ADVERTISEMENT

ಐಎಸ್‌ ಸೇರಲು ನಕಲಿ ಪಾಸ್‌ಪೋರ್ಟ್‌ ಬಳಕೆ?

250 ಪ್ರಕರಣ ದಾಖಲು

ರಾಜೇಶ್ ರೈ ಚಟ್ಲ
Published 27 ಆಗಸ್ಟ್ 2016, 20:16 IST
Last Updated 27 ಆಗಸ್ಟ್ 2016, 20:16 IST
ನಕಲಿ ಪಾಸ್‌ಪೋರ್ಟ್‌ ಹೊಂದಿರುವವರು
ನಕಲಿ ಪಾಸ್‌ಪೋರ್ಟ್‌ ಹೊಂದಿರುವವರು   

ಕಾಸರಗೋಡು (ಕೇರಳ): ಜಿಲ್ಲೆಯ ಪಡನ್ನ ಮತ್ತು ತ್ರಿಕರಿಪುರ ಗ್ರಾಮಗಳ 17 ಮಂದಿ ಸೇರಿದಂತೆ ಕೇರಳ ರಾಜ್ಯದ ಒಟ್ಟು 21 ಮಂದಿ ಇಸ್ಲಾಮಿಕ್ ಸ್ಟೇಟ್‌ (ಐಎಸ್‌) ಉಗ್ರವಾದಿ ಸಂಘಟನೆ ಸೇರಿದ್ದಾರೆಂಬ ಶಂಕೆ ಇನ್ನೂ ನಿಗೂಢವಾಗಿರುವ ಮಧ್ಯೆ, ಅದೇ ಜಿಲ್ಲೆಯಲ್ಲಿ ಬೆಳಕಿಗೆ ಬಂದ 250 ನಕಲಿ ಪಾಸ್‌ಪೋರ್ಟ್‌ ಪ್ರಕರಣಗಳ ತನಿಖೆ ತೀವ್ರಗೊಂಡಿದೆ.

ಧಾರ್ಮಿಕ ಅಧ್ಯಯನದ ಹೆಸರಿನಲ್ಲಿ ಮಧ್ಯಪ್ರಾಚ್ಯ ದೇಶಗಳಿಗೆ ತೆರಳಿ ನಾಪತ್ತೆಯಾದ 21 ಮಂದಿ ಐಎಸ್‌ ಸೇರಿದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದೆ. ನಕಲಿ ಪಾಸ್‌ಪೋರ್ಟ್‌ಗಳನ್ನು ಬಳಸಿ ಹಲವರು ವಿದೇಶಗಳಿಗೆ ತೆರಳಿರುವ ಮಾಹಿತಿಯನ್ನು ಈ ತಂಡ ಸಂಗ್ರಹಿಸಿದೆ. ಕಾಸರಗೋಡು ಜಿಲ್ಲೆಯ ಕಾಂಞಂಗಾಡ್‌, ನೀಲೇಶ್ವರ, ಪಡನ್ನ ಪ್ರದೇಶವನ್ನು ಕೇಂದ್ರೀಕರಿಸಿ 2010ರ ನಂತರ  ಈ ಪಾಸ್‌ಪೋರ್ಟ್‌ಗಳನ್ನು  ಪಡೆಯಲಾಗಿದೆ. ಈ ಪ್ರಕರಣ 2012ರಲ್ಲಿ ಮೊದಲಿಗೆ ಬೆಳಕಿಗೆ ಬಂದಿದೆ.

2012ರಿಂದ 2015ರ ವರೆಗೆ ಸ್ಥಳೀಯ ಪೊಲೀಸರು ಈ ಕುರಿತ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದರೂ ಯಾವುದೇ ಪ್ರಗತಿ ಉಂಟಾಗಿರಲಿಲ್ಲ. ನಾಪತ್ತೆಯಾದ ಹಲವರು ಐಎಸ್‌  ಸಂಪರ್ಕ ಸಾಧಿಸಿರುವ ಮಾಹಿತಿ ಸಿಗುತ್ತಿದ್ದಂತೆ ಈ ಎಲ್ಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

‘ಜಿಲ್ಲೆಯ ಹೊಸದುರ್ಗ ಪೊಲೀಸ್‌ ಠಾಣೆಯಲ್ಲಿ 250 ನಕಲಿ ಪಾಸ್‌ಪೋರ್ಟ್‌ಗಳ ಪ್ರಕರಣ ದಾಖಲಾಗಿವೆ. ಈ ಪೈಕಿ 30 ಪ್ರಕರಣಗಳನ್ನು ಕಾಸರಗೋಡು ಮತ್ತು  13 ಪ್ರಕರಣಗಳನ್ನು ಕಣ್ಣೂರು ಜಿಲ್ಲೆಯ ಸಿಐಡಿ ವಿಭಾಗದ ಅಪರಾಧ ಪತ್ತೆ ದಳಕ್ಕೆ (ಕ್ರೈಂ ಬ್ರಾಂಚ್) ಹಸ್ತಾಂತರಿಸಲಾಗಿದೆ’ ಎಂದು ಕಾಸರಗೋಡು ಜಿಲ್ಲಾ ಅಪರಾಧ ಪತ್ತೆ ದಳದ ಮುಖ್ಯಸ್ಥ ಸತೀಶ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಕಲಿ ಪಾಸ್‌ಪೋರ್ಟ್‌ ಬಳಸಿ ಕೆಲವರು ಐಎಸ್‌ ಸೇರಿರುವ ಸಂಗತಿಯನ್ನು ಖಚಿತಪಡಿಸಿರುವುದೇ ತನಿಖೆ ತೀವ್ರಗೊಳಿಸಲು ಕಾರಣವಾಗಿದೆ. ಆರೋಪಿಗಳ ಸಂಪೂರ್ಣ ಮಾಹಿತಿಯನ್ನು ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೂ ರವಾನಿಸಲಾಗಿದೆ’ ಎಂದೂ ಅವರು ಮಾಹಿತಿ ನೀಡಿದರು.

ಕಣ್ಣೂರು ಜಿಲ್ಲೆ ಅಪರಾಧ ಪತ್ತೆ ದಳದ ಮುಖ್ಯಸ್ಥ ಸಿ.ವಿ. ಜಾನ್‌ ಮಾತನಾಡಿ, ‘ನಮ್ಮ ಜಿಲ್ಲೆಯ ವ್ಯಾಪ್ತಿಯ 13 ನಕಲಿ ಪಾಸ್‌ಪೋರ್ಟ್‌ ಪ್ರಕರಣಗಳ ಪೈಕಿ ನಾಲ್ವರು ಕೋಯಿಕ್ಕೋಡು ಮತ್ತು ತಿರುವನಂತಪುರ ವಿಮಾನ ನಿಲ್ದಾಣದ ಮೂಲಕ 2012ರಲ್ಲೇ ವಿದೇಶಕ್ಕೆ ಹಾರಿದ ಮಾಹಿತಿ ಸಿಕ್ಕಿದೆ. ಇತ್ತೀಚೆಗೆ ಐಎಸ್‌ ಸೇರಲು ತೆರಳಿದ್ದಾರೆ ಎಂದು ಶಂಕಿಸಲಾದವರು ನೆಲೆಸಿದ್ದ ಪಡನ್ನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ವಿಳಾಸ ಬಹುತೇಕ ಪಾಸ್‌ಪೋರ್ಟ್‌ಗಳಲ್ಲಿರುವುದು ಹೆಚ್ಚಿನ ಆತಂಕಕ್ಕೆ ಕಾರಣ.

ನಕಲಿ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ಶಾಲಾ ದಾಖಲೆಗಳನ್ನು ಬಳಸಿ ನಕಲಿ ಪಾಸ್‌ಪೋರ್ಟ್‌ಗಳನ್ನು ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಇದರ ಹಿಂದೆ ಅಧಿಕಾರಿಗಳು, ಅಂಚೆ ಸಿಬ್ಬಂದಿ ಭಾಗಿಯಾಗಿರುವ ಶಂಕೆ ಇದೆ. ಈ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ. ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದೂ ಅವರು ಹೇಳಿದರು.

ನಕಲಿ ಪಾಸ್‌ಪೋರ್ಟ್‌ಗಳನ್ನು ಉಗ್ರಗಾಮಿ ಸಂಘಟನೆಗಳಿಗೆ ಸೇರಿದ ಹಲವರು ಪಡೆದಿರುವ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ನಕಲಿ ಪಾಸ್‌ಪೋರ್ಟ್‌ಗಳಲ್ಲಿ ಭಾವಚಿತ್ರ ಹೊಂದಿರುವವರ ಕುರಿತು ಮಾಹಿತಿ ಲಭಿಸಿದವರು ಅಪರಾಧ ಪತ್ತೆ ದಳಕ್ಕೆ ಮಾಹಿತಿ ನೀಡುವಂತೆ ಅವರು ವಿನಂತಿಸಿದರು.
*
ಎರಡೆರಡು ಪಾಸ್‌ಪೋರ್ಟ್: ಇಬ್ಬರ ಬಂಧನ
ನಕಲಿ ವಿಳಾಸ ನೀಡಿ ಎರಡು ಪಾಸ್‌ಪೋರ್ಟ್‌ ಪಡೆದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕುಂಬಳೆ ನಾಸೀರ್ ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ. ಈತ 1997ರ ಸೆಪ್ಟಂಬರ್ 25ರಂದು ಪಡೆದ ಪಾಸ್‌ಪೋರ್ಟ್‌ನಲ್ಲಿ ನಾಸೀರ್ ಶಿರಿಯಾ ಎಂಬ ಹೆಸರಿದೆ. 2006 ಜೂನ್ 28ರಂದು ಪಡೆದ ಪಾಸ್‌ಪೋರ್ಟ್‌ನಲ್ಲಿ ತಳಿಪರಂಬ ಮೊಹಮ್ಮದ್ ನಾಸೀರ್ ಎಂಬ ಹೆಸರು ನೀಡಿದ್ದಾನೆ. ಈ ಎರಡೂ ಪಾಸ್‌ಪೋರ್ಟ್‌ ಬಳಸಿ ಹಲವು ಬಾರಿ ಈತ ವಿದೇಶ ಪ್ರಯಾಣ ನಡೆಸಿರುವುದು ತನಿಖೆಯಿಂದ ಪತ್ತೆ ಹಚ್ಚಲಾಗಿದೆ.

ಕುಂಬಳೆ ಪೊಲೀಸ್ ಠಾಣೆಯಲ್ಲಿ 2014ರಲ್ಲಿ ಈ ಪ್ರಕರಣ ದಾಖಲಾಗಿತ್ತು. ಆರೋಪಿ ವಿದೇಶದಲ್ಲಿ ಇದ್ದುದರಿಂದ ಲುಕ್‌ಔಟ್ ನೋಟಿಸ್‌ ಕೂಡಾ ಜಾರಿಗೊಳಿಸಲಾಗಿತ್ತು. ಮೇ 28ರಂದು ತವರಿಗೆ ಬಂದ ಆರೋಪಿ, ಬಂಧನ ಭೀತಿಯಿಂದ ಪೊಲೀಸರಿಗೆ ಶರಣಾಗಿದ್ದಾನೆ.

ಎರಡು ಪಾಸ್‌ಪೋರ್ಟ್‌ ಹೊಂದಿದ್ದ, ಕೊಲ್ಲಿ ರಾಷ್ಟ್ರದಲ್ಲಿ ವ್ಯಾಪಾರಿಯಾಗಿದ್ದ ಕಾಸರಗೋಡಿನ ಪೆರಿಯಾಟಡ್ಕದ ಪಿ.ಎಚ್. ಇಬ್ರಾಹಿಂ ಎಂಬಾತನನ್ನೂ ಬಂಧಿಸಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಸುಳ್ಳು ವಿಳಾಸ ಮತ್ತು ಇತರ ದಾಖಲೆಗಳನ್ನು ನೀಡಿ ಪಾಸ್‌ಪೋರ್ಟ್ ಪಡೆದಿರುವುದನ್ನು ಪತ್ತೆ ಮಾಡಲಾಗಿದೆ ಎಂದು ಕ್ರೈ ಬ್ರಾಂಚ್‌ ಅಧಿಕಾರಿ ಸತೀಶ್‌ಕುಮಾರ್‌ ತಿಳಿಸಿದರು.
*
ನಕಲಿ ಪಾಸ್‌ಪೋರ್ಟ್‌ ಬಳಸಿ ಕೆಲವರು ಐಎಸ್‌ ಸೇರಿರುವ ಶಂಕೆ ಇದೆ. ಹೀಗಾಗಿ, ಈ ಪ್ರಕರಣಗಳನ್ನು ಆಂತರಿಕ ಭದ್ರತೆಗೆ ಬೆದರಿಕೆ ಉಂಟು ಮಾಡುವ ಗಂಭೀರ ವಿಚಾರವೆಂದು ಪರಿಗಣಿಸಲಾಗಿದೆ.
ಎ.ವಿ. ಜಾನ್‌,
ಅಪರಾಧ ಪತ್ತೆ ದಳದ ಮುಖ್ಯಸ್ಥ, ಕಣ್ಣೂರು ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT