ADVERTISEMENT

ಐದು ದಿನಗಳ ಪರದಾಟ ಅಂತ್ಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 20:20 IST
Last Updated 17 ನವೆಂಬರ್ 2017, 20:20 IST
ಐದು ದಿನಗಳ ಪರದಾಟ ಅಂತ್ಯ
ಐದು ದಿನಗಳ ಪರದಾಟ ಅಂತ್ಯ   

ಕಲಬುರ್ಗಿ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ತಿದ್ದುಪಡಿ ವಿಧೇಯಕವನ್ನು ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ವೈದ್ಯರ ಮಧ್ಯೆ ನಡೆದ ಸಂಧಾನ ಸಭೆ ಯಶಸ್ವಿಯಾದ್ದರಿಂದ ಐದು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ವೈದ್ಯರು ಶುಕ್ರವಾರ ರಾತ್ರಿ 7 ಗಂಟೆಯಿಂದ ಮತ್ತೆ ಸೇವೆ ಆರಂಭಿಸಿದರು.

ನಗರದ ಕೆಲವು ಕ್ಲಿನಿಕ್ ಮತ್ತು ಆಸ್ಪತ್ರೆಗಳು ಮುಚ್ಚಿದ ಬಾಗಿಲನ್ನು ತೆರೆದವು. ಇನ್ನು ಕೆಲವು ಆಸ್ಪತ್ರೆಗಳು ಬಾಗಿಲನ್ನು ಮುಚ್ಚಿದ್ದವು. ಒಳರೋಗಿಗಳು ಮತ್ತು ತುರ್ತು ಚಿಕಿತ್ಸೆ ಅಗತ್ಯ ಇರುವವರಿಗೆ ಎಂದಿನಂತೆ ಚಿಕಿತ್ಸೆ ನೀಡಲಾಯಿತು.

‘ಆಸ್ಪತ್ರೆಗಳ ಮುಂಭಾಗದಲ್ಲಿ ಬೆಳಗಾವಿ ಚಲೋ ಎಂಬ ಸೂಚನಾಫಲಕವನ್ನು ಹಾಕಿದ್ದರಿಂದ ಮುಷ್ಕರ ವಾಪಸು ಪಡೆದಿರುವ ಬಗ್ಗೆ ರೋಗಿಗಳಿಗೆ ಗೊತ್ತಾಗಿಲ್ಲ. ಹೀಗಾಗಿ ರೋಗಿಗಳ ಸಂಖ್ಯೆ ಕಡಿಮೆ ಇದೆ. ಬಂದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

ADVERTISEMENT

‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ತಿದ್ದುಪಡಿಯಲ್ಲಿನ ಕೆಲವು ಅಂಶಗಳನ್ನು ಮಾರ್ಪಾಡು ಮಾಡಲು ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ಮುಷ್ಕರ ವಾಪಸು ಪಡೆದು ಸೇವೆ ಆರಂಭಿಸಿದ್ದೇವೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಜಿಲ್ಲೆಯ 80–100 ವೈದ್ಯರು ಪಾಲ್ಗೊಂಡಿದ್ದಾರೆ. ಅವರೆಲ್ಲರೂ ವಾಪಸು ಬಂದ ಬಳಿಕ ಪೂರ್ಣ ಪ್ರಮಾಣದ ಸೇವೆ ಆರಂಭವಾಗಲಿದೆ’ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕಿರಣ ದೇಶಮುಖ ‘ಪ್ರಜಾವಾಣಿ’ಗೆ ತಿಳಿಸಿದರು.

ರೋಗಿಗಳ ಸಂಖ್ಯೆ ಹೆಚ್ಚಳ:ವೈದ್ಯರ ಮುಷ್ಕರ ಹಾಗೂ ಪ್ರಮುಖ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗ ಸ್ಥಗಿತಗೊಳಿಸಿದ್ದರಿಂದ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರವೂ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು.‘ಹೊರ ರೋಗಿಗಳ ವಿಭಾಗದಲ್ಲಿ ಶುಕ್ರವಾರ 1,548 ಹಾಗೂ ಒಳ ರೋಗಿಗಳ ವಿಭಾಗದಲ್ಲಿ 99 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಸಹಜ ಮತ್ತು ಸಿಸೇರಿಯನ್ ಸೇರಿ 28 ಹೆರಿಗೆಗಳಾಗಿವೆ. 15 ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ’ ಎಂದು ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್)ಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಶಿವಕುಮಾರ ಸಿ.ಆರ್. ತಿಳಿಸಿದರು.

ಸಂಧಾನ ಸಭೆ ಯಶಸ್ವಿಯಾದ್ದರಿಂದ ಮುಷ್ಕರ ವಾಪಸ್ ಪಡೆದಿದ್ದೇವೆ. ಬಹುತೇಕ ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಕ್ಲಿನಿಕ್‌ಗಳು ನಾಳೆಯಿಂದ ಆರಂಭವಾಗಲಿವೆ.
-ಡಾ. ಕಿರಣ ದೇಶಮುಖ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.