ADVERTISEMENT

ಎಸಿಪಿ, ಇನ್‌ಸ್ಪೆಕ್ಟರ್‌ ಅಮಾನತಿಗೆ ತಡೆ

ತಾಂಜಾನಿಯಾ ವಿದ್ಯಾರ್ಥಿನಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2016, 20:14 IST
Last Updated 9 ಫೆಬ್ರುವರಿ 2016, 20:14 IST
ಎಸಿಪಿ, ಇನ್‌ಸ್ಪೆಕ್ಟರ್‌ ಅಮಾನತಿಗೆ ತಡೆ
ಎಸಿಪಿ, ಇನ್‌ಸ್ಪೆಕ್ಟರ್‌ ಅಮಾನತಿಗೆ ತಡೆ   

ಬೆಂಗಳೂರು: ತಾಂಜಾನಿಯಾ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶವಂತಪುರ ಎಸಿಪಿ ಅಶೋಕ ಪಿಸೆ ಹಾಗೂ ಸೋಲದೇವನಹಳ್ಳಿ ಇನ್‌ಸ್ಪೆಕ್ಟರ್  ಪ್ರವೀಣ್ ಬಾಬು ಅವರ ಅಮಾನತು ಆದೇಶಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಎರಡು ವಾರಗಳ ತಡೆಯಾಜ್ಞೆ ನೀಡಿದೆ.

ಜ.31ರ ರಾತ್ರಿ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಸಂಭವಿಸಿದ ಅಪಘಾತ ಹಾಗೂ ನಂತರ ನಡೆದ ದಾಂದಲೆ  ನಿಯಂತ್ರಿಸುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಈ ಇಬ್ಬರು ಪೊಲೀಸ್‌ ಅಧಿಕಾರಿಗಳು ಹಾಗೂ ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿತ್ತು.

ಲೋಪ ಆಗಿಲ್ಲ: ‘ಘಟನೆ ದಿನ ನಮ್ಮನ್ನು ಇನ್ವೆಸ್ಟ್ ಕರ್ನಾಟಕ – 2016 ಬಂಡವಾಳ ಹೂಡಿಕೆದಾರರ ಸಮಾವೇಶದ ಭದ್ರತೆಗೆ ನಿಯೋಜಿಸಲಾಗಿತ್ತು. ಹಾಗಾಗಿ ಘಟನಾ ಸ್ಥಳ ತಲುಪುವುದು ಸ್ವಲ್ಪ ತಡವಾಯಿತು. ಆದರೂ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದೆವು.  ಅಮಾನತು ಮಾಡುವಂಥ ಲೋಪ ನಮ್ಮಿಂದ ಆಗಿಲ್ಲ. ಹೀಗಾಗಿ ಆ ಆದೇಶವನ್ನು ರದ್ದು ಮಾಡಬೇಕು’ ಎಂದು ಎಸಿಪಿ ಹಾಗೂ ಇನ್‌ಸ್ಪೆಕ್ಟರ್ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು.

‘ಸುಡಾನ್ ವಿದ್ಯಾರ್ಥಿ ಅಹದ್‌ಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದರು. ಆತನನ್ನು ಮೊದಲು ರಾಜರಾಜೇಶ್ವರಿನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆವು. ಜನ ಆತನನ್ನು ಹುಡುಕಿಕೊಂಡು ಅಲ್ಲಿಗೂ ಬರಬಹುದೆಂದು, ನನ್ನ ಜೀಪಿನಲ್ಲೇ ಆತನನ್ನು ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟೆ. ನಂತರ ಸಿಬ್ಬಂದಿಯೊಬ್ಬರ ಬೈಕ್‌ನಲ್ಲಿ ಮತ್ತೆ ಘಟನಾ ಸ್ಥಳಕ್ಕೆ ಮರಳಿದ್ದೆ’ ಎಂದು ಎಸಿಪಿ ನ್ಯಾಯಮಂಡಳಿ ಮುಂದೆ ಹೇಳಿರುವುದಾಗಿ ತಿಳಿದು ಬಂದಿದೆ.

‘ಈ ವೇಳೆಗಾಗಲೇ ಸ್ಥಳೀಯರು ಕಿರ್ಲೋಸ್ಕರ್ ಲೇಔಟ್‌ನಲ್ಲಿ ತಾಂಜಾನಿಯಾ ವಿದ್ಯಾರ್ಥಿನಿಯ ಗೆಳೆಯ ಜಮಾಲ್ ಇಬ್ರಾಹಿಂ ಮೇಲೆ ಹಲ್ಲೆ ನಡೆಸಿದ್ದರು. ಅವರನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದೆವು. ಆದರೆ, ಅಹದ್‌ನ ಕಾರು ಡಿಕ್ಕಿಯಲ್ಲಿ ಗಾಯಗೊಂಡಿದ್ದ ಕರೀಂ ಸಾಹೇಬ್ ಸಹ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು’.

‘ಇಬ್ರಾಹಿಂನನ್ನು ನಮ್ಮ ವಶಕ್ಕೆ ಒಪ್ಪಿಸಿ ಎಂದು ಅಲ್ಲಿದ್ದ ಜನ ಗಲಾಟೆ ಪ್ರಾರಂಭಿಸಿದ್ದರು. ಆಗ ಹಿಂಬಾಗಿಲ ಮೂಲಕ ಇಬ್ರಾಹಿಂನನ್ನು ಸ್ಕ್ಯಾನಿಂಗ್ ಕೊಠಡಿಗೆ ವರ್ಗಾಯಿಸಿದ್ದೆವು’ ಎಂದು ಎಸಿಪಿ ನ್ಯಾಯಮಂಡಳಿಗೆ ವಿವರಣೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ತನಿಖೆಯಲ್ಲೂ ಲೋಪವಾಗಿಲ್ಲ: ‘ಜ.31ರ ರಾತ್ರಿ 9.30ಕ್ಕೆ ಇಬ್ರಾಹಿಂ ಅವರಿಂದ ದೂರು ಪಡೆದೆವು. ಕೆಲವರು ತನ್ನ ಮೇಲೆ ಹಲ್ಲೆ ನಡೆಸಿ, ಕಾರಿಗೆ ಬೆಂಕಿ ಹಚ್ಚಿದರು ಎಂದಷ್ಟೇ ಇಬ್ರಾಹಿಂ ತಿಳಿಸಿದ್ದ. ಆದರೆ ಜತೆಗಿದ್ದ ತಾಂಜಾನಿಯಾ ವಿದ್ಯಾರ್ಥಿನಿಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಅವರ ಬಗ್ಗೆ ತಿಳಿಯಲು ಸಾಧ್ಯವಾಗಲಿಲ್ಲ. ವಿದ್ಯಾರ್ಥಿನಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಫಿ. 3ರಂದು. ಅದೇ ದಿನವೇ ಆರೋಪಿಗಳನ್ನು ಬಂಧಿಸಿದ್ದೆವು’ ಎಂದು ಇನ್‌ಸ್ಪೆಕ್ಟರ್ ನ್ಯಾಯಮಂಡಳಿಗೆ ತಿಳಿಸಿದ್ದಾರೆ.

ಅರ್ಜಿದಾರರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಕೆಎಟಿ ನೋಟಿಸ್ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT