ADVERTISEMENT

ಕನ್ನಡ ವಿಶ್ವವಿದ್ಯಾಲಯದಲ್ಲಿ ಮೀಸಲಾತಿ ಗೊಂದಲ

ಬೋಧಕರ ಹುದ್ದೆ ಭರ್ತಿ: 371(ಜೆ) ಅಥವಾ ಸಾಮಾನ್ಯ ನಿಯಮ?

ಕೆ.ನರಸಿಂಹ ಮೂರ್ತಿ
Published 30 ಜೂನ್ 2016, 4:06 IST
Last Updated 30 ಜೂನ್ 2016, 4:06 IST
ಕನ್ನಡ ವಿಶ್ವವಿದ್ಯಾಲಯದಲ್ಲಿ ಮೀಸಲಾತಿ ಗೊಂದಲ
ಕನ್ನಡ ವಿಶ್ವವಿದ್ಯಾಲಯದಲ್ಲಿ ಮೀಸಲಾತಿ ಗೊಂದಲ   

ಬಳ್ಳಾರಿ: ಹಲವು ವರ್ಷಗಳಿಂದ ಖಾಲಿ ಇರುವ  ಬೋಧಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು, ಸಾಮಾನ್ಯ ನೇಮಕಾತಿ ನಿಯಮಗಳನ್ನು ಪಾಲಿಸಬೇಕೇ ಅಥವಾ  ಕಲಂ 370 (ಜೆ) ಅಡಿ ನೇಮಕಾತಿ ನಡೆಸಬೇಕೇ ಎಂಬ ದ್ವಂದ್ವ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಕಾಡುತ್ತಿದೆ.

2013ರಲ್ಲಿ ಪ್ರಕಟಿಸಿರುವ ಅಧಿಸೂಚನೆ ಪ್ರಕಾರ, ಸರ್ಕಾರ ಈ ವಿಶ್ವವಿದ್ಯಾಲಯವನ್ನು ರಾಜ್ಯವ್ಯಾಪಿ ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರಿಸಿದೆ. ಆದರೆ ಇದು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿದ್ದು 371ಜೆ ವ್ಯಾಪ್ತಿಗೆ ಸೇರುವುದರಿಂದ ಆ ನಿಯಮಗಳು ಅನ್ವಯವಾಗುತ್ತವೆಯೇ? ಎಂಬುದು ಸದ್ಯದ ಗೊಂದಲ.

ಈ ಸಂಬಂಧ, ಆರು ತಿಂಗಳ ಹಿಂದೆಯೇ ವಿಶ್ವವಿದ್ಯಾಲಯವು ಬರೆದ ಪತ್ರಕ್ಕೆ ರಾಜ್ಯ ಸರ್ಕಾರದಿಂದ ಸ್ಪಷ್ಟ ಪ್ರತಿಕ್ರಿಯೆ, ನಿರ್ದೇಶನ ದೊರೆತಿಲ್ಲ. ಬದಲಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ವ್ಯತಿರಿಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಹೀಗಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಯಾವ ಮೀಸಲಾತಿಯನ್ನು ಅನುಸರಿಸಿದರೂ ವಿವಾದ ಉಂಟಾಗುವ ಸಾಧ್ಯತೆ ಕಾಣುತ್ತಿದ್ದು, ವಿ.ವಿ. ಅಂಗಳದಲ್ಲಿ ಬಿರುಸಿನ ಚರ್ಚೆಯೂ ನಡೆದಿದೆ.

ಇಂಥ ಸನ್ನಿವೇಶದಲ್ಲೇ ವಿಶೇಷ ಮೀಸಲಾತಿ ಮತ್ತು ಸಾಮಾನ್ಯ ಮೀಸಲಾತಿ ನಿಯಮಗಳಿಗೆ ಅನ್ವಯವಾಗುವಂತೆ ವಿಶ್ವವಿದ್ಯಾಲಯವು ಎರಡು ಪ್ರತ್ಯೇಕ ನೇಮಕಾತಿ ಅಧಿಸೂಚನೆಗಳನ್ನು ಸಿದ್ಧಪಡಿಸಿ ಕಾಯುತ್ತಿದೆ. ಸರ್ಕಾರ ಯಾವ ನಿಯಮ ಅನುಸರಿಸಿ ಎನ್ನುತ್ತದೋ ಅದಕ್ಕೆ ತಕ್ಕಂತಹ ಅಧಿಸೂಚನೆ ಪ್ರಕಟಿಸಲು ನಿರ್ಧರಿಸಿದೆ.

ಏಕೆ ಗೊಂದಲ?: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಈ ವಿ.ವಿ ಸ್ಥಾಪನೆಯಾದಾಗ, ವಿಶೇಷ ಮೀಸಲಾತಿ ಇರಲಿಲ್ಲ. ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವ ಕನ್ನಡ ಭಾಷೆಯ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯಿಂದಲೇ 1991ರ ನವೆಂಬರ್‌ 1ರಂದು ಉದ್ಘಾಟನೆಗೊಂಡಿತ್ತು. ಆಗ ರಾಜ್ಯದ ವಿವಿಧೆಡೆಯಿಂದ ಬೋಧಕರನ್ನು ನೇಮಕ ಮಾಡಲಾಗಿತ್ತು. ಎರಡನೇ ಬಾರಿಗೆ ನೇಮಕಾತಿ ನಡೆಸುವ ಹೊತ್ತಿಗೆ ಗೊಂದಲ ಉಂಟಾಗಿದೆ.

‘ಏಕಕಾಲಕ್ಕೆ ಎರಡು ಮೀಸಲಾತಿ ನಿಯಮಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಕುಲಪತಿ ಪ್ರೊ.ಮಲ್ಲಿಕಾ ಘಂಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನೇಮಕಾತಿ ಸಲುವಾಗಿ ವಿಶ್ವವಿದ್ಯಾಲಯ ವ್ಯಾಪ್ತಿಯನ್ನು  ಆರು ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸಿದರೆ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯ ಮೂಲ ಆಶಯಕ್ಕೇ ಧಕ್ಕೆ ಬರುತ್ತದೆ ಎಂಬ ಅಭಿಪ್ರಾಯವಿದೆ. ಯಾವುದೇ ನಿಯಮವನ್ನು ಜಾರಿಗೆ ತಂದರೂ, ವಿರೋಧ ವ್ಯಕ್ತವಾಗುವ ಸಾಧ್ಯತೆ ಇರುವುದರಿಂದ ಸರ್ಕಾರದ ನಿರ್ದೇಶನಕ್ಕೆ ಕಾಯುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

‘ಸಂಶೋಧನೆಗೆ ಅವಕಾಶ ನೀಡುವ ವಿಷಯದಲ್ಲಿ ಇದುವರೆಗೂ ವಿಶೇಷ ಮೀಸಲಾತಿ ಜಾರಿಗೊಳಿಸಿಲ್ಲ. ಹೀಗಾಗಿ ಎಲ್ಲೆಡೆಯ ವಿದ್ಯಾರ್ಥಿಗಳು ದಾಖಲಾಗಿ ಸಂಶೋಧನೆ ನಡೆಸುತ್ತಿದ್ದಾರೆ. ನೇಮಕಾತಿಗೆ ವಿಶೇಷ ಮೀಸಲಾತಿ ಅನ್ವಯಿಸುವುದಾರೆ, ವಿದ್ಯಾರ್ಥಿಗಳ ಪ್ರವೇಶಾತಿಯಲ್ಲೂ ಅದನ್ನು ಅನ್ವಯಿಸಬೇಕಾಗುತ್ತದೆ. ಆಗ ವಿಶ್ವವಿದ್ಯಾಲಯ ಆರು ಜಿಲ್ಲೆಗಳಿಗೆ ಮಾತ್ರ ಸೀಮಿತವಾದಂತಾಗುತ್ತದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಜೂನ್‌ 16ರಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ನಡೆಸಿದ ಕುಲಸಚಿವರ ಸಭೆಯಲ್ಲಿ ಮೀಸಲಾತಿ ವಿಷಯ ಚರ್ಚೆಯಾಗಿದ್ದು, ಕೆಲವೇ ದಿನಗಳಲ್ಲಿ ಸ್ಪಷ್ಟ ನಿರ್ದೇಶನ ನೀಡುವ ಭರವಸೆ ವ್ಯಕ್ತವಾಗಿದೆ’ ಎಂದೂ ಪ್ರೊ.ಘಂಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.