ADVERTISEMENT

ಏ. 1ರಿಂದ 3 ದಿನ ಮಾತ್ರ ಬ್ಯಾಂಕ್‌ ವಹಿವಾಟು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಬೆಂಗಳೂರು: ‘ರಾಜ್ಯದಲ್ಲಿ ಶನಿವಾರ, ಸೋಮವಾರ ಮತ್ತು ಮಂಗಳವಾರ ಬ್ಯಾಂಕುಗಳು ವಹಿವಾಟಿಗೆ ತೆರೆದಿರುತ್ತವೆ’ ಎಂದು ಭಾರತೀಯ ರಾಷ್ಟ್ರೀಯ ಬ್ಯಾಂಕ್‌ ನೌಕರರ ಒಕ್ಕೂಟದ (ಐಎನ್‌ಬಿಇಎಫ್‌) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ  ಶುಕ್ರವಾರ ಹೇಳಿದರು.

ಮಾ. 28ರಿಂದ ಆರಂಭಿಸಿ ಏ.  5ರ ವರೆಗೂ ಬ್ಯಾಂಕಿಂಗ್‌ ಸೇವೆಗೆ ಅಡ್ಡಿಯಾಗಲಿದೆ ಎಂಬ   ಭಾರತೀಯ ವಾಣಿಜ್ಯ ಮಹಾಸಂಘದ (ಅಸೋಚಾಂ) ಹೇಳಿಕೆ ಕುರಿತಾಗಿ ಅವರು ಪ್ರಜಾವಾಣಿಗೆ ಸ್ಪಷ್ಟನೆ ನೀಡಿದರು.

‘ಶನಿವಾರ ರಾಮನವಮಿಯ ನಿರ್ಬಂಧಿತ ರಜೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ಕಚೇರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇದರಿಂದ ಬ್ಯಾಂಕಿನ ವಹಿವಾಟಿಗೆ ಧಕ್ಕೆ ಇಲ್ಲ.  ಪ್ರಸಕ್ತ ಹಣಕಾಸು ವರ್ಷದ ಆದಾಯ ತೆರಿಗೆ ಪಾವತಿಗೆ ಮಾರ್ಚ್‌ 31 ಕಡೇ ದಿನ. ಹೀಗಾಗಿ ಅಂದು ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡುವ ಸಾಧ್ಯತೆ ಇದೆ. ಕಳೆದ ವರ್ಷ  ಆರ್‌ಬಿಐ ಸೂಚನೆಯಂತೆ ಒಂದು ಗಂಟೆ ಹೆಚ್ಚುವರಿಯಾಗಿ ಬ್ಯಾಂಕಿಂಗ್‌ ವಹಿವಾಟು ನಡೆಸಲಾಗಿತ್ತು ಎಂದು ಅವರು ತಿಳಿಸಿದರು.

ಏಪ್ರಿಲ್‌ 1 ನ್ನು (ಬುಧವಾರ) ಹಣಕಾಸು ವರ್ಷ ಎಂದು ಪರಿಗಣಿಸಲಾಗುವುದು. ಅಂದು ಗ್ರಾಹಕರಿಗೆ ವಹಿವಾಟು ನಡೆಸಲು ಅವಕಾಶ ಇಲ್ಲ. ಆದರೆ ಬ್ಯಾಂಕಿನ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ ಎಂದು ಮಾಹಿತಿ ನೀಡಿದರು.  ಮಹಾವೀರ ಜಯಂತಿ ಪ್ರಯುಕ್ತ ಏ. 2ರಂದು ಮತ್ತು ಗುಡ್‌ಫ್ರೈಡೆಯಿಂದಾಗಿ ಏ. 3ರಂದು ಸರ್ಕಾರಿ ರಜೆ ಇದೆ. ಹೀಗಾಗಿ ಏ. 1 ರಿಂದ ಏ.3ರ ವರೆಗೆ ಬ್ಯಾಂಕ್‌ ಸಂಪೂರ್ಣವಾಗಿ ಮುಚ್ಚಿರುತ್ತದೆ.

ಏ. 4 ಶನಿವಾರ ಗ್ರಾಹಕರು  ಅರ್ಧ ದಿನದ ವಹಿವಾಟು ನಡೆಸಬಹುದು ಎಂದು ಐಎನ್‌ಬಿಇಎಫ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ವಿವರಿಸಿದರು.

ಹೆಚ್ಚುವರಿ ಕೆಲಸ
ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಎಲ್ಲಾ ಶಾಖೆಗಳೂ ಶನಿವಾರ (ಏಪ್ರಿಲ್‌ 4) ಎರಡು ಗಂಟೆ ಹೆಚ್ಚುವರಿ ಕೆಲಸ ಮಾಡಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏಪ್ರಿಲ್‌ 1 ರಿಂದ 3ರವರೆಗೆ ಮೂರು ದಿನ ಬ್ಯಾಂಕಿನ ವಹಿವಾಟು ನಡೆಯುವುದಿಲ್ಲ. ಇದನ್ನು ಗಮನದಲ್ಲಿಟ್ಟು ಕೊಂಡು ರಾಜ್ಯದ ಗ್ರಾಹಕರ ಅನುಕೂಲಕ್ಕಾಗಿ  ಹೆಚ್ಚುವರಿ ಕೆಲಸ ಮಾಡಲು ನಿರ್ಧರಿಸಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ಪ್ರಕಟಣೆಯಲ್ಲಿ  ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT