ADVERTISEMENT

ಕಲ್ಲಿದ್ದಲು ಕೆಸರೆರಚಾಟ

ಸಿದ್ದರಾಮಯ್ಯ– ಡಿಕೆಶಿ ನಡುವೆ ಒಳ ಒಪ್ಪಂದ: ಯಡಿಯೂರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 19:44 IST
Last Updated 21 ಅಕ್ಟೋಬರ್ 2017, 19:44 IST
ಕಲ್ಲಿದ್ದಲು ಕೆಸರೆರಚಾಟ
ಕಲ್ಲಿದ್ದಲು ಕೆಸರೆರಚಾಟ   

ಬೆಂಗಳೂರು: ಕರ್ನಾಟಕ ಎಮ್ಟಾಕೋಲ್‌ ಮೈನ್ಸ್ ಲಿಮಿಟೆಡ್‌ (ಕೆಇಸಿಎಂಎಲ್‌) ಕಂಪೆನಿ ಗಣಿ ಸಚಿವಾಲಯಕ್ಕೆ ಪಾವತಿಸಬೇಕಿದ್ದ ₹337 ಕೋಟಿ ದಂಡವನ್ನು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್‌) ಪಾವತಿಸಿರುವುದಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷವಾದ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ಮುಖಂಡರು ಕೆಸರೆರಚಾಟ ಆರಂಭಿಸಿದ್ದಾರೆ.

‘ಇದರಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಅಲ್ಲದೆ ಇದರಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ನಡೆದಿರುವ ಒಳ ಒಪ್ಪಂದ ಏನೆಂಬುದು ಬಹಿರಂಗವಾಗಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದ್ದಾರೆ.

‘ನಾನು ಸೂಕ್ತ ದಾಖಲೆ ಮತ್ತು ಅಂಕಿ– ಅಂಶ ಸಮೇತ ಮುಕ್ತ ಚರ್ಚೆಗೆ ಸಿದ್ಧನಿದ್ದೇನೆ. ಒಳ ಒಪ್ಪಂದದ ಅನುಭವ ನಮಗೆ ಇಲ್ಲ. ಅದೇನಿದ್ದರೂ ಬಿಜೆಪಿ ಮುಖಂಡರಿಗೆ ಸಂಬಂಧಿಸಿದ್ದು’ ಎಂದು ಅವರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ADVERTISEMENT

ಯಡಿಯೂರಪ್ಪ ಹೇಳಿದ್ದೇನು: ಖಾಸಗಿ ಕಂಪೆನಿ ಪರವಾಗಿ ದಂಡಪಾವತಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದ ಬೊಕ್ಕಸ ಲೂಟಿ ಮಾಡಿದೆ. ಇದು 424 ಕೋಟಿ ಮೊತ್ತದ ಹಗರಣ. ಇದೊಂದು ಹಗಲು ದರೋಡೆ ಎಂದು ಯಡಿಯೂರಪ್ಪ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.

ಪತ್ರ ಬರೆಯುತ್ತೇನೆ: ‘ಈ ಹಗರಣ ಕುರಿತಂತೆ ಕಾಂಗ್ರೆಸ್‌ ಅಧ್ಯಕ್ಷರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ  ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾನೇ ಪತ್ರ ಬರೆಯುತ್ತೇನೆ. ಹಗರಣದ ಕುರಿತು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ’ ಎಂದು ಯಡಿಯೂರಪ್ಪ ಹೇಳಿದರು.

***
ಅರ್ಧಬಂರ್ಧ ದಾಖಲೆ ಬಿಡುಗಡೆ

‘ಹಗರಣಕ್ಕೆ ನನ್ನ ಬಳಿ ಎಲ್ಲ ದಾಖಲೆಗಳಿವೆ’ ಎಂದು ಹೇಳಿದ ಯಡಿಯೂರಪ್ಪ, ಹೈಕೋರ್ಟ್‌ನಲ್ಲಿ ಕೆಇಸಿಎಂಎಲ್‌ ಹಾಗೂ ಎಮ್ಟಾ ಕೋಲ್‌ ಲಿಮಿಟೆಡ್‌ ಕಂಪೆನಿ ದಾಖಲಿಸಿರುವ ರಿಟ್‌ ಅರ್ಜಿ ಮೇಲಿನ ಆದೇಶದ ಪ್ರತಿ ಮತ್ತು ಕೆಲವು ಅಂಶಗಳ ಟಿಪ್ಪಣಿ ಹೊಂದಿದ ಹಾಳೆಗಳನ್ನು  ಬಿಡುಗಡೆ ಮಾಡಿದರು.

ದಾಖಲೆಯು ರಾಜ್ಯ ಹೈಕೋರ್ಟ್‌ನಲ್ಲಿರುವ ರಿಟ್‌ ಅರ್ಜಿ 19823–24/2015 ಸಂಖ್ಯೆಯ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಈ ಪ್ರಕರಣದಲ್ಲಿ ನ್ಯಾಯಮೂರ್ತಿ ದಿನೇಶ್ ಕುಮಾರ್ ಉಲ್ಲೇಖಿಸಿರುವ ಅಂಶಗಳ ಪ್ರಕಾರ, ‘ಕೆಪಿಸಿಎಲ್‌ ಮತ್ತು ಕೆಇಸಿಎಂಎಲ್‌ ಗಳ ನಡಾವಳಿ  ಪರಿಶೀಲಿಸಿದರೆ ಇವೆರಡರ ನಡುವಿನ ಅಪವಿತ್ರ ಮೈತ್ರಿ ಮೆಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ವಿಚಾರಣೆ ನಡೆಸಬೇಕು’ ಎಂಬ ಅಭಿಪ್ರಾಯ‍ಪಟ್ಟು  ಅರ್ಜಿ ವಜಾ ಮಾಡಿದ್ದಾರೆ.

ವಿಶೇಷ ಎಂದರೆ ಯಡಿಯೂರಪ್ಪ ನೀಡಿದ ಈ ಆದೇಶದ ಪ್ರತಿ 96ನೇ ಪುಟದಿಂದ ಆರಂಭವಾಗಿ 118ನೇ ಪುಟದವರೆಗೂ ಮುಂದುವರಿದಿದೆ. ಈ ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಅವರ ಆದೇಶದ ಪ್ರತಿಯೇ ಇದರಲ್ಲಿ ಇಲ್ಲ.

***
ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ...

ಬೆಂಗಳೂರು: ‘ಪ್ರಕರಣ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿ ಬಾಕಿ ಇರುವಾಗ ಯಡಿಯೂರಪ್ಪ ಅವರು ಈ ಬಗ್ಗೆ ಕೋರ್ಟ್‌ ಹೊರಗೆ ಚರ್ಚೆ ನಡೆಸುವ ಮೂಲಕ ನ್ಯಾಯಾಂಗದ ಮೇಲೆ ಒತ್ತಡ ಹಾಕುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

‘ವಿಭಾಗೀಯ ಪೀಠದ ಇಬ್ಬರು ನ್ಯಾಯಮೂರ್ತಿಗಳು ಭಿನ್ನ ನಿಲುವು ವ್ಯಕ್ತಪಡಿಸಿರುವುದರಿಂದ ಇದನ್ನು ಮೂರನೇ ನ್ಯಾಯಮೂರ್ತಿಯೊಬ್ಬರಿಗೆ ವರ್ಗ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಸಾರ್ವಜನಿಕವಾಗಿ ಮಾತನಾಡುವ ಮೂಲಕ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ’ ಎಂದು ಅವರು ಶನಿವಾರ ಮಾಧ್ಯಮಗೋಷ್ಠಿಯಲ್ಲಿ  ದೂರಿದರು.

‘ರಾಜ್ಯ ಸರ್ಕಾರ ದಂಡದ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಿದೆಯೇ ಹೊರತು ಯಾವುದೇ ಖಾಸಗಿ ಕಂಪೆನಿಗೆ ನೀಡಿಲ್ಲ. ಹೀಗಿರುವಾಗ ಜನರ ಹಣ ದುರ್ಬಳಕೆ ಹೇಗಾಗುತ್ತದೆ’ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

***
ಆರೋಪದಲ್ಲಿ ಹುರುಳಿಲ್ಲ: ಡಿ.ಕೆ. ಶಿವಕುಮಾರ್‌

ನವದೆಹಲಿ: ಕಲ್ಲಿದ್ದಲು ಬ್ಲಾಕ್‌ಗಾಗಿ ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಹಣ ಪಾವತಿಸಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿದರು.

‘ಯಡಿಯೂರಪ್ಪ, ಈ ರೀತಿಯ ಆಧಾರರಹಿತ ಆರೋಪ ಮಾಡಿರುವುದು ಸರಿಯಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದ ಜನರ ಒಳಿತಿಗಾಗಿ ಕಲ್ಲಿದ್ದಲು ಬ್ಲಾಕ್‌ ಪಡೆಯಲೆಂದೇ ಸರ್ಕಾರವು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಣ ಪಾವತಿಸಿದೆ. ಇದರಲ್ಲಿ ಮುಚ್ಚುಮರೆ ಇಲ್ಲ. ಪ್ರತ್ಯೇಕ ಬ್ಲಾಕ್‌ ದೊರೆಯದ್ದರಿಂದ ಸರ್ಕಾರ ಕೇಂದ್ರದಿಂದ ಕಲ್ಲಿದ್ದಲು ಖರೀದಿಸುತ್ತಿದ್ದು, ಇದಕ್ಕಾಗಿ ಪ್ರತಿವರ್ಷ ಹೆಚ್ಚುವರಿಯಾಗಿ ₹ 500 ಕೋಟಿ ಪಾವತಿಸಲಾಗುತ್ತಿದೆ. ಆದರೆ, ರಾಜ್ಯದ ಬೊಕ್ಕಸ ಲೂಟಿ ಮಾಡಲಾಗಿದೆ. ಹಗಲು ದರೋಡೆ ನಡೆದಿದೆ ಎಂದು ಯಡಿಯೂರಪ್ಪ ಹೇಳಿದ್ದರಲ್ಲಿ ಸತ್ಯಾಂಶವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ದಂಡ ಪಾವತಿಸಿದಲ್ಲಿ ಮಾತ್ರ ಕಲ್ಲಿದ್ದಲು ಬ್ಲಾಕ್‌ಗಾಗಿನ ಒಪ್ಪಂದದ ಅರ್ಜಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ. ದಂಡ ಪಾವತಿಸಬೇಕಿದ್ದ ಖಾಸಗಿ ಸಂಸ್ಥೆ ಹಣ ನೀಡದಿದ್ದಾಗ ಸರ್ಕಾರ ಅನಿವಾರ್ಯವಾಗಿ ಪಾವತಿಸಿದೆ ಎಂದು ಅವರು ತಿಳಿಸಿದರು.

***

ರಾಜಕೀಯ ಪ್ರೇರಿತ:
ಬಿಜೆಪಿ ಮುಖಂಡರು ರಾಜಕೀಯ ಕಾರಣಗಳಿಂದ ಈ ರೀತಿಯ ಆರೋಪದಲ್ಲಿ ನಿರತತರಾಗಿದ್ದಾರೆ. ರಾಜ್ಯದ ಜನತೆಗೆ ವಿದ್ಯುತ್‌ ಒದಗಿಸಲು ಸರ್ಕಾರ ಕೋರ್ಟ್‌ ಆದೇಶ ಪಾಲಿಸಿದೆ. ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಸಂದರ್ಭ ಈ ರೀತಿಯ ಹೇಳಿಕೆ ನೀಡುವುದರಿಂದ ರಾಜ್ಯದ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಇದನ್ನು ಯಡಿಯೂರಪ್ಪ ಗಮನಿಸಬೇಕು ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.