ADVERTISEMENT

ಕಸಾಪ: ಶತಕ ಸಂಭ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2014, 19:30 IST
Last Updated 17 ಆಗಸ್ಟ್ 2014, 19:30 IST
ಧಾರವಾಡದ ಸತ್ತೂರಿನ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಅಂಚೆಚೀಟಿ ಮತ್ತು ಲಕೋಟೆಯನ್ನು ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಬಿಡುಗಡೆ ಮಾಡಿದರು. ಚೆನ್ನವೀರ ಕಣವಿ, ಪುಂಡಲೀಕ ಹಾಲಂಬಿ, ಎಂ.ಎಂ.ಕಲಬುರ್ಗಿ, ಉಮಾಶ್ರೀ ಹಾಗೂ ಮಾಲತಿ ಪಟ್ಟಣಶೆಟ್ಟಿ ಇದ್ದಾರೆ
ಧಾರವಾಡದ ಸತ್ತೂರಿನ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಅಂಚೆಚೀಟಿ ಮತ್ತು ಲಕೋಟೆಯನ್ನು ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಬಿಡುಗಡೆ ಮಾಡಿದರು. ಚೆನ್ನವೀರ ಕಣವಿ, ಪುಂಡಲೀಕ ಹಾಲಂಬಿ, ಎಂ.ಎಂ.ಕಲಬುರ್ಗಿ, ಉಮಾಶ್ರೀ ಹಾಗೂ ಮಾಲತಿ ಪಟ್ಟಣಶೆಟ್ಟಿ ಇದ್ದಾರೆ   

ಸತ್ತೂರು (ಧಾರವಾಡ): ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಸ್ಥಾಪನೆಯಾಗಿ ನೂರು ವರ್ಷ ತುಂಬಿದ ಅಂಗವಾಗಿ ವರ್ಷ­ಪೂರ್ತಿ ನಡೆಯ­ಲಿರುವ ಕಾರ್ಯಕ್ರಮಕ್ಕೆ ಭಾನುವಾರ ಇಲ್ಲಿನ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ವಿಧ್ಯುಕ್ತ ಚಾಲನೆ ನೀಡಲಾಯಿತು.   

ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ಹೊರರಾಜ್ಯ­ಗಳಿಂ­ದಲೂ ಬಂದಿದ್ದ ಸಾಹಿತ್ಯಾಸಕ್ತರು ಉತ್ತರ ಕರ್ನಾಟಕದ ಕರಡಿ ಮಜಲಿನ ಝೇಂಕಾರಕ್ಕೆ ಮನಸೋತರು. ನಾಡ­ಗೀತೆಯ ಮಾಧುರ್ಯ ಅವರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ಹೀಗಾಗಿ ಸುಂದರ ಸಭಾಂಗಣದಲ್ಲಿ ಕನ್ನಡಾಭಿ­ಮಾನಿ­ಗಳ ಜಯಘೋಷ ಮುಗಿಲು ಮುಟ್ಟಿತ್ತು. ಇಂಥ ಸಡಗ­ರದ ವಾತಾವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಕಾರ್ಯಕ್ರಮ ಉದ್ಘಾಟಿಸಿದರು.

25 ಕೃತಿಗಳ ಲೋಕಾರ್ಪಣೆ, ದ್ರಾವಿಡ ಭಾಷಾ ಜ್ಞಾತಿಪದ ಕೋಶ, ಪರಿಷತ್ತಿನ ಸಾಕ್ಷ್ಯಚಿತ್ರ, ಅಂಚೆಚೀಟಿ–ಲಕೋಟೆ ಬಿಡು­ಗಡೆ, ಭಾಷೆ–ಸಂಸ್ಕೃತಿಗಾಗಿ ದುಡಿದವರಿಗೆ ಸನ್ಮಾನ ಉದ್ಘಾಟನಾ ಸಮಾರಂಭದ ಮೆರುಗು ಹೆಚ್ಚಿಸಿತು.

‘ಕನ್ನಡದ ಕೆಲಸಕ್ಕಾಗಿ ಕಸಾಪ ಯಾರ ಮುಂದೆಯೂ ಕೈಚಾಚುವ ಪರಿಸ್ಥಿತಿ ಇರಬಾರದು. ಹೀಗಾಗಿ ನೂರು ವರ್ಷ ತುಂಬಿದ ನೆನಪಿಗಾಗಿ ಸ್ಥಾಪಿಸುವ ಶಾಶ್ವತ ನಿಧಿಗೆ ಉದಾರ ದೇಣಿಗೆ ನೀಡಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನು ಆರ್ಥಿಕ­ವಾಗಿ ಗಟ್ಟಿಗೊಳಿಸಬೇಕು’ ಎಂದು ಮನವಿ ಮಾಡಿದ ಉಮಾಶ್ರೀ, ‘ಕನ್ನಡದ ಕೆಲಸಕ್ಕೆ ಕೈ ಜೋಡಿಸಲು ಸರ್ಕಾರ ಸದಾ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

ಕೃತಿಗಳ ಲೋಕಾರ್ಪಣೆ ಮಾಡಿದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ‘ಕನ್ನಡಿಗರು ಹೃದಯ ವೈಶಾಲ್ಯ ಮೆರೆದು ನಾಡಿನ ಹಿರಿಮೆಯನ್ನು ಪ್ರದರ್ಶಿಸಬೇಕು’ ಎಂದರು. ‘ರಾಜ್ಯ­ದಲ್ಲಿ ಪುಸ್ತಕ ಸಂಸ್ಕೃತಿ ಬೆಳೆಯಬೇಕಾಗಿದೆ’ ಎಂದು ಆಶಿಸಿದ ಅವರು ‘ಪ್ರಾಚೀನತೆಯ ಜ್ಞಾನ, ಮಧ್ಯಕಾಲೀನ ಮಾಹಿತಿ, ಆಧುನಿಕ ವಿಜ್ಞಾನವನ್ನು ತಿಳಿದುಕೊಂಡು ಕನ್ನಡಿಗರು ಚತುರ­ಮತಿ­ಗಳಾಗಬೇಕು, ಗುಣವಂತರಾಗಬೇಕು’ ಎಂದರು.

ದ್ರಾವಿಡ ಭಾಷಾ ಜ್ಞಾತಿಪದ ಕೋಶ ಬಿಡುಗಡೆ ಮಾಡಿದ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ, ‘ಸಂಸ್ಕೃತದ ವ್ಯಾಮೋ­ಹ­ದಿಂದಾಗಿ ದ್ರಾವಿಡ ಪದಗಳ ನಡುವಣ ಸಂಬಂಧ  ಮರೆಯ­ಲಾ­­ಗುತ್ತಿದೆ. ದ್ರಾವಿಡ ಭಾಷೆಯ ಪದಗಳನ್ನು ಬಳಸಿಕೊಂಡು ಹೊಸ ಶಬ್ದಗಳ ಸೃಷ್ಟಿಗೆ ಕನ್ನಡಿಗರು ಮುಂದಾಗಬೇಕು. ಶಾಸ್ತ್ರೀಯ ಭಾಷಾ ಕೇಂದ್ರ ಸ್ಥಾಪಿಸಲು ಸರ್ಕಾರ ಬೇಗ ಕಾರ್ಯ­ಕ್ರಮ ಹಮ್ಮಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಕನ್ನಡ ಬೆಳೆದು ಬಂದ ಬಗೆಯನ್ನು ವರ್ಣಿಸುವ ಸಾಕ್ಷ್ಯ­ಚಿತ್ರ­ವನ್ನು ಕವಿ ಚೆನ್ನವೀರ ಕಣವಿ  ಬಿಡುಗಡೆ ಮಾಡಿದರು. ‘ಕಸಾಪ ಶತಮಾ­ನೋತ್ಸವ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಶಾಲೆ­ಗಳಲ್ಲಿ ಆಚರಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿ­ಸಬೇಕು’ ಎಂದು ಆಗ್ರಹಿಸಿದ ಅವರು ಗಡಿ ಸಮಸ್ಯೆ ಕುರಿತು ಕಾಳಜಿ ವಹಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದರು.

ಗಡಿಗಳಲ್ಲಿ ವಿಚಾರಗೋಷ್ಠಿ: ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಗಡಿ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು’ ಎಂದರು.

‘ವಚನ ಸಾಹಿತ್ಯ ಕುರಿತು ಬೀದರ್‌ನಲ್ಲಿ, ಕರಾವಳಿ ಕನ್ನಡ ಕುರಿತು ಕಾರವಾರದಲ್ಲಿ, ದಲಿತ ಸಾಹಿತ್ಯದ ಕುರಿತು ಚಾಮ­ರಾಜ­ನಗರದಲ್ಲಿ, ಗಡಿನಾಡ ಕನ್ನಡ ಕುರಿತು ಕೋಲಾರ­ದಲ್ಲಿ ಮತ್ತು ಮಹಿಳಾ ಸಾಹಿತ್ಯ ಕುರಿತು ಬೆಳಗಾವಿಯಲ್ಲಿ ತಲಾ ಎರಡು ದಿನಗಳ ವಿಚಾರ ಸಂಕಿರಣ ನಡೆಸಲಾಗುವುದು’ ಎಂದು ಅವರು ವಿವರಿಸಿದರು.

ಚನ್ನವೀರ ಕಣವಿ, ಸಾಹಿತಿಗಳಾದ ಮಾಲತಿ ಪಟ್ಟಣಶೆಟ್ಟಿ, ವೀಣಾ ಶಾಂತೇಶ್ವರ, ಸುಕನ್ಯಾ ಮಾರುತಿ, ಪ್ರಹ್ಲಾದ ಅಗಸನಕಟ್ಟೆ, ಪ್ರೊ.ಐ.ಜಿ. ಸನದಿ, ಸಾಮಾಜಿಕ ಕಾರ್ಯಕರ್ತ ಡಾ.ಸಂಜೀವ ಕುಲಕರ್ಣಿ ಹಾಗೂ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ನ.ವಜ್ರಕುಮಾರ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.