ADVERTISEMENT

ಒಂದಾದ ಯಡಿಯೂರಪ್ಪ – ಈಶ್ವರಪ್ಪ

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಿಣಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಒಂದಾದ ಯಡಿಯೂರಪ್ಪ – ಈಶ್ವರಪ್ಪ
ಒಂದಾದ ಯಡಿಯೂರಪ್ಪ – ಈಶ್ವರಪ್ಪ   

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಮಧ್ಯೆ ಹೊಗೆಯಾಡುತ್ತಿದ್ದ ವೈಮನಸ್ಸು, ಬಹಿರಂಗ ಟೀಕಾಸಮರಕ್ಕೆ ತೆರೆಬಿದ್ದಂತಾಗಿದ್ದು, ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಬೃಹದಾಕಾರದ ಹೂವಿನ ಮಾಲೆಗೆ ಕೊರಳೊಡ್ಡಿ ಒಗ್ಗಟ್ಟು ಪ್ರದರ್ಶಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ನಡೆದ ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯಕಾರಿಣಿಯಲ್ಲಿ ಅಕ್ಕಪಕ್ಕ ಕುಳಿತು,  ಕುಶಲ ಸಂಭಾಷಣೆ ನಡೆಸಿದ ಇವರಿಬ್ಬರು ‘ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ’ ಘೋಷಿಸಿದರು.

ಐದು ತಿಂಗಳಿನಿಂದ ಪರಸ್ಪರ ಬೈದಾಡಿಕೊಂಡು ಓಡಾಡಿದ್ದ ಉಭಯ ನಾಯಕರು, ಪರಸ್ಪರ ಹೊಗಳಿಕೊಂಡರು. ‘ನಾನೇ ಹೈಕಮಾಂಡ್‌’ ಎಂದು ಅಬ್ಬರಿಸಿದ್ದ ಈಶ್ವರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಸಲಹೆಯಂತೆ ನಡೆದುಕೊಳ್ಳುತ್ತೇವೆ ಎಂದು ವೇದಿಕೆಯಲ್ಲಿ ವಾಗ್ದಾನ ಮಾಡಿದರು.

ಕಾರ್ಯಕಾರಿಣಿ ಉದ್ಘಾಟಿಸಿದ ಯಡಿಯೂರಪ್ಪ, ‘ಈಶ್ವರಪ್ಪ ಅವರಿಗೆ ಉಸ್ತುವಾರಿ ವಹಿಸಿದ ಬಳಿಕ ಹಿಂದುಳಿದ ಮೋರ್ಚಾದ ಎರಡು ಸಮಾವೇಶ ಆಯೋಜಿಸಬೇಕು ಎಂದು ಅಂದುಕೊಂಡಿದ್ದೆವು. ಇದೇ 22  ಬೀದರ್‌ನಲ್ಲಿ ಹಾಗೂ 23ರಂದು ಯಾದಗಿರಿಯಲ್ಲಿ ಸಮಾವೇಶ ನಡೆಯಲಿದೆ’ ಎಂದರು.

ಈಶ್ವರಪ್ಪ ಮಾತನಾಡಿ,  ‘ನಮ್ಮ ಮಧ್ಯೆ ಸಣ್ಣಪುಟ್ಟ ಗೊಂದಲ ಇದ್ದಿದ್ದು ನಿಜ. ಇಬ್ಬರನ್ನೂ ಒಟ್ಟಿಗೆ ಮಾತುಕತೆಗೆ ಕೂರಿಸಿದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು, ಇಬ್ಬರೂ ಒಂದಾಗಿ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಪಕ್ಷದಲ್ಲಿ ಪ್ರಜಾಪ್ರಭುತ್ವ ಇರುವುದಕ್ಕೆ ಇದು ಸಾಕ್ಷಿ’ ಎಂದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು, ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂಬುವುದಷ್ಟೆ ನಮ್ಮ ಆಸೆ. ಆ ದಿಕ್ಕಿನಲ್ಲಿ ನಾವೆಲ್ಲರೂ ಸೇರಿ ದುಡಿಯುತ್ತೇವೆ’ ಎಂದು ಹೇಳಿದರು.

ಕಾಂಗ್ರೆಸ್‌ ಬಗ್ಗೆ ಜನರಿಗೆ ಭ್ರಮನಿರಸನ ಆಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ಒಂದೊಂದಾಗಿ ಹೊರಬರುತ್ತಿವೆ.  ಈ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದರು.

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಯಡಿಯೂರಪ್ಪ  ಹೇಳಿದ್ದಾರೆ. ಮೇಲ್ವರ್ಗದವರು ಹಾಗೂ ಕೆಳವರ್ಗದವರ ನಡುವೆ ತಾರತಮ್ಯ ಆಗಬಾರದು ಎನ್ನುವುದು ಅದರ ಅರ್ಥ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕಾರ್ಯ ನಿರ್ವಹಿಸಿ ದೂರ ಇರುವವರನ್ನು ಕರೆದು ಸೇರಿಸಿಕೊಂಡು ಕಾರ್ಯನಿರ್ವಹಿಸಿ  ಎಂದು ಕರೆ ನೀಡಿದರು.
ಹಿಂದುಳಿದ ಮೋರ್ಚಾ ಸಂಘಟಿಸುವ ಉದ್ದೇಶದಿಂದ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಜೊತೆ ಸಮಾಲೋಚಿಸಿ ಶೀಘ್ರದಲ್ಲೆ ಜಿಲ್ಲಾಮಟ್ಟದ ಸಮಾವೇಶಗಳನ್ನು ಆಯೋಜಿಸಲಾಗುವುದು ಎಂದು ಹಿಂದುಳಿದ ಮೋರ್ಚಾ  ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.