ADVERTISEMENT

ಕಾವ್ಯ ಜನರ ಆಶೋತ್ತರಗಳ ಅಭಿವ್ಯಕ್ತಿ

ಮೂರು ದಿನಗಳ ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಚಾಲನೆ

ಇ.ಎಸ್.ಸುಧೀಂದ್ರ ಪ್ರಸಾದ್
Published 22 ಜನವರಿ 2016, 19:56 IST
Last Updated 22 ಜನವರಿ 2016, 19:56 IST
ಧಾರವಾಡದಲ್ಲಿ ಶುಕ್ರವಾರ ಆರಂಭವಾದ ಸಾಹಿತ್ಯ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಎಸ್‌.ಆಮೂರ ಅವರಿಗೆ ಗಿರಡ್ಡಿ ಗೋವಿಂದರಾಜ ಅವರು ಲೇಖನಿ ನೀಡಿದರು. ಚಂದ್ರಶೇಖರ ಕಂಬಾರ ಇದ್ದಾರೆ   ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದಲ್ಲಿ ಶುಕ್ರವಾರ ಆರಂಭವಾದ ಸಾಹಿತ್ಯ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಎಸ್‌.ಆಮೂರ ಅವರಿಗೆ ಗಿರಡ್ಡಿ ಗೋವಿಂದರಾಜ ಅವರು ಲೇಖನಿ ನೀಡಿದರು. ಚಂದ್ರಶೇಖರ ಕಂಬಾರ ಇದ್ದಾರೆ ಚಿತ್ರ: ಬಿ.ಎಂ.ಕೇದಾರನಾಥ   

ಧಾರವಾಡ: ‘ಆಧುನಿಕ ಕವಿಗೆ ವಸ್ತುವಿನ ಆಯ್ಕೆಯೇ ಒಂದು ನೈತಿಕ ಸಮಸ್ಯೆಯಾಗಿದೆ. ಕಾವ್ಯ ಎನ್ನುವುದು ಕವಿಯ ಆತ್ಮಾಭಿವ್ಯಕ್ತಿಯ ಸಿದ್ಧಿಯಲ್ಲ, ಅದು ಜನರ ಆಶೋತ್ತರಗಳ ಅಭಿವ್ಯಕ್ತಿ’ ಎಂದು ಹಿರಿಯ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಶುಕ್ರವಾರ ಇಲ್ಲಿ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ವಿವಿ ಹಾಗೂ ‘ಪ್ರಜಾವಾಣಿ’ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಆಯೋಜನೆಗೊಂಡಿರುವ ಮೂರು ದಿನಗಳ ಧಾರವಾಡ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಪರಿಸ್ಥಿತಿಯಲ್ಲಿ ಕನ್ನಡದ ಬರಹಗಾರರು ಹಿಂದಿನವರಿಗಿಂತ ಭಿನ್ನವಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈಗ ಕಾವ್ಯ ಕೇಳುವವರು ಕಡಿಮೆ, ಆದರೆ, ಓದುವವರು ಹೆಚ್ಚಾಗಿದ್ದಾರೆ. ಹಾಗೆಯೇ ಕಾವ್ಯವೂ ಛಂದೋಗತಿಯನ್ನು ಕಳೆದುಕೊಂಡು ಗದ್ಯದ ಸ್ವರೂಪ ಪಡೆಯಲು ಹವಣಿಸುತ್ತಿದೆ’ ಎಂದರು.

‘ಅಂದಿನ ಕವಿಗಳಿಗೆ ವಸ್ತುವಿನ ಆಯ್ಕೆಯಲ್ಲಿ ಯಾವ ಸಮಸ್ಯೆಯೂ ಇರಲಿಲ್ಲ. ಮೊದಲೇ ಇದ್ದ ಕಥೆಗಳಲ್ಲಿ ಒಂದನ್ನು ಆಯ್ದುಕೊಳ್ಳುತ್ತಿದ್ದರು. ಆದರೆ, ತಾನು ಯಾರಿಗಾಗಿ ಕಾವ್ಯ ರಚಿಸುತ್ತಿದ್ದೇನೆ ಎಂಬುದರ ಅರಿವಿತ್ತು. ಅವರಂತೆಯೇ ಇಂದಿನವರೂ ತಾವು ರಚಿಸುತ್ತಿರುವ ಕಾವ್ಯ ಯಾರಿಗಾಗಿ ಎಂಬುದನ್ನು ಅರಿತರೆ ಅದರಿಂದ ಸಮಾಜಕ್ಕೆ ಹೆಚ್ಚು ಉಪಯುಕ್ತವಾಗಬಲ್ಲದು’ ಎಂದು ಹೇಳಿದರು.

‘ಹರಿಹರ, ರಾಘವಾಂಕರಿಂದ ಜನರ ಬದುಕಿನ ಕುರಿತು ಕಾವ್ಯ ರಚನೆ ಆರಂಭವಾಗಿ ಅದು ಇಂದಿನವರೆಗೂ ನಡೆದುಕೊಂಡು ಬಂದಿದೆ. ಆದರೆ, ಬ್ರಿಟಿಷರು ಈ ದೇಶಕ್ಕೆ ಬಂದ ನಂತರ ಮೌಖಿಕ ಪರಂಪರೆಯ ನಮ್ಮ ಸಾಹಿತ್ಯ ಹಾಗೂ ಸಂಸ್ಕೃತಿ ಬುಡಮೇಲಾದವು. ಸಮೂಹವನ್ನು ಉದ್ದೇಶಿಸಿ ಕಾವ್ಯ ರಚಿಸುತ್ತಿದ್ದ ನಾವು, ಬ್ರಿಟಿಷರ ಆಗಮನದ ನಂತರ ವ್ಯಕ್ತಿಯ ಕುರಿತಾಗಿ ಕಾವ್ಯ ಬರೆಯುವ ಸ್ಥಿತಿ ತಲುಪಿದ್ದೇವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಭಾಷೆಯನ್ನು ಪ್ರೀತಿಸಿದರೆ ಜಗತ್ತಿನ ತಂತ್ರಗಳು ಬಯಲಿಗೆ ಬರಲಿವೆ. ಜಗತ್ತು ಮುಚ್ಚಿಟ್ಟುಕೊಂಡ ಅದೆಷ್ಟೋ ಒಗಟುಗಳು ಕವಿಯ ಭಾಷೆಯಿಂದ ಅರ್ಥವಾಗುತ್ತವೆ. ಇಷ್ಟಕ್ಕೇ ಇಂದಿನ ಕವಿ ತೃಪ್ತರಾದಂತೆ ಕಾಣುತ್ತದೆ. ಇದು ಇಂದಿನ ಕವಿಗಳ ಮಿತಿಯೂ ಹೌದು’ ಎಂದರು.

ಇದಕ್ಕೂ ಮುನ್ನ ‘ಪ್ರಜಾವಾಣಿ’ ಸಂಪಾದಕರಾದ ಕೆ.ಎನ್‌. ಶಾಂತಕುಮಾರ್‌ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಗಿರಡ್ಡಿ ಗೋವಿಂದರಾಜ ವಹಿಸಿದ್ದರು. ಕವಿವಿ ಕುಲಪತಿ ಪ್ರಮೋದ ಗಾಯಿ ‘ಕಲಬುರ್ಗಿ ನೆನಪು’ ಪುಸ್ತಕ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.