ADVERTISEMENT

ಎಸ್‌ಸಿ, ಎಸ್‌ಟಿ ಜನರ ಹಿತಕಾಯುವ ಸುಗ್ರೀವಾಜ್ಞೆ ಏಕಿಲ್ಲ?: ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 8:21 IST
Last Updated 25 ಏಪ್ರಿಲ್ 2018, 8:21 IST
ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ)
ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ)   

ಕಲಬುರ್ಗಿ: ‘ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಂಡಿದೆ. ಈ ಸಮುದಾಯಗಳ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ಏಕೆ ಸುಗ್ರೀವಾಜ್ಞೆ ಹೊರಡಿಸಿಲ್ಲ’ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ ತನಗೆ ಬೇಕಿರುವ ವಿಷಯಗಳಿಗೆ ಮಾತ್ರ ಆಸಕ್ತಿ ವಹಿಸುತ್ತಿದೆ’ ಎಂದು ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ದೌರ್ಜನ್ಯವೆಸಗಿದವರ ಮೇಲೆ ಎಫ್‌ಐಆರ್‌ ದಾಖಲಿಸಿ ತಕ್ಷಣ ಬಂಧಿಸದಿದ್ದರೆ ದೌರ್ಜನ್ಯಕ್ಕೆ ದಾರಿಮಾಡಿಕೊಡುತ್ತದೆ. ಈ ಕಾಯ್ದೆ ಹಿಂದೆ ಹೇಗಿತ್ತೋ ಹಾಗೇ ಇರಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕಾಂಗ್ರೆಸ್‌ನ ಕೈಗೂ ಮುಸ್ಲಿಮರ ರಕ್ತದ ಕಲೆ ಅಂಟಿದೆ ಎಂಬ ಕಾಂಗ್ರೆಸ್‌ ಮುಖಂಡ ಸಲ್ಮಾನ್‌ ಖುರ್ಷಿದ್‌ ಹೇಳಿಕೆಯನ್ನು ಗಮನಿಸಿಲ್ಲ. ರಾಜ್ಯದಲ್ಲಿ ಪ್ರಚಾರಕ್ಕೆ ಪ್ರಿಯಾಂಕ ವಾದ್ರಾ ಬರಲ್ಲ. ಜೆಡಿಎಸ್‌ನೊಂದಿಗೆ ಚುನಾವಣೋತ್ತರ ಹೊಂದಾಣಿಕೆಯ ಪ್ರಶ್ನೆ ಊಹಾಪೋಹದಿಂದ ಕೂಡಿದೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೇ ಜೀವಬೆದರಿಕೆ ಇದ್ದರೆ, ನಮ್ಮಂಥವರ ಗತಿ ಏನು? ಅವರದ್ದೇ ಸರ್ಕಾರ ಇದ್ದು, ತನಿಖೆ ನಡೆಸಬೇಕು. ನನಗೂ ಬೆದರಿಕೆ ಕರೆ ಬಂದಿದ್ದವು. ದೂರು ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.