ADVERTISEMENT

ಏಳು ವರ್ಷದಲ್ಲಿ 1,782 ಸರ್ಕಾರಿ ಶಾಲೆಗಳಿಗೆ ಬೀಗ

ಸರ್ಕಾರಿ ಶಾಲೆಗಳ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 19:30 IST
Last Updated 4 ಸೆಪ್ಟೆಂಬರ್ 2017, 19:30 IST
ನಗರದ ವಿಧಾನಸೌಧದಲ್ಲಿ ಸೋಮವಾರ 'ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ' ಆಯೋಜಿದ್ದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಶ ಪ್ರೊ. ಎಸ್.ಜಿ ಸಿದ್ದರಾಮಯ್ಯ (ಮಧ್ಯದವರು) ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (ಎಡದಿಂದ ನಾಲ್ಕನೆಯವರು) ಅವರಿಗೆ ಸಲ್ಲಿಸಿದರು. (ಎಡದಿಂದ) ಸಾಹಿತಿ ಗೊ.ರು ಚನ್ನಬಸಪ್ಪ ಮತ್ತು ಚಂದ್ರಶೇಖರ ಪಾಟೀಲ ಇದ್ದಾರೆ. - ಪ್ರಜಾವಾಣಿ ಚಿತ್ರ
ನಗರದ ವಿಧಾನಸೌಧದಲ್ಲಿ ಸೋಮವಾರ 'ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ' ಆಯೋಜಿದ್ದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಶ ಪ್ರೊ. ಎಸ್.ಜಿ ಸಿದ್ದರಾಮಯ್ಯ (ಮಧ್ಯದವರು) ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (ಎಡದಿಂದ ನಾಲ್ಕನೆಯವರು) ಅವರಿಗೆ ಸಲ್ಲಿಸಿದರು. (ಎಡದಿಂದ) ಸಾಹಿತಿ ಗೊ.ರು ಚನ್ನಬಸಪ್ಪ ಮತ್ತು ಚಂದ್ರಶೇಖರ ಪಾಟೀಲ ಇದ್ದಾರೆ. - ಪ್ರಜಾವಾಣಿ ಚಿತ್ರ   

ಬೆಂಗಳೂರು: ಶಿಕ್ಷಣ ಮೂಲಭೂತ ಹಕ್ಕು ಎಂದು ಘೋಷಣೆಯಾಗಿದ್ದರು ಸಹ ರಾಜ್ಯದಲ್ಲಿ 2010ರಿಂದ 2017ರವರೆಗೆ 1,782 ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲಾಗಿದೆ. ಇದೇ ವೇಳೆ 3,186 ಖಾಸಗಿ ಶಾಲೆಗಳು ಪ್ರಾರಂಭವಾಗಿವೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಸಲ್ಲಿಸಿದ ವರದಿಯಲ್ಲಿ ಈ ಅಂಶ ಪ್ರಸ್ತಾಪವಾಗಿದೆ.

ಸರ್ಕಾರಿ ಶಾಲೆಗಳನ್ನು ಸದೃಢಗೊಳಿಸಿ, ಗುಣಮಟ್ಟದ ಶಿಕ್ಷಣ ನೀಡುವ ಸಂಬಂಧ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿಯಲ್ಲಿ ಒಟ್ಟಾರೆ 21 ಶಿಫಾರಸುಗಳನ್ನು ಮಾಡಲಾಗಿದೆ.

ADVERTISEMENT

ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿ ಏಳು ವರ್ಷ ಕಳೆದರೂ ಸರ್ಕಾರಿ ಶಾಲೆಗಳ ಸ್ಥಿತಿಗತಿ ಸುಧಾರಣೆಯಾಗಿಲ್ಲ. ವಿದ್ಯಾರ್ಥಿಗಳ ಕೊರತೆ ನೆಪ ಮಾಡಿಕೊಂಡು ಶಾಲೆಗಳನ್ನು ಮುಚ್ಚಲಾಗಿದೆ. ಅಷ್ಟೇ ಅಲ್ಲದೆ, ಕೆಲವು ಶಾಲೆಗಳನ್ನು ಅಕ್ಕಪಕ್ಕದ ಶಾಲೆಗಳೊಂದಿಗೆ ವಿಲೀನ ಮಾಡಲಾಗಿದೆ. ಆದರೆ, ಖಾಸಗಿ ಶಾಲೆಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ ಎಂದು ಹೇಳಲಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಶಿಥಿಲಗೊಂಡ ಕೊಠಡಿಗಳ ಸಂಖ್ಯೆ ಈ ಏಳು ವರ್ಷಗಳಲ್ಲಿ 63,415 ರಿಂದ 73,129ಕ್ಕೆ ಏರಿಕೆ ಆಗಿದೆ. ಶೌಚಾಲಯ, ವಿದ್ಯುತ್, ಗ್ರಂಥಾಲಯ, ಕುಡಿಯುವ ನೀರು ಆಟದ ಮೈದಾನದಂತಹ ಸೌಲಭ್ಯಗಳು ಅಂಕಿ ಅಂಶಗಳಲ್ಲಿ ಮಾತ್ರ ಕಾಣಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈಗ ಮುಚ್ಚಿರುವ ಸರ್ಕಾರಿ ಶಾಲೆಗಳನ್ನು ಪುನರಾರಂಭಿಸಬೇಕು, ಶಾಲೆಯ ಜಾಗವನ್ನು ಖಾಸಗಿಯವರು ಅಥವಾ ಬೇರೆ ಇಲಾಖೆಗಳಿಗೆ ಪರಭಾರೆ ಮಾಡದಂತೆ ನೋಡಿಕೊಳ್ಳಬೇಕು, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಸಮಿತಿಯು ಸರ್ಕಾರವನ್ನು ಒತ್ತಾಯಿಸಿದೆ.

ಆರ್‌ಟಿಇ ಶುಲ್ಕ ಭರಿಸುವುದು ಬೇಡ: ಆರ್‌ಟಿಇ ಯೋಜನೆಯಡಿ ಖಾಸಗಿ ಶಾಲೆಗಳಿಗೆ ಶೇ 25ರಷ್ಟು ಮಕ್ಕಳನ್ನು ಕಳುಹಿಸಿ, ಅವರ ಶುಲ್ಕವನ್ನು ಸರ್ಕಾರದಿಂದಲೇ ಪಾವತಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದೂ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

‘ಆರ್‌ಟಿಇಗಾಗಿ 2016–17ರಲ್ಲಿ ₹ 390 ಕೋಟಿ ಪಾವತಿಸಲಾಗಿದೆ. ಕೆಲವೇ ವರ್ಷಗಳಲ್ಲಿ ಇದು ಹಲವು ಪಟ್ಟು ಹೆಚ್ಚಾಗುತ್ತದೆ. ಆರ್‌ಟಿಇ ಮೂಲಕ ಪ್ರವೇಶ ಪಡೆದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಆಯಾ ಖಾಸಗಿ ಶಾಲೆಗಳ ಸಾಮಾಜಿಕ ಜವಾಬ್ದಾರಿ ಆಗಬೇಕು. ತಮಿಳು ನಾಡಿನಲ್ಲಿ ಆರ್‌ಟಿಇ ಮೂಲಕ ಪ್ರವೇಶ ಪಡೆದ ಮಕ್ಕಳ ಶುಲ್ಕವನ್ನು ಸರ್ಕಾರ ಪಾವತಿಸುತ್ತಿಲ್ಲ. ಕರ್ನಾಟಕದಲ್ಲಿಯೂ ಇದೇ ವ್ಯವಸ್ಥೆ ತರಬೇಕು’ ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಒತ್ತಾಯಿಸಿದರು.

‘ಸರ್ಕಾರಿ ಶಾಲೆಗಳ ಸಬಲೀಕರಣ ಆಗಬೇಕಾದರೆ ಎಲ್ಲ ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಸುಗ್ರೀವಾಜ್ಞೆ ಹೊರಡಿಸಬೇಕು’ ಎಂದೂ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆಗ್ರಹಿಸಿದರು.

‘ಉತ್ತರ ಪ್ರದೇಶದಲ್ಲಿ ಈಗಾಗಲೇ ಇಂತಹ ಸುಗ್ರೀವಾಜ್ಞೆ ಹೊರಿಡಸಲಾಗಿದೆ. ಅದೇ ರೀತಿ ಇಲ್ಲೂ ಜಾರಿ ಮಾಡಿದರೆ ಕ್ರಾಂತಿಕಾರಿ ಹೆಜ್ಜೆ ಆಗುತ್ತದೆ’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಧ್ವನಿಗೂಡಿಸಿದರು.

‘ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗಳು ಇಲ್ಲದಿರುವುದರಿಂದ ನೇರವಾಗಿ ಒಂದನೇ ತರಗತಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಖಾಸಗಿ ಶಾಲೆಗಳು ಎಲ್‌ಕೆಜಿ, ಯುಕೆಜಿಯನ್ನು ಪ್ರಾರಂಭಿಸಿ ಮಕ್ಕಳನ್ನು ಆಕರ್ಷಿಸುತ್ತಿವೆ. ಹೀಗಾಗಿ ಪೂರ್ವ ಪ್ರಾಥಮಿಕ ಆರಂಭಿಸಲು ಸರ್ಕಾರ ತಕ್ಷಣ ಕ್ರಮ ವಹಿಸಬೇಕು ಎಂದು ಸಮಿತಿಯು ಒತ್ತಾಯಿಸಿದೆ’ ಎಂದು ಎಸ್‌.ಜಿ. ಸಿದ್ದರಾಮಯ್ಯ ವಿವರಿಸಿದರು.

ಶಿಫಾರಸು ನಿರ್ಲಕ್ಷಿಸುವುದಿಲ್ಲ
ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕನ್ನಡಕ್ಕೆ ಸಂಬಂಧಿಸಿದಂತೆ ಯಾವುದೇ ವರದಿಗಳು ಬಂದರೂ ಸರ್ಕಾರ ನಿರ್ಲಕ್ಷ್ಯ ಮಾಡುವುದಿಲ್ಲ. ಸರ್ಕಾರಿ ಶಾಲೆಗಳಿಗೆ ಹೆಚ್ಚಾಗಿ ಬಡವರು, ಶೋಷಿತ ವರ್ಗದವರ ಮಕ್ಕಳೇ ಪ್ರವೇಶ ಪಡೆಯುತ್ತಾರೆ. ಬಜೆಟ್‌ನಲ್ಲಿ ₹ 18,000 ಕೋಟಿ ಮೀಸಲಿಡಲಾಗಿದೆ. ಆದರೂ ಅಗತ್ಯ ಮೌಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ.

ಶಾಲೆಗಳ ಸಬಲೀಕರಣಕ್ಕಾಗಿ ಸಮಿತಿ ಅನೇಕ ಉತ್ತಮ ಶಿಫಾರಸು ಮಾಡಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಎಲ್ಲ ಶಿಫಾರಸು ಜಾರಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತದೆ’ ಎಂದು ಹೇಳಿದರು.
*
ಶಾಲೆಗಳ ಸಬಲೀಕರಣಕ್ಕಾಗಿ ಸಮಿತಿಯ ಶಿಫಾರಸುಗಳು

* ಸರ್ಕಾರಿ ಶಾಲೆಗಳಲ್ಲಿ ಹೊಸ ತಂತ್ರಜ್ಞಾನ, ಇ–ಗ್ರಂಥಾಲಯ, ಇ–ಬುಕ್ ಒದಗಿಸಬೇಕು

* ಶಿಕ್ಷಕರಿಗೆ ಬೋಧನಾ ಚಟುವಟಿಕೆ ಬಿಟ್ಟು ಬೇರೆ ಕೆಲಸಗಳನ್ನು ವಹಿಸಬಾರದು

* ತರಗತಿಗೊಬ್ಬ, ವಿಷಯಕ್ಕೊಬ್ಬ ಶಿಕ್ಷಕರ ನೇಮಕ

*   ಇಂಗ್ಲಿಷ್ ತರಬೇತಿ ಪಡೆದ ಶಿಕ್ಷಕರಿಂದ ಒಂದನೇ ತರಗತಿಯಿಂದ ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಸಬೇಕು

* ಅತ್ಯುತ್ತಮ ಕೆಲಸ ಮಾಡುತ್ತಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ (ಎಸ್‌ಡಿಎಂಸಿ) ಸಮಿತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಬೇಕು

* ರಾಜ್ಯ ಸರ್ಕಾತ ತನ್ನ ಆಯವ್ಯಯದ ಶೇ 25ರಷ್ಟು ಹಣವನ್ನು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಒದಗಿಸಬೇಕು

* ಖಾಸಗಿ ಶಾಲೆಗಳಲ್ಲಿ ವಂತಿಗೆ ಶುಲ್ಕ (ಕ್ಯಾಪಿಟೇಷನ್) ಸಂಗ್ರಹಿಸುವುದಕ್ಕೆ ಕಡಿವಾಣ ಹಾಕಬೇಕು

* ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಬೇಕು. ಮೇಲುಸ್ತುವಾರಿಗೆ ಸಮಿತಿ ರಚಿಸಬೇಕು

* ಪ್ರಾಥಮಿಕ ಶಿಕ್ಷಣ ರಾಜ್ಯಭಾಷೆಯಲ್ಲಿಯೇ ಇರುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು

* ಅಂಗನವಾಡಿ ಕೇಂದ್ರಗಳ ಪುನಶ್ಚೇತನ ಆಗಬೇಕು, ಪ್ರತಿ ಗ್ರಾಮದಲ್ಲೂ ಶಿಶುಪಾಲನಾ ಕೇಂದ್ರ ತೆರೆಯಬೇಕು

* ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರ ಪ್ರದೇಶಗಳಲ್ಲಿ ವಾರ್ಡ್‌ಗೆ ಒಂದರಂತೆ ಕೇಂದ್ರೀಯ ವಿದ್ಯಾಲಯದ ಮಾದರಿ ಶಾಲೆ ಪ್ರಾರಂಭಿಸಬೇಕು

* ದತ್ತು ಯೋಜನೆ, ಸಾರ್ವಜನಿಕ ಖಾಸಗಿ ಸಹಭಾಗಿತ್ವದಂತಹ ಯೋಜನೆಗಳನ್ನು ನಿಲ್ಲಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.