಾದ ರಮೇಶ ಜಿಗಜಿಣಗಿ, ಪುರಂದರೇಶ್ವರಿ, ಸಂಸದ ಪ್ರತಾಪ ಸಿಂಹ ಭಾಗವಹಿಸಲಿದ್ದಾರೆ.

ರಾಜ್ಯ ಸರ್ಕಾರದ ವೈಫಲ್ಯ ಕುರಿತು ಭಾನುವಾರ ಬೆಳಿಗ್ಗೆ ನಡೆಯಲಿರುವ ಗೋಷ್ಠಿಯಲ್ಲಿ  ರೈತ ಮೋರ್ಚಾ ಅಧ್ಯಕ್ಷ ಸಿ.ಎಚ್‌. ವಿಜಯಶಂಕರ್‌, ಶಾಸಕ ಗೋವಿಂದ ಕಾರಜೋಳ, ಸಂಸದ ಭಗವಂತ ಖೂಬಾ,  ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.

ದೀನದಯಾಳ ಉಪಾಧ್ಯಾಯರ ಕುರಿತು ಹಮ್ಮಿಕೊಂಡ ಕಾರ್ಯಕ್ರಮಗಳ ಕುರಿತು ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ರಾಜ್ಯ ಪ್ರಧಾನ ಕಾರ್ಯದರ್ಶಿ  ಅರುಣಕುಮಾರ್‌ ಮಾತನಾಡಲಿದ್ದಾರೆ. ಪಕ್ಷದ ಸಂಘಟನೆ ಕುರಿತು ನಡೆಯಲಿರುವ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಎನ್‌. ರವಿಕುಮಾರ್‌ ವಿಷಯ ಮಂಡಿಸಲಿದ್ದಾರೆ.

ಎರಡು ರಾಜಕೀಯ ನಿರ್ಣಯಗಳು
* ಬರಗಾಲ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವೈಫಲ್ಯ, ಆರೆಸ್ಸೆಸ್ ಕಾರ್ಯಕರ್ತರ ರಾಜಕೀಯ ಹತ್ಯೆ, ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ಖಂಡನೆ.

* ನೋಟು ರದ್ಧತಿ ನಿರ್ಣಯ, ಕಾಳಧನಿಕರ ಪತ್ತೆಯಂತಹ ಜನಪರವಾದ ನಿಷ್ಠುರ ಕ್ರಮಗಳನ್ನು ಕೈಗೊಂಡ ಬಳಿಕ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಕ್ಕಿರುವ ಜನಬೆಂಬಲ, ಉತ್ತರ ಪ್ರದೇಶ, ಉತ್ತರಾಖಂಡದ ದಿಗ್ವಿಜಯಕ್ಕೆ ಅಭಿನಂದನೆ.
*
ಪಕ್ಷದೊಳಗಿನ ಎಲ್ಲ ಆಂತರಿಕ ಸಮಸ್ಯೆಗಳನ್ನೂ ಪರಿಹರಿಸಲಾಗಿದೆ. ಎಲ್ಲ ನಾಯಕರನ್ನೂ  ಕಾರ್ಯಕಾರಿಣಿ ಸಭೆಗೆ ಆಹ್ವಾನಿಸಲಾಗಿದೆ
ಬಿ.ಎಸ್‌. ಯಡಿಯೂರಪ್ಪ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.