ADVERTISEMENT

ಕಾರಹುಣ್ಣಿಮೆ ಸಂಭ್ರಮ ಕಿತ್ತುಕೊಂಡ ಮಳೆ

ಕುಂದಗೋಳ, ಸಂಶಿ ಹೋಬಳಿಯಲ್ಲಿ ಭಾರೀ ಹಾನಿ; ಕೊಚ್ಚಿ ಹೋದ ರಸ್ತೆಗಳು, ಬದುಗಳು ಕಾಣೆ

ವೆಂಕಟೇಶ್ ಜಿ.ಎಚ್
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ಹುಬ್ಬಳ್ಳಿ: ಕಾರಹುಣ್ಣಿಮೆ ಆಚರಿಸಿ ಮುಂಗಾರು ಹಂಗಾಮಿನ ಬಿತ್ತನೆಯ ಸಿದ್ಧತೆಯಲ್ಲಿದ್ದ ಕುಂದಗೋಳ ತಾಲ್ಲೂಕಿನ ಜನತೆಯ ಸಂಭ್ರಮವನ್ನು ಮಂಗಳವಾರ ಸುರಿದ ಮಳೆ ಕಿತ್ತುಕೊಂಡಿದೆ.


ಗಾಳಿಯ ಸುಳಿವಿಲ್ಲದೇ ಮೋಡಗಳೇ ಕಳಚಿ ಬಿದ್ದಂತೆ ಸತತ ನಾಲ್ಕು ತಾಸು ಸುರಿದ ಕುಂಭದ್ರೋಣ ಮಳೆಯಿಂದಾಗಿ ಕುಂದಗೋಳ ಹಾಗೂ ಸಂಶಿ ಹೋಬಳಿಯ ಹೊಸಳ್ಳಿ, ಯರೇಬೂದಿಹಾಳ, ಕೊಡ್ಲಿವಾಡ, ಹಿರೇಗುಂಜಾಳ, ಗುಡಗೇರಿ, ಹಿರೇನರ್ತಿ, ಚಿಕ್ಕನರ್ತಿ, ಗುಡೇನಕಟ್ಟಿ, ಕಮಡೊಳ್ಳಿ, ಪಶುಪತಿಹಾಳ ಸುತ್ತಲೂ ಮಳೆ ಹೆಚ್ಚಿನ ಹಾನಿ ಮಾಡಿದೆ. ಬುಧವಾರ ಮುಂಜಾನೆ ‘ಪ್ರಜಾವಾಣಿ’ ಸ್ಥಳಕ್ಕೆ ಭೇಟಿ ನೀಡಿದಾಗ ಹಿಂದಿನ ದಿನದ ದುಃಸ್ವಪ್ನದಿಂದ ಸ್ಥಳೀಯರು ಹೊರಬಂದಿರಲಿಲ್ಲ.

ಬದಲಾದ ಚಿತ್ರಣ: ಮಳೆ ಆರ್ಭಟಕ್ಕೆ ಸಿಲುಕಿ ರಸ್ತೆಗಳು ಕೊಚ್ಚಿ ಹೋಗಿದ್ದು, ಗ್ರಾಮಗಳ ನಡುವೆ ಸಂಪರ್ಕ ಕಡಿದುಹೋಗಿದೆ. ಹೊಲಗಳು ಕೆರೆಗಳಾಗಿ ಮಾರ್ಪಾಟಾಗಿವೆ. ಜಮೀನುಗಳನ್ನು ಬೇರ್ಪಡಿಸಿದ್ದ ಬದುಗಳು ಕಾಣೆಯಾಗಿದ್ದರೆ, ಯರೇಬೂದಿಹಾಳ ಕೆರೆಯ ಏರಿ ಒಡೆದಿದೆ.

ಮಳೆ ನೀರಿನೊಂದಿಗೆ ಹರಿದುಬಂದ ಮಣ್ಣು ಹೊಲಗಳಲ್ಲಿ 4ರಿಂದ 5 ಅಡಿಯಷ್ಟು ಶೇಖರಣೆಗೊಂಡಿದೆ. ಕೆಲವೆಡೆ ಹೊಲಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಮನೆಗಳ ಗೋಡೆ ಬಿದ್ದಿದ್ದು, ಛಾವಣಿ ಹಾರಿ ಹೋಗಿವೆ. ಹತ್ತಿಕಡ್ಡಿ, ಹುಲ್ಲಿನ ಬಣವೆ, ತಿಪ್ಪೆ, ಚಕ್ಕಡಿಗಾಡಿ, ಬೈಕ್‌, ಟ್ರ್ಯಾಕ್ಟರ್‌ಗಳು ತೇಲಿ ಹೋಗಿವೆ. ಚೆಕ್‌ಡ್ಯಾಂಗಳು ಹಾಳಾಗಿವೆ. ಮರಗಳು ಬೇರು ಸಮೇತ ಉರುಳಿ ಬಿದ್ದು ಕಿ.ಮೀ.ಗಟ್ಟಲೇ ಕೊಚ್ಚಿಕೊಂಡು ಹೋಗಿವೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಮಳೆ ಊರಿನ ಚಿತ್ರಣವನ್ನು ಬದಲಾಯಿಸಿರುವುದು ಸ್ಥಳೀಯರನ್ನು ಕಂಗೆಡಿಸಿದೆ.

ಪ್ರತಿ ಮಳೆಗಾಲದಲ್ಲಿ ಸ್ಥಳೀಯರಲ್ಲಿ ಕಣ್ಣೀರು ಹಾಕಿಸುವ ಬೆಣ್ಣಿಹಳ್ಳ ಕಾರಹುಣ್ಣಿಮೆಯ ಮಳೆಗೆ ಹುಚ್ಚು ಕುದುರೆಯಂತಾಗಿದ್ದು, ತನ್ನ ಫಾಸಲೆಯಲ್ಲಿ ಹೆಚ್ಚಿನ ತೊಂದರೆ ಮಾಡಿದೆ. ಜೊತೆಗೆ ಕಗ್ಗೋಡಿ ಹಳ್ಳ, ಗೂಗಿ ಹಳ್ಳ. ಕನೋಜ ಹಳ್ಳ, ದೇಸಳ್ಳ, ಚಿಕ್ಕನರ್ತಿ ಹಳ್ಳ ತುಂಬಿ ಹರಿದಿವೆ. ಈ ಸಂದರ್ಭದಲ್ಲಿ ಅಕ್ಕಪಕ್ಕದ ನೂರಾರು ಎಕರೆ ಹೊಲಗಳಲ್ಲಿನ ಬೆಳೆ, ಮಣ್ಣು, ಗಿಡಗಂಟೆ ಎಲ್ಲಾ ಕೊಚ್ಚಿಕೊಂಡು ಹೋಗಿವೆ.

‘ದೇಸಳ್ಳ ಮಣ್ಣು ಕೊಚ್ಚಿ ತಂದಿರುವುದರಿಂದ ಹೊಲ ಕೆಸರುಗದ್ದೆಯಾಗಿ ಹಾಳಾಗಿದೆ. ಈ ಹಂಗಾಮಿನಲ್ಲಿ ಬಿತ್ತನೆ ಸಾಧ್ಯವಿಲ್ಲ. ಬದುಗಳನ್ನು ಮತ್ತೆ ನಿರ್ಮಿಸಬೇಕಿದೆ. ಕನಿಷ್ಠ 4ರಿಂದ 5 ಲಕ್ಷ ಖರ್ಚಾಗುತ್ತದೆ’ ಎಂದು ಯರೇಬೂದಿಹಾಳದ ಶರಣಪ್ಪ ಯರಗುಪ್ಪಿ ಅಳಲು ತೋಡಿಕೊಂಡರು.

ಸಂಶಿ–ಹಿರೇಗುಂಜಳ ರಸ್ತೆ ದೇಸಳ್ಳದ ಆರ್ಭಟಕ್ಕೆ ಕೊಚ್ಚಿ ಹೋಗಿದ್ದು, ಕುಂದಗೋಳ ಹಾಗೂ ಶಿರಹಟ್ಟಿ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಬಂದ್ ಆಗಿದೆ. ಹೊಸಳ್ಳಿ–ಯರೇಬೂದಿಹಾಳ ನಡುವಿನ ರಸ್ತೆಯೂ ಅರ್ಧ ಭಾಗ ಕಿತ್ತು ಹೋಗಿದೆ. ‘50 ವರ್ಷಗಳ ಹಿಂದೆ ಇಂತಹ ಮಳೆ ನೋಡಿದ್ದೆ. ಈಗ ಮತ್ತೆ ನೋಡ್ತಿದ್ದೀನ್ರಿ. ಗೂಗಿ ಹಳ್ಳ  ಯಾವತ್ತೂ ಹೀಗೆ ಆರ್ಭಟ ಮಾಡಿರಲಿಲ್ಲ. ಈಗ ಆಸುಪಾಸಿನ ಮರಗಳನ್ನು ಬೇರು ಸಮೇತ ಕಿತ್ತು ತಂದಿದೆ’ ಎಂದು ಪಕ್ಕದಲ್ಲಿ ಬಿದ್ದಿದ್ದ ಬೇವಿನ ಮರವನ್ನು ಹೊಸಳ್ಳಿಯ ವೃದ್ಧ ಬಸಪ್ಪ ಮಾಯನ್ನವರ ತೋರಿಸಿದರು.

ಕೆರೆ ಏರಿ ಒಡೆದು ಊರೊಳಗೆ ನೀರು ಹರಿದಿದ್ದರಿಂದ ರಾತ್ರಿಯಿಡೀ ನಡುಗಡ್ಡೆಯಾಗಿ ಬದಲಾಗಿದ್ದ ಯರೇಬೂದಿಹಾಳದಲ್ಲಿ ಮುಂಜಾನೆ ನೀರಿನ ಪ್ರಮಾಣ ಇಳಿಕೆಯಾಗಿತ್ತು. ಗ್ರಾಮಸ್ಥರು ಸಣ್ಣಪುಟ್ಟ ಹಾನಿ ಸರಿಪಡಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದರು. ಮಳೆಯಿಂದಾಗಿ ಹೆಸ್ಕಾಂನ ಸಾಲು ಸಾಲು ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
***
ಮಳೆಯಿಂದ ತಾಲ್ಲೂಕಿನಲ್ಲಿ ಆಗಿರುವ ಹಾನಿಯನ್ನು ಅಂದಾಜು ಮಾಡಲಾಗುತ್ತಿದೆ. ಗುರುವಾರ ಸಂಜೆ ಸ್ಪಷ್ಟ ಚಿತ್ರಣ ದೊರೆಯಲಿದೆ
-ಮಹಾದೇವ ಬನ, ಕುಂದಗೋಳ ತಹಶೀಲ್ದಾರ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.