ADVERTISEMENT

ಐವರಿಗೆ ಮಡಿವಾಳ ಮಾಚಿದೇವ ಪ್ರಶಸ್ತಿ

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಐವರಿಗೆ ಮಡಿವಾಳ ಮಾಚಿದೇವ ಪ್ರಶಸ್ತಿ
ಐವರಿಗೆ ಮಡಿವಾಳ ಮಾಚಿದೇವ ಪ್ರಶಸ್ತಿ   

ಬೆಂಗಳೂರು: ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಎಚ್‌.ನರಸರಾಜು (ರಂಗಭೂಮಿ), ಮಲ್ಲೇಶ್ವರ ದೋಭಿಘಾಟ್‌ ಅಧ್ಯಕ್ಷ ಸಿ.ರಾಜು (ಸಮಾಜಸೇವೆ), ತಂಬೂರಿ ಕಲಾವಿದ ಮೈಸೂರು ಗುರುರಾಜ್‌ (ಜನಪದ), ಲೇಖಕ ಚನ್ನಕೃಷ್ಣ ವಿ.ದೇವರ ಮುಳ್ಳೂರು (ಸಾಹಿತ್ಯ) ಹಾಗೂ ಕ್ರೀಡಾಪಟು ಎಂ.ಪ್ರಸನ್ನ (ಕ್ರೀಡೆ) ಅವರಿಗೆ ರಾಜ್ಯಮಟ್ಟದ ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಘದ ಅಧ್ಯಕ್ಷ ಆರ್‌.ವೆಂಕಟರಮಣ ಮತ್ತು ಕೆ.ಸಿ. ಜನರಲ್‌ ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ಪಿ.ರವಿಕುಮಾರ್‌ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಡಿವಾಳ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವಿ.ಎಸ್‌.ಮೇಘನಾ, ವರ್ಷಾ (ಎಸ್ಸೆಸ್ಸೆಲ್ಸಿ), ಭ್ರಮರಾ, ರೋಹಿತ್‌ (ದ್ವಿತೀಯ ಪಿಯುಸಿ) ಹಾಗೂ ಸುಧಾರಾಣಿ, ಗಿರಿಜಾ (ಪದವಿ) ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ADVERTISEMENT

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ಮಡಿವಾಳ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಸಮಾಜದ ಏಳಿಗೆಗೆ ಭಿನ್ನಾಭಿಪ್ರಾಯ ಬಿಟ್ಟು, ಸಂಘಟಿತರಾಗಬೇಕು. ಇದರಿಂದ ರಾಜಕೀಯ ಶಕ್ತಿ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.

ಸಮಾಜದ ಮುಖಂಡ ಡಾ.ರಾಜು ಎಂ.ತಲ್ಲೂರು ಮಾತನಾಡಿ, ‘ರಾಜ್ಯದಲ್ಲಿ ಮಡಿವಾಳರ ಜನಸಂಖ್ಯೆ 30 ಲಕ್ಷ ಇದೆ. ಆದರೆ, ನಮ್ಮ ಸಮಾಜದಿಂದ ಇದುವರೆಗೆ ಒಬ್ಬರೂ ಶಾಸಕರಾಗಿಲ್ಲ. ರಾಜಕೀಯ ಪ್ರಾತಿನಿಧ್ಯ ಸಿಗದಿದ್ದರೆ ಸಮುದಾಯದ ಅಭಿವೃದ್ಧಿ ಕಷ್ಟ. ರಾಜಕೀಯ ಶಕ್ತಿ ಗಳಿಸಲು ಸಮುದಾಯ ಜಾಗೃತವಾಗಬೇಕು’ ಎಂದರು.

ಕೆ.ಸಿ.ಜನರಲ್‌ ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ರವಿಕುಮಾರ್‌ ಮಾತನಾಡಿ, ‘ಪ್ರಬಲ ಜಾತಿ, ಸಮುದಾಯಗಳ ನಾಯಕರು ಸಮಾಜದ ಕೆಲಸಕ್ಕೆ ಪಕ್ಷಭೇದ ಮರೆತು ಒಗ್ಗೂಡುತ್ತಾರೆ. ಸಮುದಾಯದ ಸಂಘಟನೆಯ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಶೋಷಣೆಗೆ ಒಳಗಾಗಿರುವ ನಮ್ಮ ಸಮಾಜವನ್ನು ಮೇಲೆತ್ತಬೇಕಾದರೆ ನಮ್ಮ ನಾಯಕರು ಸಂಕುಚಿತ ಮನೋಭಾವ ಬಿಡಬೇಕು’ ಎಂದು ಸಲಹೆ ನೀಡಿದರು.

ಮಡಿವಾಳ ಮಾಚಿದೇವ ಜನ್ಮಸ್ಥಳ ಅಭಿವೃದ್ಧಿ, ಮಡಿವಾಳ ಅಭಿವೃದ್ಧಿ ನಿಗಮ ಸ್ಥಾಪನೆ, ಪ್ರತಿ ತಾಲ್ಲೂಕಿನಲ್ಲಿ ಮಡಿವಾಳ ಸಮುದಾಯ ಭವನ ನಿರ್ಮಿಸುವ ಬೇಡಿಕೆ ಈಡೇರಿಸಲು ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ ದಿನೇಶ್‌ ಗುಂಡೂರಾವ್‌ ಮತ್ತು ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

***

ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿರುವ ಮಡಿವಾಳ ಸಮಾಜದ ವಿವಿಧ ಸಂಘಗಳು ಕೇಂದ್ರ ಸಂಘದಡಿ ಒಂದುಗೂಡಬೇಕು.
–ಡಾ.ರವಿಕುಮಾರ್‌, ಹಿರಿಯ ವೈದ್ಯಾಧಿಕಾರಿ, ಕೆ.ಸಿ.ಜನರಲ್‌ ಆಸ್ಪತ್ರೆ

***

ಮಡಿವಾಳ ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡುವ ಪಕ್ಷದ ಜತೆಗೆ ಇಡೀ ಸಮುದಾಯ ನಿಲ್ಲುತ್ತದೆ.
–ಡಾ.ರಾಜು ಎಂ.ತಲ್ಲೂರ, ಮಡಿವಾಳ ಸಮಾಜದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.