ADVERTISEMENT

‘ಎಲ್ಲಿಯೇ ಹೋದರೂ ನಾವು ಕನ್ನಡದ ಕಣ್ಮಣಿಗಳು’

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಅವಿನಾಶ್‌ ರಾಮಪ್ಪ ನಡುವಿನಮನಿ, ಲಕ್ಕಪ್ಪ ಉದ್ದಪ್ಪ ಹಣಮನ್ನವರ, ಕೆ.ಆರ್‌.ನಂದಿನಿ, ಪಿ.ವಿ.ಭೈರಪ್ಪ, ಕೆಂಪಹೊನ್ನಯ್ಯ ಫಕ್ಕಿರೇಶ ಕಲ್ಲಪ್ಪ ಬದಾಮಿ ಅವರನ್ನು ಸಿದ್ದರಾಮಯ್ಯ ಅಭಿನಂದಿಸಿದರು. ವಿಧಾನ ಪರಿಷತ್‌ ಸದಸ್ಯರಾದ ಕೆ. ಗೋವಿಂದರಾಜ (ಎಡದಿಂದ ಎರಡನೇಯವರು), ಎಚ್‌.ಎಂ.ರೇವಣ್ಣ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಆ ಇದ್ದಾರೆ -ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಐಎಎಸ್‌ ಪರೀಕ್ಷೆ ಪಾಸು ಮಾಡಿರುವ ರಾಜ್ಯದ 59 ಅಭ್ಯರ್ಥಿಗಳೂ ಯಾವುದೇ ರಾಜ್ಯಕ್ಕೇ ಹೋದರೂ ಕನ್ನಡದ ಕಣ್ಮಣಿಗಳಾಗಿಯೇ ಇರುತ್ತೇವೆ’ ಎಂದು ರಾಷ್ಟ್ರಕ್ಕೆ ಪ್ರಥಮ ರ್‍ಯಾಂಕ್‌ ಪಡೆದಿರುವ ಕೋಲಾರದ ಕೆ.ಆರ್‌. ನಂದಿನಿ ವಾಗ್ದಾನ ಮಾಡಿದರು.

ಕೇಂದ್ರ ಲೋಕಸೇವಾ ಆಯೋಗದ 2016ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ಪ್ರತಿಭಾವಂತ ಕನ್ನಡಿಗರನ್ನು ಅಭಿನಂದಿಸುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದಲ್ಲಿ ಬುಧವಾರ ಆಯೋಜಿಸಿದ್ದ  ಸಮಾರಂಭವನ್ನು ಮುಖ್ಯಮಂತ್ರಿಗಳ ಜತೆಗೆ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಸೋತಾಗ, ನಿಂತಾಗ ನಮ್ಮನ್ನು  ಕನ್ನಡ ಸಾಹಿತ್ಯ ಕೈಹಿಡಿದು ಎತ್ತಿದೆ. ನಮ್ಮ ನಾಡು ಸೌಹಾರ್ದದ ಬೀಡು. ಇಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿದ ನಮ್ಮ ಜನ್ಮ ಸಾರ್ಥಕವಾಗಿದೆ’ ಎಂದರು.

ADVERTISEMENT

ಅಭಿನಂದನೆ ಸ್ವೀಕರಿಸಿದ ಅಭ್ಯರ್ಥಿಗಳ ಪರವಾಗಿ ಮಾತನಾಡಿದ  ತುಮಕೂರಿನ ಕೆಂಪಹೊನ್ನಯ್ಯ ‘ನಾನೂ  ಹಳ್ಳಿಯಲ್ಲಿ ದನ, ಕುರಿ ಮೇಯಿಸುತ್ತಿದ್ದೆ. 9ನೇ ವಯಸ್ಸಿನಲ್ಲಿ ಅಂಧತ್ವ ಬಂದಿತು. ತಾಯಿ ನನ್ನನ್ನು ಅಂಧಮಕ್ಕಳ ಶಾಲೆಗೆ ಸೇರಿಸಿದರು. ಸರ್ಕಾರದ ಸವಲತ್ತಿನಲ್ಲೇ ಶಿಕ್ಷಣ ಪಡೆದು, ಹೊಟ್ಟೆಪಾಡಿಗಾಗಿ ಸರ್ಕಾರಿ ಉದ್ಯೋಗ ಗಿಟ್ಟಿಸಿದ್ದೆ. ಐಎಎಸ್‌ ಪರೀಕ್ಷೆ ಬರೆಯಲು ಪ್ರೇರೇಪಿಸಿದ  ಪತ್ನಿ ಅಚಿಂತಾ ಅವರೇ ನಿಜವಾದ ಐಎಎಸ್‌ ಅಧಿಕಾರಿ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ರಾಜ್ಯದಲ್ಲಿ ಸೇವೆ ಸಲ್ಲಿಸುವ ಐಎಎಸ್‌ ಅಧಿಕಾರಿಗಳು ಕನ್ನಡ ಕಲಿಯಬೇಕು, ಕನ್ನಡದಲ್ಲೇ ವ್ಯವಹರಿಸಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ’ ಎಂದು  ಎಚ್ಚರಿಕೆ ನೀಡಿದರು.

₹1 ಲಕ್ಷ ನಗದು ಬಹುಮಾನ
ಕೋಲಾರದ ಕೆ.ಆರ್‌.ನಂದಿನಿ ಅವರಿಗೆ ಹಾಗೂ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ರಾಜ್ಯದ 6 ಅಭ್ಯರ್ಥಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ತಲಾ ₹1 ಲಕ್ಷ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿಸಿಕೊಂಡು ಪರೀಕ್ಷೆ ಬರೆದು ಆಯ್ಕೆಯಾಗಿರುವ 15 ಅಭ್ಯರ್ಥಿಗಳಿಗೆ ತಲಾ ₹50,000 ನಗದು ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.