ADVERTISEMENT

ಕಾವೇರಿ ನದಿ ಸಂರಕ್ಷಣೆಗೆ ಚಾಲನೆ

ಕಾವೇರಿನದಿ ಸಂರಕ್ಷಣಾ ಯೋಜನೆಗೆ ಚಾಲನೆ; ಶ್ರೀಶ್ರೀ ರವಿಶಂಕರ ಗುರೂಜಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:56 IST
Last Updated 27 ಮಾರ್ಚ್ 2018, 19:56 IST

ನಾಪೋಕ್ಲು (ಮಡಿಕೇರಿ): ನದಿತೀರಗಳಲ್ಲಿ ಬಡಾವಣೆಗಳನ್ನು ನಿರ್ಮಿಸುವುದರಿಂದ ನದಿಗಳು ಕಲುಷಿತಗೊಳ್ಳುತ್ತಿವೆ. ಇದರಿಂದ ಮಾನವ ಜನಾಂಗಕ್ಕೆ ಧಕ್ಕೆ ಉಂಟಾಗಲಿದೆ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಮುಖ್ಯಸ್ಥ ಶ್ರೀಶ್ರೀ ರವಿಶಂಕರ ಗುರೂಜಿ ಹೇಳಿದರು.

ಸಮೀಪದ ಭಾಗಮಂಡಲದಲ್ಲಿ ಕಾವೇರಿ ನದಿ ಸಂರಕ್ಷಣಾ ಯೋಜನೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ನದಿಗಳು ಮಲಿನವಾಗುವುದನ್ನು ತಡೆಗಟ್ಟಬೇಕು. ಚರಂಡಿ ತ್ಯಾಜ್ಯ ಸೇರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಬೇಕು. ನದಿ ದಂಡೆಗಳ ವ್ಯಾಪ್ತಿಯಲ್ಲಿ ಬಡಾವಣೆಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಅರಣ್ಯ ಇಲಾಖೆ ಆಯಾ ಪ್ರದೇಶಕ್ಕೆ ಸೂಕ್ತವಾಗುವ ಸಸಿಗಳನ್ನು ನೆಟ್ಟು ಬೆಳೆಸಬೇಕು. ಅಕೇಶಿಯಾದಂತಹ ಮರಗಳನ್ನು ಅರಣ್ಯ ಪ್ರದೇಶದಲ್ಲಿ ಬೆಳೆಸಬಾರದು ಎಂದರು.

ಕೊಡಗು ಜಿಲ್ಲೆಯಾದ್ಯಂತ ಆರ್ಟ್‌ ಆಫ್ ಲಿವಿಂಗ್ ವತಿಯಿಂದ ನದಿ ಪುನಶ್ಚೇತನ ಯೋಜನೆ ಅಂಗವಾಗಿ 2.50 ಲಕ್ಷ ಸಸಿಗಳನ್ನು ನೆಡುವ ಮಹತ್ವದ ಯೋಜನೆ ರೂಪಿಸಲಾಗಿದೆ. ಪ್ರವಾಸಿಗರಿಂದ ಕೊಡಗಿನ ಪರಿಸರಕ್ಕೆ ಧಕ್ಕೆಯಾಗುತ್ತಿದೆ ಎಂಬ ಆಪಾದನೆಗಳಿವೆ. ಪ್ರವಾಸೋದ್ಯಮ ಅಗತ್ಯವಿದೆ. ಆದರೆ ಅದು ಶಿಸ್ತಿನ ಪ್ರವಾಸೋದ್ಯಮವಾಗಿರಬೇಕು ಎಂದು ಹೇಳಿದರು.

ಸಂಸದ ಪ್ರತಾಪಸಿಂಹ, ಕಾಶ್ಮೀರದಲ್ಲಿರುವಂತೆ ಕೊಡಗಿನಲ್ಲಿಯೂ ಭೂಮಿ ಮಾರಾಟಕ್ಕೆ ಆಸ್ಪದ ಕೊಡದೇ ಇರುವಂತಹ ವಿಶೇಷ ಕಾನೂನು ಜಾರಿಗೊಳಿಸಬೇಕು. ಯುವ ಪೀಳಿಗೆ ನಿಸರ್ಗ ಮತ್ತು ನದಿಗಳ ರಕ್ಷಣೆ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ. ಹೀಗಾಗಿ, ಯುವ ಜನಾಂಗಕ್ಕೆ ನದಿ, ನಿಸರ್ಗ ಸಂರಕ್ಷಣೆ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನವಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.