ADVERTISEMENT

ಎಸ್ಪಿಗೆ ಮಾಹಿತಿ ಆಯೋಗ ಷೋಕಾಸ್ ನೋಟಿಸ್‌

ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗಳ ಭರ್ತಿಗೆ ನೇಮಕಾತಿ l ಉತ್ತರ ಪತ್ರಿಕೆ ದೃಢೀಕೃತ ಪ್ರತಿ ನೀಡಲು ನಕಾರ

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಬೆಂಗಳೂರು: ಸಬ್‌ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ಪರೀಕ್ಷೆ ಉತ್ತರ ಪತ್ರಿಕೆಯ ದೃಢೀಕೃತ ಪ್ರತಿ ನೀಡಲು ನಿರಾಕರಿಸಿರುವ ನೇಮಕಾತಿ ಮತ್ತು ತರಬೇತಿ ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿ ಎ.ಜಿ. ಈಶ್ವರಪ್ಪ ಅವರಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿರುವ ಮಾಹಿತಿ ಆಯೋಗ, ₹ 25,000 ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
 
2014ರಲ್ಲಿ 152 ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯಿತು. ಇದಕ್ಕಾಗಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಏರ್ಪಡಿಸಲಾಗಿತ್ತು.
 
ಆಯ್ಕೆ ಪಟ್ಟಿಯಲ್ಲಿ ಹೆಸರಿಲ್ಲದ   ತುಮಕೂರಿನ ಎನ್. ರಾಘವೇಂದ್ರ ಎಂಬುವರು 2015ರ ನವೆಂಬರ್‌ನಲ್ಲಿ  ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ , ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆಯ ದೃಢೀಕೃತ ಪ್ರತಿಗಳನ್ನು ನೀಡುವಂತೆ  ಕೋರಿದ್ದರು.
 
ಒಂದು ತಿಂಗಳ ನಂತರ ಹಿಂಬರಹ ನೀಡಿರುವ ಎ.ಜಿ. ಈಶ್ವರಪ್ಪ, ‘ನೀವು ಕೋರಿರುವ ಮಾಹಿತಿಯನ್ನು ಆರ್‌ಟಿಐ ಅಡಿ ಒದಗಿಸಲು ಅವಕಾಶ ಇಲ್ಲ’ ಎಂದು ತಿಳಿಸಿದ್ದರು.
 
ಇದನ್ನು ಪ್ರಶ್ನಿಸಿ ರಾಘವೇಂದ್ರ, ಮಾಹಿತಿ ಹಕ್ಕು ಆಯೋಗದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿರುವ  ಆಯೋಗದ ಆಯುಕ್ತ ಎನ್‌.ಪಿ. ರಮೇಶ್‌, ಇದೇ 9ರಂದು ಆದೇಶ ಹೊರಡಿಸಿದ್ದಾರೆ.
 
‘8 ದಿನಗಳಲ್ಲಿ ಉಚಿತವಾಗಿ ಅರ್ಜಿದಾರರಿಗೆ ಮಾಹಿತಿ ಒದಗಿಸಬೇಕು.  ಈ ಕುರಿತ ವರದಿಯೊಂದಿಗೆ ಮುಂದಿನ ವಿಚಾರಣೆಗೆ(ಸೆ.1) ಹಾಜರಾಗಬೇಕು’ ಎಂದೂ ತಿಳಿಸಿದ್ದಾರೆ. 
 
‘ಮಾಹಿತಿ ಒದಗಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಎಡಿಜಿಪಿ)  ರಾಘವೇಂದ್ರ ಔರಾದ್ ಕರ್ ಅವರಿಗೂ  ಸೂಚಿಸಿದ್ದಾರೆ.
****
ಮಾಹಿತಿ ನೀಡದಿರಲು ನಿರ್ಣಯ
ಉತ್ತರ ಪತ್ರಿಕೆಯ ಪ್ರತಿಗಳನ್ನು ನೀಡದಿರಲು ಎಡಿಜಿಪಿ ರಾಘವೇಂದ್ರ ಔರಾದ್‌ ಕರ್‌ ಅಧ್ಯಕ್ಷತೆಯ ನೇಮಕಾತಿ ಸಮಿತಿ 2016ರ ಜನವರಿ 22ರಂದು ನಿರ್ಣಯ ಕೈಗೊಂಡಿದೆ.

‘ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳಿಂದ ಮೌಲ್ಯಮಾಪನ ಮಾಡಿಸಲಾಗಿದೆ. ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆ ನೀಡಿದಲ್ಲಿ ಬೇರೆ ಉಪನ್ಯಾಸಕರಿಂದ ಮೌಲ್ಯಮಾಪನ ಮಾಡಿಸಿ ತಮಗೆ ಹೆಚ್ಚಿನ ಅಂಕ ಬರಬೇಕೆಂದು ಮನವಿ ಸಲ್ಲಿಸುವ ಸಾಧ್ಯತೆ ಇದೆ.’

‘ಇದರಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತದೆ. ಅಲ್ಲದೇ, ಉತ್ತರ ಪತ್ರಿಕೆಗಳನ್ನು ಅಭ್ಯರ್ಥಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿಯೂ ಇಲ್ಲ. ಹೀಗಾಗಿ ಉತ್ತರ ಪತ್ರಿಕೆ ನೀಡುವುದು ಬೇಡ’ ಎಂದು ಸಮಿತಿ ನಿರ್ಣಯ ಕೈಗೊಂಡಿದೆ.

ಈ ಪ್ರತಿಯನ್ನು ಆಯೋಗಕ್ಕೂ ಸಲ್ಲಿಸಿರುವ ಸಮಿತಿ, ಉತ್ತರ ಪತ್ರಿಕೆಯ ಪ್ರತಿ ಒದಗಿಸುವ ಸಂಬಂಧ ವಿನಾಯಿತಿ ನೀಡಬೇಕು’ ಎಂದು ಕೋರಿದೆ.    ‘ಈ ರೀತಿಯ ನಿರ್ಣಯ ಕೈಗೊಳ್ಳುವುದೇ ಕಾನೂನು ಬಾಹಿರ. ಯಾವುದೇ ಕಾರಣ ನೀಡದೆ ಮಾಹಿತಿ ಒದಗಿಸಬೇಕು’ ಎಂದು ಆಯೋಗ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT