ADVERTISEMENT

ಎತ್ತಿನಹೊಳೆ: ಕೇಂದ್ರ, ರಾಜ್ಯ ಸರ್ಕಾರದ ಕ್ರಮಕ್ಕೆ ತರಾಟೆ

ಹಸಿರು ನ್ಯಾಯಮಂಡಳಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:59 IST
Last Updated 20 ಜನವರಿ 2017, 19:59 IST
ಎತ್ತಿನಹೊಳೆ: ಕೇಂದ್ರ, ರಾಜ್ಯ ಸರ್ಕಾರದ ಕ್ರಮಕ್ಕೆ ತರಾಟೆ
ಎತ್ತಿನಹೊಳೆ: ಕೇಂದ್ರ, ರಾಜ್ಯ ಸರ್ಕಾರದ ಕ್ರಮಕ್ಕೆ ತರಾಟೆ   

ನವದೆಹಲಿ: ಎತ್ತಿನಹೊಳೆ ಯೋಜನೆಯಿಂದಾಗಿ ಆ ಪ್ರದೇಶದಲ್ಲಿ ಪರಿಸರದ ಮೇಲೆ ಉಂಟಾಗಲಿರುವ ಪರಿಣಾಮಗಳ ಕುರಿತು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಸಲ್ಲಿಸಿರುವ ವರದಿಯ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವತಂತ್ರಕುಮಾರ್ ನೇತೃತ್ವದ ನ್ಯಾಯಮಂಡಳಿಯು, ಕೇಂದ್ರ ಸರ್ಕಾರ ನಡೆಸಿರುವ ಸಮೀಕ್ಷೆ ಅವೈಜ್ಞಾನಿಕವಾಗಿದೆ ಎಂದು ತಿಳಿಸಿತಲ್ಲದೆ, ಈ ವರದಿ ಅಪೂರ್ಣವಾಗಿದೆ. ಕನಿಷ್ಠ ಎರಡು ವರ್ಷಗಳ ಕಾಲ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೊದಲು ರಾಜ್ಯ ಸರ್ಕಾರ ಪರಿಸರದ ಮೇಲೆ ಆಗಲಿರುವ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನ ನಡೆಸುವ ಅಗತ್ಯವಿತ್ತು.  ಯೋಜನೆಗಾಗಿ ಮರಗಳ ಮಾರಣಹೋಮ ನಡೆಸಿರುವುದೂ ಅವೈಜ್ಞಾನಿಕ ನಡೆಯಾಗಿದೆ ಎಂದು ತಿಳಿಸಿದ ನ್ಯಾಯಪೀಠ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಮರಗಳನ್ನು ಕಡಿಯುವುದರಿಂದ ಪರಿಸರದ  ಮೇಲೆ ದುಷ್ಪರಿಣಾಮ ಆಗುವುದಿಲ್ಲವೇ, ಮರಗಳನ್ನು ಕಡಿದದ್ದಕ್ಕೆ ಬದಲಾಗಿ, ಅರಣ್ಯೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಸ್ವತಂತ್ರಕುಮಾರ್‌, ಅರಣ್ಯ ಪ್ರದೇಶಗಳಲ್ಲಿ ಕೈಗೊಳ್ಳಲಾಗುವ ಯಾವುದೇ ಯೋಜನೆಗಳಿಗೆ ಸಂಬಂಧಿಸಿದಂತೆ ಯೋಜನೆ ಪೂರ್ಣಗೊಂಡ ಬಳಿಕವೇ ಕಡಿದ ಮರಗಳ ಬದಲು ಸಸಿ ನೆಡಲು ಕ್ರಮ ಕೈಗೊಳ್ಳುವುದು ಏಕೆ? ಯೋಜನೆಯ ಜತೆಜತೆಗೇ ಅರಣ್ಯೀಕರಣಕ್ಕೆ ಒತ್ತು ನೀಡಬಹುದಲ್ಲ ಎಂದು ಕೇಳಿದರು.

ಪಶ್ಚಿಮ ಘಟ್ಟ ಪ್ರದೇಶಕ್ಕೆ ಸಂಬಂಧಿಸಿದಂತೆ ಕಸ್ತೂರಿರಂಗನ್‌ ಹಾಗೂ ಗಾಡ್ಗಿಳ್‌ ಸಮಿತಿಗಳು ಅಧ್ಯಯನ ನಡೆಸಿ ಸಲ್ಲಿಸಿದ ವರದಿಗಳನ್ನು ಅವಲೋಕಿಸಲಾಗಿದೆಯೇ, ಯೋಜನೆ ಕೈಗೆತ್ತಿಕೊಳ್ಳುವಾಗ ಸುಪ್ರೀಂ ಕೋರ್ಟ್‌ನ ನಿಬಂಧನೆಗಳನ್ನು ಪಾಲಿಸಲಾಗಿದೆಯೇ, ನಿಷಿದ್ಧ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಕಾಮಗಾರಿ ಆರಂಭಿಸುವ ಮೊದಲು ಅಧ್ಯಯನ ನಡೆಸಬೇಕಲ್ಲವೇ ಎಂದು ಅವರು ಕಿಡಿಕಾರಿದರು.

ಭಾರಿ ಮಳೆ ಸುರಿಯುವ ಆ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ಕೈಗೆತ್ತಿಕೊಳ್ಳುವಾಗ ಅರಣ್ಯ ಪ್ರದೇಶ, ಪರಿಸರ, ಪ್ರಾಣಿ ಸಂಕುಲ, ಅಲ್ಲಿನ ಮಣ್ಣಿನ ಗುಣಲಕ್ಷಣ ಮತ್ತಿತರ ವಿಷಯಗಳ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿಕೊಳ್ಳಬೇಕು. ಆದರೆ, ಈಗಾಗಲೇ 7,000ಕ್ಕೂ ಅಧಿಕ ಮರಗಳನ್ನು  ಕಡಿಯುವ ಮೂಲಕ ತೀವ್ರ ಹಾನಿ ಉಂಟುಮಾಡಲಾಗಿದೆ ಎಂದು ಅವರು ತಿಳಿಸಿದರು.

ಯೋಜನೆಯ ಪ್ರದೇಶದಲ್ಲಿ 15,000 ಮರಗಳನ್ನು ಕಡಿಯಲು ಅನುಮತಿ ದೊರೆತಿದ್ದರೂ ಕೇವಲ 7,000 ಮರ ಕಡಿಯಲಾಗಿದೆ. ನೀರನ್ನು ಹರಿಸಲು ಅಗತ್ಯ ಕಾಲುವೆ ನಿರ್ಮಾಣಕ್ಕೆ 30 ಮೀಟರ್‌ ಆಳಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಹೃತ್ವಿಕ್‌ ದತ್ತಾ ತಿಳಿಸಿದರು.

ಸಮಗ್ರ ಅಧ್ಯಯನ ನಡೆಸದೆಯೇ ಕೇಂದ್ರ ಸರ್ಕಾರ ಪರಿಸರ ಅನುಮತಿ ನೀಡಿದ್ದಾದರೂ ಹೇಗೆ, ಅನುಮತಿ ದೊರೆತ ತಕ್ಷಣ ಬೇಕಾಬಿಟ್ಟಿ ಕ್ರಮ ಕೈಗೊಳ್ಳುವುದು ಎಷ್ಟು ಸೂಕ್ತ ಎಂದೂ ನ್ಯಾಯಮೂರ್ತಿ ಸ್ವತಂತ್ರಕುಮಾರ್‌ ತರಾಟೆಗೆ ತೆಗೆದುಕೊಂಡರಲ್ಲದೆ, ಕೇಂದ್ರ ಸರ್ಕಾರ ಸಲ್ಲಿಸಿದ ವರದಿ ಸ್ವೀಕಾರಾರ್ಹ ಅಲ್ಲ ಎಂದು ಹೇಳಿದರು.
*
85 ಸಾವಿರ ಮರ ನೆಲಸಮ
ಎತ್ತಿನಹೊಳೆ ಯೋಜನೆಗಾಗಿ ಈಗಾಗಲೇ 85 ಹೆಕ್ಟೆರ್‌ ಪ್ರದೇಶದಲ್ಲಿ, ಪ್ರತಿ ಹೆಕ್ಟೆರ್‌ನಲ್ಲಿ ತಲಾ 1,000 ಮರಗಳನ್ನು ಕಡಿಯಲಾಗಿದ್ದು, ಇದುವರೆಗೆ ಒಟ್ಟು 85,000 ಮರಗಳನ್ನು ನೆಲಸಮ ಮಾಡಲಾಗಿದೆ. ಒಟ್ಟು 400 ಹೆಕ್ಟೆರ್‌ ಪ್ರದೇಶದಲ್ಲಿ ಕಾಮಗಾರಿ ನಡೆಯಲಿದ್ದು, ಸರ್ಕಾರ 4 ಲಕ್ಷ ಮರಗಳನ್ನು ಕಡಿಯಲಿದೆ ಎಂದು ಅರ್ಜಿದಾರ ಸೋಮಶೇಖರ್‌ ಪರ ವಕೀಲ ಪ್ರಿನ್ಸ್‌ ಐಸಾಕ್‌ ತಿಳಿಸಿದರು.

ಪ್ರಕರಣದ ವಿಚಾರಣೆಯನ್ನು ಫೆಬ್ರುವರಿ 6ಕ್ಕೆ ಮುಂದೂಡಲಾಗಿದ್ದು, ಅಂದು ವಾದಿ, ಪ್ರತಿವಾದಿಗಳ ಹೇಳಿಕೆ ಪಡೆಯುವ ಮೂಲಕ ಅಂತಿಮ ಹಂತದ ವಿಚಾರಣೆಯ ದಿನವನ್ನು ನಿಗದಿಪಡಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT