ADVERTISEMENT

ಕಲಾಪ ನುಂಗಿದ ಹಾಸಿಗೆ, ದಿಂಬು

ಸದನ ಸಮಿತಿಗೆ ಪ್ರತಿಪಕ್ಷ ಪಟ್ಟು; ಒಪ್ಪದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

ಬೆಳಗಾವಿ: ವಸತಿ ಶಿಕ್ಷಣ ಸಂಸ್ಥೆ ಮತ್ತು ಸಮಾಜ ಕಲ್ಯಾಣ ಆಯುಕ್ತಾಲಯದ ಅಡಿಯಲ್ಲಿ ಬರುವ ವಸತಿ ಶಾಲೆ ಮತ್ತು ಹಾಸ್ಟೆಲ್‌ಗಳಿಗೆ ಬೇಕಾದ ಹಾಸಿಗೆ ಮತ್ತು ದಿಂಬು ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಯನ್ನು ಸದನ ಸಮಿತಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ಮಂಗಳವಾರವೂ ವಿಧಾನ ಪರಿಷತ್ತಿನಲ್ಲಿ ಧರಣಿ ನಡೆಸಿದ್ದರಿಂದ ಇಡೀ ದಿನ ಕಲಾಪ ನಡೆಯಲಿಲ್ಲ.

ಪ್ರಕರಣವನ್ನು ಸದನ ಸಮಿತಿಗೆ ಒಪ್ಪಿಸಬೇಕು ಮತ್ತು ಆರೋಪ ಎದುರಿಸುತ್ತಿರುವ ಅಧಿಕಾರಿಗಳನ್ನು ತಕ್ಷಣ ಅಮಾ
ನತು ಮಾಡಬೇಕು ಎಂದು ಪ್ರತಿಪಕ್ಷಗಳ ಸದಸ್ಯರು ಪಟ್ಟು ಹಿಡಿದರೆ, ಸಿಐಡಿ ತನಿಖೆಯೇ ಸಾಕು ಎಂಬ ಪಟ್ಟನ್ನು ಸರ್ಕಾರವೂ ಸಡಿಲಿಸಲಿಲ್ಲ.

ಬೆಳಿಗ್ಗೆ ಸದನ ಸೇರುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಪತಿ ಪೀಠದ ಮುಂಭಾಗದಲ್ಲಿ ಧರಣಿ ಮುಂದುವರಿಸಿದರು. ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ, `‘ದಲಿತರ ಹಣ ಲೂಟಿ ಮಾಡಿದ ಅಧಿಕಾರಿಗಳನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಬಾರದು. ಈ ವಿಚಾರವನ್ನು ಪ್ರತಿಷ್ಠೆಯಾಗಿ ಪರಿಗಣಿಸಬೇಡಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ, ಅಧಿಕಾರಿಗಳಿಗೆ ಇನ್ನಷ್ಟು ಅವ್ಯವಹಾರ ನಡೆಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ಸದನ ಸಮಿತಿ ರಚಿಸಿ. ವರದಿ ನೀಡಲು ಒಂದು ಅಥವಾ ಎರಡು ತಿಂಗಳು ಕಾಲಮಿತಿ ನಿಗದಿ ಪಡಿಸಿ' ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾ ನಾಯಕ ಎಸ್.ಆರ್. ಪಾಟೀಲ, 'ಸಿಐಡಿ ತನಿಖೆ ನಡೆಸುವುದಾಗಿ ಸಮಾಜ ಕಲ್ಯಾಣ ಸಚಿವರು ಹೇಳಿದ್ದಾರೆ. ಸಿಐಡಿ ತನಿಖೆಯಿಂದ ಸತ್ಯ ಹೊರಬರಲಿದೆ' ಎಂದರು.

ಆದರೆ, ಇದನ್ನು ಒಪ್ಪದ ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಇದ್ದಾಗ ಸಭಾಪತಿ ಸದನವನ್ನು ಮುಂದೂಡಿದರು. ಮತ್ತೆ ಸದನ ಸೇರಿದಾಗಲೂ ಧರಣಿ ಮುಂದುವರಿಯಿತು. ಬಿಜೆಪಿಯ ರಾಮಚಂದ್ರ ಗೌಡ, `‘ಮುಖ್ಯಮಂತ್ರಿಗಳೇ ನಾನು ನಿಮ್ಮ ಅಭಿಮಾನಿ. ಅವ್ಯವಹಾರ ನಡೆದಿರುವುದು ಗೊತ್ತಿದ್ದೂ ಸಚಿವರು ಕ್ರಮ ಕೈಗೊಳ್ಳದಿದ್ದರೆ ಹೇಗೆ? ತಕ್ಷಣ ಅಧಿಕಾರಿ
ಗಳನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಮಂತ್ರಿಗಳೇ ರಾಜೀನಾಮೆ ನೀಡಬೇಕು' ಎಂದರು.

ಅಕ್ರಮ ನಡೆದಿರುವುದನ್ನು ಸಚಿವರೇ ಒಪ್ಪಿಕೊಂಡಿದ್ದಾರೆ. ಸಿಐಡಿ ತನಿಖೆಗೆ ಸಿದ್ಧ ಎಂದಿದ್ದಾರೆ. ಹೀಗಿರುವಾಗ ಸದನ ಸಮಿತಿ ರಚಿಸಿದರೆ ಏನಾಗುತ್ತದೆ? - ಬಸವರಾಜ ಹೊರಟ್ಟಿ ಜೆಡಿಎಸ್‌ ಸದಸ್ಯ

ಸದನ ಸಮಿತಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಸಿಐಡಿ ತನಿಖೆ ನಡೆಸುತ್ತದೆ. ಈ ಪ್ರಕರಣದಲ್ಲಿ ಸದನ ಸಮಿತಿಯ ಅಗತ್ಯವಿಲ್ಲ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ.- ಮುಖ್ಯಮಂತ್ರಿ ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT