ADVERTISEMENT

ಕುಮಾರಸ್ವಾಮಿ, ಯಡಿಯೂರಪ್ಪ ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 11:09 IST
Last Updated 29 ಡಿಸೆಂಬರ್ 2017, 11:09 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಚಿಕ್ಕಬಳ್ಳಾಪುರ: ಮುಂಬರುವ ವಿಧಾಸಭಾ ಚುನಾವಣೆಯಲ್ಲಿ ಹೆಚ್‌.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಪ್ಪನಾಣೆಗೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಾಗೇಪಲ್ಲಿಯಲ್ಲಿ ಶುಕ್ರವಾರ ಆಯೋಜಿಸಿರುವ ‘ನುಡಿದಂತೆ ನಡೆದಿದ್ದೇವೆ–ಸಾಧನಾ ಸಂಭ್ರಮ’ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಎತ್ತಿನಹೊಳೆ ಯೋಜನೆಯನ್ನು ರದ್ದು ಮಾಡುವುದಾಗಿ ಹೇಳುತ್ತಾರೆ. ಆದರೆ ಯೋಜನೆಯನ್ನು ನಿಲ್ಲಿಸಲು ಅವರಿಂದ ಸಾಧ್ಯವಿಲ್ಲ. ಅವರು ರಾಜಕೀಯ ದುರುದ್ದೇಶದಿಂದ ಎತ್ತಿನಹೊಳೆ ಯೋಜನೆಯನ್ನು ದುಡ್ಡು ಹೊಡೆಯುವ ಯೋಜನೆ ಎಂದು ಆರೋಪಿಸುತ್ತಾರೆ. ಅವರಿಗೆ ಈ ಭಾಗದ ಜನ ಬುದ್ಧಿ ಕಲಿಸಬೇಕು’ ಎಂದರು.

ADVERTISEMENT

‘ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನೋಡುವುದು ನನ್ನ ಆಸೆ ಎನ್ನುವ ಹೆಚ್.ಡಿ. ದೇವೇಗೌಡರು, ದಲಿತರೊಬ್ಬನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಈವರೆಗೂ ಹೇಳಿಲ್ಲ. ಅವರಿಗೆ ಕುಟುಂಬಸ್ಥರ ಹಿತಾಸಕ್ತಿ ಮುಖ್ಯವೇ ಹೊರತು ಸಾಮಾಜಿಕ ಹಿತಾಸಕ್ತಿಯಲ್ಲ’ ಎಂದರು.

ಮಹಾದಾಯಿ ವಿಚಾರದಲ್ಲಿ ಯಡಿಯೂರಪ್ಪ ಡಿ.15ರ ಒಳಗೆ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿ ಮಾತು ತಪ್ಪಿದ್ದಾರೆ. ಜತೆಗೆ, ಹತಾಶೆಯಿಂದ ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡುತ್ತಾರೆ ಎಂದರು.

'ಬಿಜೆಪಿಯವರಿಗೆ ಮಹಾದಾಯಿ ವಿಚಾರದಲ್ಲಿ ಅಷ್ಟು ಕಾಳಜಿ ಇದ್ದರೆ ನೇರವಾಗಿ, ನ್ಯಾಯಮಂಡಳಿಯಲ್ಲಿ ನಾವು ನೀರು ಕೊಡುತ್ತೇವೆ ಎಂದು ಪ್ರಮಾಣಪತ್ರ ಸಲ್ಲಿಸಲಿ' ಎಂದು ಸವಾಲು ಹಾಕಿದರು.

'ಜಗದೀಶ್ ಶೆಟ್ಟರ್ ಅವರಿಗೆ ಕಾನೂನು ಜ್ಞಾನ ಇದೆಯಾ? ಒಂದು ರಾಜ್ಯದ ಮುಖ್ಯಮಂತ್ರಿಗೆ ಇನ್ನೊಂದು ರಾಜ್ಯದ ಮುಖ್ಯಮಂತ್ರಿ ಪತ್ರ ಬರೆಯಬೇಕು. ಯಡಿಯೂರಪ್ಪ ಏನಾಗಿದ್ದಾರೆ? ಅವರು ಒಂದು ಪಕ್ಷದ ಅಧ್ಯಕ್ಷರಷ್ಟೆ' ಎಂದು ಹೇಳಿದರು.

'ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರಿಗೆ ಸೌಜನ್ಯವಿಲ್ಲ. ಹೆತ್ತವರಿಗೆ ಹೆಗ್ಗಣ ಎನ್ನುವಂತೆ ಅವರಿಗೆ ಅವರ ಪಕ್ಷದವರನ್ನು ಕಂಡರೆ ಪ್ರೀತಿ. ನಾವು ನೀರಿಗಾಗಿ ಅವರೊಂದಿಗೆ ಹೋರಾಟ ಮಾಡುತ್ತಿರುವುದರಿಂದ ಅದಕ್ಕೆ ಅವರು ಆ ರೀತಿ ಹೇಳಿದ್ದಾರೆ' ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ಮಹಾದಾಯಿ ವಿಚಾರದಲ್ಲಿ ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಇದರ ಚಿತ್ರಕಥೆ ಅಮಿತ್ ಶಾ ಅವರದು. ಯಡಿಯೂರಪ್ಪ, ಪರಿಕ್ಕರ್ ಪಾತ್ರಧಾರಿಗಳು. ಅಧಿಕಾರವಿದ್ದಾಗ ಸಾಲ ಮನ್ನಾ ಮಾಡದವರು ವಿರೋಧ ಪಕ್ಷದಲ್ಲಿ ಇದ್ದಾಗ ಸಾಲಮನ್ನಾ ಮಾಡುವಂತೆ ಒತ್ತಾಯಿಸುತ್ತಾರೆ. ಬಿಜೆಪಿಯವರಿಗೆ ಹೊರಗೊಂದು, ಒಳಗೊಂದು ಎರಡು ನಾಲಿಗೆ, ಎರಡು ಮುಖಗಳಿವೆ' ಎಂದು ಜರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.