ADVERTISEMENT

ಕವಿಮನೆ: ಪತ್ತೆಯಾಗದ ಆರೋಪಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 20:22 IST
Last Updated 25 ನವೆಂಬರ್ 2015, 20:22 IST

ತೀರ್ಥಹಳ್ಳಿ: ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿ ಕವಿಮನೆಯಲ್ಲಿ ಸೋಮವಾರ ರಾತ್ರಿ ಕಳವು ಮಾಡಿದವರ ಪತ್ತೆ ಇನ್ನೂ ಆಗಿಲ್ಲ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವ್ಯಕ್ತಿಯ ಚಿತ್ರ ಹೊರತುಪಡಿಸಿ ಇತರೆ ಯಾವ ಸುಳಿವೂ ಸಿಕ್ಕಿಲ್ಲ.

ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದ ವ್ಯಕ್ತಿ ಸ್ಥಳೀಯನಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ. ಹುಡುಕಿಕೊಟ್ಟವರಿಗೆ ಪೊಲೀಸ್‌ ಇಲಾಖೆ ₹10,000 ಬಹುಮಾನ ಘೋಷಿಸಿದೆ. 

ಕುವೆಂಪು ಪ್ರತಿಷ್ಠಾನದ ವಿರುದ್ಧದ ಚಟುವಟಿಕೆಯಲ್ಲಿ ಇರಬಹುದಾದ ವ್ಯಕ್ತಿಗಳ ಮೇಲೆ ನಿಗಾವಹಿಸಲಾಗಿದೆ. ಕುಪ್ಪಳಿ ಸಮೀಪದ ದೇವಂಗಿ, ಗಡಿಕಲ್ಲು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಆರೋಪಿ ಪತ್ತೆಗೆ ಬಲೆ ಬೀಸಲಾಗಿದ್ದು, ಸ್ಥಳೀಯರ ನೆರವು ಪಡೆಯಲಾಗುತ್ತಿದೆ.

ಕುಪ್ಪಳಿ ಸುತ್ತಮುತ್ತ ಆಗಾಗ್ಗೆ ಕಳವು ಪ್ರಕರಣಗಳು ನಡೆಯುತ್ತಿದ್ದು ಆರೋಪಿಗಳು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿಯೂ ತನಿಖೆ ಮುಂದುವರಿದಿದೆ. 
‘ಬುಧವಾರ ಬೆಳಿಗ್ಗೆಯಿಂದಲೇ ಕವಿಮನೆ ತೆರೆದಿದ್ದು ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕಾವಲುಗಾರರ ಮೇಲೆ ನಮಗೆ ಯಾವುದೇ ಸಂಶಯ ಇಲ್ಲ’ ಎಂದು ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಂಪ ನಾಗರಾಜಯ್ಯ, ಕಮಲಾ ಹಂಪನಾ ಬುಧವಾರ ಕುಪ್ಪಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.