ADVERTISEMENT

ಐಟಿ ಅಧಿಕಾರಿ ಪುತ್ರನ ಉಸಿರುಗಟ್ಟಿಸಿ ಹತ್ಯೆ

ಕುಟುಂಬದ ಆಪ್ತನೇ ಸಂಚಿನ ರೂವಾರಿ * ಕೊಂದು ಶವವನ್ನು ಕೆರೆಗೆ ಬಿಸಾಡಿದ್ದ ಹಂತಕರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 20:29 IST
Last Updated 22 ಸೆಪ್ಟೆಂಬರ್ 2017, 20:29 IST
ಮೃತನಾದ ಶರತ್
ಮೃತನಾದ ಶರತ್   

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿ ವಿ.ನಿರಂಜನ್‌ಕುಮಾರ್ ಅವರ ಪುತ್ರ ಶರತ್‌ (19) ಅವರನ್ನು ಸೆ.12ರಂದು ಅಪಹರಿಸಿದ್ದ ದುಷ್ಕರ್ಮಿಗಳು, ಅದೇ ದಿನ ಅವರನ್ನು ಉಸಿರುಗಟ್ಟಿಸಿ ಕೊಂದು ಬೆಂಗಳೂರು ಹೊರವಲಯದಲ್ಲಿರುವ ಕು‌ರುಬನಪಾಳ್ಯದ ಕಲ್ಲುಕ್ವಾರಿಯಲ್ಲಿ ಶವ ಹೂತಿದ್ದ ಸಂಗತಿ ಬಯಲಾಗಿದೆ.

ಶರತ್‌ನ ಅಕ್ಕನ ಸಹಪಾಠಿಯಾಗಿದ್ದ ವಿಶಾಲ್‌ನೇ ಸಂಚಿನ ರೂವಾರಿಯಾಗಿದ್ದು, ತನ್ನ ಮೇಲೆ ಅನುಮಾನ ಬರಬಾರದೆಂದು ಮೃತರ ಪೋಷಕರ ಜತೆ ತಾನೂ ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟು ಬಂದಿದ್ದ. ಆದರೆ ಈಗ, ಮೊಬೈಲ್ ಕರೆ ವಿವರ (ಸಿಡಿಆರ್) ನೀಡಿದ ಸುಳಿವು ಪ್ರಕರಣದ ರಹಸ್ಯವನ್ನು ಬಯಲು ಮಾಡಿದೆ.

‘ಶರತ್ ಹತ್ಯೆ ಸಂಬಂಧ ಬೆಂಗಳೂರಿನ ಉಲ್ಲಾಳದ ಎಚ್‌.ಪಿ.ವಿಶಾಲ್ ಅಲಿಯಾಸ್ ವಿಶು (21), ತಾವರೆಕೆರೆಯ ವಿನಯ್‌ಪ್ರಸಾದ್ ಅಲಿಯಾಸ್ ವಿಕ್ಕಿ (24), ಕರಣ್ ಪೈ ಅಲಿಯಾಸ್ ಕರ್ಣ (22) ಹಾಗೂ ವಿನೋದ್ ಕುಮಾರ್ (24) ಎಂಬುವರನ್ನು ಬಂಧಿಸಿದ್ದೇವೆ. ಇನ್ನೊಬ್ಬ ಆರೋಪಿ ಶಾಂತಕುಮಾರ್ ಅಲಿಯಾಸ್ ಶಾಂತ ತಲೆಮರೆಸಿಕೊಂಡಿದ್ದಾನೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಹೀಗೆ ಸಂಚು: ‘ಶರತ್‌ ಅಕ್ಕ ಶಾಲಿನಿ ಹಾಗೂ ಆರೋಪಿ ವಿಶಾಲ್ 5ರಿಂದ 9ನೇ ತರಗತಿವರೆಗೆ ಸಹಪಾಠಿಗಳಾಗಿದ್ದರು. ಈ ಗೆಳೆತನದಿಂದಾಗಿ ಆತ ಆಗಾಗ್ಗೆ ಅವರ ಮನೆಗೂ ಹೋಗಿ ಬರುತ್ತಿದ್ದ. ಹೀಗೆ ಪೋಷಕರಿಗೂ ಆಪ್ತನಾಗಿದ್ದ ಆತ, ಶರತ್ ಅವರನ್ನು ಅಪಹರಿಸಿ ₹ 50 ಲಕ್ಷ ಸುಲಿಗೆ ಮಾಡಲು ನಿರ್ಧರಿಸಿದ್ದ. ಇದಕ್ಕೆ ತನ್ನ ಪ್ರೇಯಸಿಯ ಚಿಕ್ಕಪ್ಪ ವಿನಯ್‌ನ ನೆರವು ಕೇಳಿದ್ದ’ ಎಂದು ತನಿಖಾಧಿಕಾರಿಗಳು ತಿಳಿಸಿದರು.

‘ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ವಿನಯ್, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕೃತ್ಯಕ್ಕೆ ಒಪ್ಪಿಕೊಂಡಿದ್ದ. ಅಲ್ಲದೆ, ಸಹಚರರಾದ ಶಾಂತಕುಮಾರ್ ಹಾಗೂ ಕರಣ್‌ಪೈ ಅವರಿಗೂ ಆತನೇ ಒಪ್ಪಿಸಿದ್ದ. ಸೆ.10ರ ಸಂಜೆ ಉಲ್ಲಾಳ ಆರ್‌ಟಿಒ ಕಚೇರಿ ಬಳಿ ಸೇರಿದ್ದ ಈ ನಾಲ್ವರು, ಯಾವ ರೀತಿ ಅಪಹರಣ ಮಾಡಬೇಕು ಹಾಗೂ ಪೊಲೀಸರಿಗೆ ಸುಳಿವು ಸಿಗದಂತೆ ಹೇಗೆ ಸಾಕ್ಷ್ಯಗಳನ್ನು ನಾಶಪಡಿಸಬೇಕು ಎಂಬ ಬಗ್ಗೆ ಎರಡು ತಾಸು ಚರ್ಚೆ ನಡೆಸಿದ್ದರು. ಅಂತಿಮವಾಗಿ ಸೆ.12ರಂದು ಶರತ್ ಅವರನ್ನು ಅಪಹರಿಸುವ ನಿರ್ಧಾರಕ್ಕೆ ಬಂದಿದ್ದರು’ ಎಂದು ಮಾಹಿತಿ ನೀಡಿದರು.

ಮಧ್ಯಾಹ್ನ ಸಿನಿಮಾ, ಸಂಜೆ ಅಪಹರಣ: ಸೆ.11ರ ರಾತ್ರಿಯೇ ಎರಡು ಕೈಗೌಸು, ಹಗ್ಗ ಹಾಗೂ ಚಾಕು ಖರೀದಿಸಿದ್ದ ಆರೋಪಿಗಳು, ಪೂರ್ವಯೋಜಿತ ಸಂಚಿನಂತೆ ಮರುದಿನ ಬೆಳಿಗ್ಗೆಯೇ ಕೆಂಗೇರಿ ಮುಖ್ಯರಸ್ತೆಯಲ್ಲಿ ಸೇರಿದ್ದರು. ಜನರ ಓಡಾಟ ಹೆಚ್ಚಿದ್ದ ಕಾರಣ ರಾತ್ರಿ ವೇಳೆ ಅಪಹರಿಸುವುದೇ ಸೂಕ್ತವೆಂಬ ನಿರ್ಧಾರಕ್ಕೆ ಬಂದ ಅವರು, ಅಲ್ಲಿಯವರೆಗೆ ಕಾಲಹರಣ ಮಾಡಲು ಸಮೀಪದ ಚಿತ್ರಮಂದಿರದಲ್ಲಿ ‘ಮುಗುಳುನಗೆ’ ಸಿನಿಮಾಕ್ಕೆ ಹೋಗಿದ್ದರು. ಸಂಜೆ 5 ಗಂಟೆಗೆ ಚಿತ್ರಮಂದಿರದಿಂದ ಹೊರ ಬಂದ ಬಳಿಕ ಕೃತ್ಯ ಎಸಗಲು ಸಿದ್ಧತೆ ಮಾಡಿಕೊಂಡರು.

ಹೊಸ ಮಾದರಿಯ ಹಾಗೂ ವಿದೇಶಿ ಬೈಕ್‌ಗಳ ಮೇಲೆ ಶರತ್‌ ಅತೀವ ವ್ಯಾಮೋಹ ಹೊಂದಿರುವ ವಿಚಾರ ವಿಶಾಲ್‌ಗೆ ಗೊತ್ತಿತ್ತು. ಹೀಗಾಗಿ, ಅದೇ ತಂತ್ರ ಬಳಸಿ ಸಂಚು ಕಾರ್ಯಗತಗೊಳಿಸಲು ಆತ ನಿರ್ಧರಿಸಿದ್ದ. ಕೃತ್ಯಕ್ಕಾಗಿಯೇ ಹೊಸ ಸಿಮ್ ಖರೀದಿಸಿದ್ದ ಆತ, ಅದರಿಂದ ಸಂಜೆ 5.30ಕ್ಕೆ ಶರತ್‌ಗೆ ಕರೆ ಮಾಡಿದ್ದ. ‘ನನ್ನ ಸ್ನೇಹಿತರ ಬಳಿ ₹ 11 ಲಕ್ಷ ಮೌಲ್ಯದ ‘ಬೆನಾಲಿ’ ಬೈಕ್ ಇದೆ. ಅದನ್ನು ರೈಡ್ ಮಾಡಲು ಹೋಗುತ್ತಿದ್ದೇನೆ. ನೀನೂ ಬರುತ್ತೀಯಾ‘ ಎಂದು ಕೇಳಿದ್ದ. ಅದೇ ದಿನ ಹೊಸ ಬುಲೆಟ್ ಬೈಕ್ ಖರೀದಿಸಿದ್ದ ಶರತ್, ‘ನಾನೂ ಹೊಸ ಬೈಕ್‌ನಲ್ಲಿ ರೈಡ್‌ಗೆ ಬರುತ್ತೇನೆ’ ಎಂದು ತಿಳಿಸಿದ್ದರು.

ವಿಶಾಲ್‌ನ ಸೂಚನೆಯಂತ ಆ ಕೂಡಲೇ ಸ್ನೇಹಿತನ ಮನೆಗೆ ತೆರಳಿದ ಇನ್ನೊಬ್ಬ ಆರೋಪಿ ವಿನಯ್, ‘ನಾನು ಹಾಗೂ ಪೋಷಕರು ದೇವಿ ಪೂಜೆಗೆಂದು ಪಾಂಡವಪುರಕ್ಕೆ ಹೋಗುತ್ತಿದ್ದೇವೆ. ಒಂದು ದಿನದ ಮಟ್ಟಿಗೆ ಕಾರು ಬೇಕಿತ್ತು’ ಎಂದು ಸುಳ್ಳು ಹೇಳಿ ಕಾರನ್ನು ತೆಗೆದುಕೊಂಡು ಬಂದಿದ್ದ. ವಿಶಾಲ್‌ ಮೈಸೂರು ರಸ್ತೆಯ ಶಿರ್ಕೆ ಅಪಾರ್ಟ್‌ಮೆಂಟ್ ಬಳಿ ನಿಂತುಕೊಂಡರೆ, ಉಳಿದ ಮೂವರು ಉಲ್ಲಾಳದ ಆರ್‌ಟಿಒ ಕಚೇರಿ ಬಳಿ ಕಾರು ನಿಲ್ಲಿಸಿಕೊಂಡು ಕಾಯುತ್ತಿದ್ದರು.

ಸುಳ್ಳು ಹೇಳಿ ಹೊರಟ ಶರತ್: ರೈಡ್‌ಗೆ ಹೋಗುತ್ತಿರುವ ವಿಚಾರ ಪೋಷಕರಿಗೆ ತಿಳಿಸದ ಶರತ್, ‘ಹೊಸ ಬೈಕ್ ಖರೀದಿಸಿರುವುದಕ್ಕೆ ಸ್ನೇಹಿತರಿಗೆ ಸಿಹಿ ಹಂಚಿ ಬರುತ್ತೇನೆ’ ಎಂದು ಸುಳ್ಳು ಹೇಳಿ ವಿಶಾಲ್‌ನ ಸೂಚನೆಯಂತೆ ಸಂಜೆ 6.30ಕ್ಕೆ ಶಿರ್ಕೆ ಅಪಾರ್ಟ್‌ಮೆಂಟ್ ಬಳಿ ಹೋಗಿದ್ದರು. ಅಲ್ಲಿಂದ ಆತ, ‘ಸ್ನೇಹಿತರ ಬಳಿ ಹೋಗೋಣ ಬಾ’ ಎಂದು ಶರತ್ ಅವರನ್ನು ಉಲ್ಲಾಳದ ಆರ್‌ಟಿಒ ಕಚೇರಿ ಬಳಿ ಕರೆದುಕೊಂಡು ಹೋಗಿದ್ದ ಎಂದು ಪೊಲೀಸರು ಹೇಳಿದರು.

ಅಲ್ಲಿದ್ದ ಆರೋಪಿಗಳನ್ನು ತನ್ನ ಸ್ನೇಹಿತರೆಂದು ಶರತ್‌ಗೆ ಪರಿಚಯ ಮಾಡಿಸಿದ ಆತ, ‘ನಾವು ಕಾರಿನಲ್ಲೇ ದೊಡ್ಡ ಆಲದಮರದ ಬಳಿ ಇರುವ ಇನ್ನೊಬ್ಬ ಗೆಳೆಯನ ಮನೆಗೆ ಹೋಗೋಣ. ವಿನಯ್ ನಿನ್ನ ಬೈಕ್ ತೆಗೆದುಕೊಂಡು ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಾನೆ. ಅಲ್ಲಿಂದ ಬೆನಾಲಿ ಬೈಕ್‌ ತೆಗೆದುಕೊಂಡು ರೈಡ್ ಹೋಗೋಣ’ ಎಂದು ನಂಬಿಸಿದ್ದ. ಅಂತೆಯೇ, ಶರತ್ ಅವರು ಬೈಕ್ ಬಿಟ್ಟು ವಿಶಾಲ್‌ ಜತೆ ಕಾರು ಹತ್ತಿದ್ದರು.

ಕಾರಿನಲ್ಲಿ ಬಿಯರ್ ಪಾರ್ಟಿ: ರಾತ್ರಿ 7.45ರ ಸುಮಾರಿಗೆ ದೊಡ್ಡ ಆಲದಮರ ತಲುಪಿದ ಅವರು, ಅಲ್ಲಿನ ಬಾರ್‌ವೊಂದರಲ್ಲಿ ಬಿಯರ್‌ ಖರೀದಿಸಿದರು. ಕಾರಿನಲ್ಲೇ ಪಾನಮತ್ತರಾಗಿ, ಶರತ್ ಅವರಿಗೂ ಕುಡಿಸಿದ್ದರು. ಆ ನಂತರ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಹಗ್ಗದಿಂದ ಅವರ ಕೈಕಾಲು ಕಟ್ಟಿದ್ದರು.

ಬಳಿಕ ಚಾಕು ತೋರಿಸಿ ಬೆದರಿಸಿದ ಆರೋಪಿಗಳು, ಯಾರೋ ಅಪಹರಿಸಿ ಕಿರುಕುಳ ನೀಡುತ್ತಿರುವುದಾಗಿ ಶರತ್ ಬಳಿ ಹೇಳಿಸಿದ್ದರು. ಆ ದೃಶ್ಯಗಳನ್ನು ಶರತ್ ಅವರ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಕ್ವಾರಿಯಲ್ಲೇ ಮರಣೋತ್ತರ ಪರೀಕ್ಷೆ

ತಹಶೀಲ್ದಾರ್ ಬಿ.ಆರ್.ಹರೀಶ್ ನಾಯಕ್ ಅವರ ಸಮ್ಮುಖದಲ್ಲಿ ಮೃತದೇಹ ಹೊರತೆಗೆಯಲಾಯಿತು. ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಕ್ವಾರಿ ಬಳಿಯೇ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಮಧ್ಯಾಹ್ನ 12.30ರ ಸುಮಾರಿಗೆ ಪೋಷಕರಿಗೆ ದೇಹ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.