ADVERTISEMENT

ಕ.ವಿ.ವಿ. ಕುಲಪತಿ ವಿರುದ್ಧ ತನಿಖೆ ಆರಂಭ

ಕುಲಪತಿ ಸೇರಿ 11 ಜನರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2014, 19:30 IST
Last Updated 7 ಅಕ್ಟೋಬರ್ 2014, 19:30 IST

ಧಾರವಾಡ: ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲ­ಯದ ಕುಲಪತಿ ಡಾ.ಎಚ್.ಬಿ.­ವಾಲೀಕಾರ ಅಧಿಕಾರ ದುರು ಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕುರಿತು  ಲೋಕಾಯುಕ್ತ ತನಿಖೆ ಮಂಗಳವಾರ ಆರಂಭ ಗೊಂಡಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ವಿವಿಧ ಕಲಮ್‌ಗಳ ಅಡಿ ದೂರು ದಾಖಲಿ­ಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ಕುಲಪತಿ ಡಾ.ವಾಲೀಕಾರ ಸೇರಿದಂತೆ ಇತರ 11 ಜನರ ವಿರುದ್ಧ  ಎಫ್‌ಐಆರ್‌ ದಾಖಲಿಸಿದ್ದಾರೆ.

ಮೌಲ್ಯಮಾಪನ ಕುಲಸಚಿವ ಡಾ.ಎಚ್‌.ಟಿ.ಪೋತೆ, ಹಣಕಾಸು ಅಧಿಕಾರಿ ರಾಜಶ್ರೀ, ಡಾ.ಎಸ್‌.ಟಿ. ಬಾಗಲಕೋಟೆ, ಡಾ.ಬಿ.ಎಂ.ರತ್ನಾಕರ, ಡಾ.ಸಿ. ರಾಜಶೇಖರ, ಡಾ.ಎಸ್‌.ಸಿ. ಮಾಳಗಿ, ಎಸ್‌.ಎಲ್‌.ಬೀಳಗಿ, ಶಂಕರ­ಗೌಡ ಪಾಟೀಲ, ಪ್ರೊ.ಎನ್‌. ಆರ್‌.­ಬಾಳಿಕಾಯಿ ಹಾಗೂ ಡಾ.ಬೀರಗೌಡರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಲೋಕಾ­ಯುಕ್ತ ಎಸ್‌ಪಿ  ಕೆ.ಪರಶುರಾಮ ಮಂಗಳವಾರ ತಿಳಿಸಿದ್ದಾರೆ.
ಕುಲಪತಿ ಡಾ.ವಾಲೀಕಾರ ಅಧಿಕಾರ ದುರುಪಯೋ ಗಪಡಿಸಿಕೊಂಡು ಅಕ್ರಮ ನಡೆಸಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿತ್ತು.

ಅದರ ಅನ್ವಯ ರಾಜ್ಯಪಾಲ ವಜುಭಾಯಿ ವಾಲಾ ಅವರು ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ಅವರಿದ್ದ ಏಕಸದಸ್ಯ ಆಯೋಗ ರಚಿಸಿ, ಅಕ್ರಮಗಳ ಕುರಿತು ವಿಚಾರಣೆ ನಡೆಸಿ, 15 ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಕಳೆದ ವಾರ ತನಿಖೆ ಪೂರ್ಣಗೊಳಿಸಿದ್ದ  ಆಯೋಗ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿತ್ತು.

ಕುಲಪತಿ ಡಾ.ಎಚ್‌.ಬಿ.ವಾಲೀಕಾರ ತಮ್ಮ ಅಧಿಕಾರ ಅವಧಿಯಲ್ಲಿ ದುರ್ನಡತೆ, ನಂಬಿಕೆ ದ್ರೋಹ ಎಸಗಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇವು ಕಾನೂನಿನ ಪ್ರಕಾರ ದಂಡನಾರ್ಹ ಅಪರಾಧವಾಗಿವೆ. ಅವರ ವಿರುದ್ಧ ಕ್ರಮಕ್ಕೆ ಆಯೋಗ ಶಿಫಾರಸ್ಸು ಮಾಡಿತ್ತು. ಹೀಗಾಗಿ ಲೋಕಾಯುಕ್ತ­ದಲ್ಲಿ ದೂರು ದಾಖಲಿಸುವಂತೆ ರಾಜ್ಯಪಾಲರು ಕರ್ನಾಟಕ ವಿವಿ ಕುಲಸಚಿವರಿಗೆ ನಿರ್ದೇಶನ ನೀಡಿದ್ದರು.

ಹೀಗಾಗಿ ಕುಲಸಚಿವೆ ಡಾ.ಚಂದ್ರಮಾ ಕಣಗಲಿ ಅವರು ಕಳೆದ ಶುಕ್ರವಾರ ದೂರು ಸಲ್ಲಿಸಿದ್ದರು. ಸರ್ಕಾರಿ ರಜೆಯ ಕಾರಣ ದೂರು ದಾಖಲಾಗಿರಲಿಲ್ಲ. ಮಂಗಳವಾರ ಅಧಿಕೃ ತವಾಗಿ ದೂರು ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.