ADVERTISEMENT

ಕೃಷಿ ಕಾರ್ಮಿಕರಿಗೆ ವಾಸದ ಮನೆ ಹಕ್ಕು ಮಸೂದೆ ಮತ್ತೆ ಮಂಡನೆ: ಕಾಗೋಡು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:54 IST
Last Updated 23 ಮಾರ್ಚ್ 2017, 19:54 IST

ಬೆಂಗಳೂರು: ಕೃಷಿ ಕಾರ್ಮಿಕರಿಗೆ ವಾಸದ ಮನೆಯ ಹಕ್ಕು ನೀಡುವ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಮಸೂದೆಯನ್ನು ಸಣ್ಣಪುಟ್ಟ ತಿದ್ದುಪಡಿಗಳೊಂದಿಗೆ ವಿಧಾನಸಭೆಯಲ್ಲಿ ಮತ್ತೆ ಮಂಡಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರಹಟ್ಟಿ, ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್‌, ಕಾಲೊನಿಯಂಥ ಜನವಸತಿಯನ್ನೊಳಗೊಂಡ ಗ್ರಾಮ ವ್ಯಾಪ್ತಿಯ ಗಡಿ ಗುರುತಿಸಿ, ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ ಬಳಿಕ ಅಲ್ಲಿ ವಾಸ ಇರುವವರಿಗೆ ಹಕ್ಕುಪತ್ರ ನೀಡಲಾಗುವುದು’ ಎಂದರು.

ಅಂಥ ಜನವಸತಿಗಳಲ್ಲಿ 1979ರ ಜ. 1ರಿಂದ ವಾಸಿಸುತ್ತಿರುವ ಕೃಷಿ ಕಾರ್ಮಿಕರಿಗೆ ಅವರ ಮನೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಅನುಭೋಗದ ಭೂಮಿ ಸಹಿತ ಹಕ್ಕುಪತ್ರ ನೀಡಲು ಈ ತಿದ್ದುಪಡಿ ಮಸೂದೆ ಅವಕಾಶ ಕಲ್ಪಿಸುತ್ತದೆ. ಮಸೂದೆ ಸ್ವಾಗತಿಸಿದ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಸರ್ಕಾರಿ ಭೂಮಿಯಾಗಿದ್ದರೆ ಸಮಸ್ಯೆ ಇಲ್ಲ. ಆದರೆ, ಖಾಸಗಿ ಮಾಲೀಕತ್ವದ ಭೂಮಿಗೆ ಈ ಕಾಯ್ದೆ ಅನ್ವಯ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ADVERTISEMENT

ಆಗ ಕಾಗೋಡು, ‘ಜಿಲ್ಲಾಧಿಕಾರಿಯಿಂದ ಹೊಸದಾಗಿ ಅಧಿಸೂಚನೆಯಾಗುವ ಗ್ರಾಮಗಳ ವ್ಯಾಪ್ತಿಯಲ್ಲಿ ನೆಲೆಸಿರುವ ಜನವಸತಿಗಳಿಗೆ ಮಾತ್ರ ಇದು ಅನ್ವಯ’ ಎಂದು ಸ್ಪಷ್ಟಪಡಿಸಿದರು. ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಸದನ ಸಮಿತಿ ರಚಿಸುವ ಕುರಿತೂ ಪ್ರಸ್ತಾಪವಾಯಿತು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಎಸ್‌ಆರ್‌ ಕಾಂಗ್ರೆಸ್‌ನ ಕೆ. ರಾಜೀವ್‌ ಮತ್ತು ಕಾಂಗ್ರೆಸ್‌ನ ಕೆ.ಶಿವಮೂರ್ತಿ ನಾಯಕ್‌, ಮಸೂದೆಯನ್ನು ಯಥಾಸ್ಥಿತಿಯಲ್ಲಿ ಅಂಗೀಕರಿಸುವಂತೆ ಒತ್ತಾಯಿಸಿದರು.

ಈ ಮಧ್ಯೆ, ಬಿಟ್ಟು ಹೋಗಿರುವ ಕೆಲವು ಹಟ್ಟಿಗಳ ಹೆಸರನ್ನು ಸೇರಿಸುವಂತೆ ಕೆಲವು ಶಾಸಕರು ಒತ್ತಾಯಿಸಿದರು. ಈ ಕಾರಣಕ್ಕೆ, ತಿದ್ದುಪಡಿಗಳೊಂದಿಗೆ ಮತ್ತೆ ಮಂಡಿಸುವಂತೆ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಸೂಚಿಸಿದರು. ಮಸೂದೆ ಅಂಗೀಕಾರ: ಪರೀಕ್ಷಾ ಅಕ್ರಮ ಮತ್ತು ಮೌಲ್ಯಮಾಪನ ಬಹಿಷ್ಕಾರ ತಡೆಯುವ ಉದ್ದೇಶ ಹೊಂದಿದ ‘ಕರ್ನಾಟಕ ಶಿಕ್ಷಣ (ತಿದ್ದುಪಡಿ) ಮಸೂ ದೆ’ಗೂ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಈ ಮಸೂದೆ ಮಂಡಿಸಿ ದರು. ‘ಮಸೂದೆ ರೂಪಿಸಿದರಷ್ಟೆ ಸಾಲದು. ನಿಯಮ ರಚಿಸುವ ವೇಳೆ ಎಚ್ಚ ರಿಕೆ ವಹಿಸಬೇಕು’ ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು.

ಕಾರ್ಮಿಕ ಕಲ್ಯಾಣ ನಿಧಿಗೆ ಉದ್ಯೋಗಿ, ಉದ್ಯೋಗದಾತ ಮತ್ತು ಸರ್ಕಾರದ ವಂತಿಗೆಯನ್ನು ಕ್ರಮವಾಗಿ  ₹ 20, ₹40, ₹20 ಹೆಚ್ಚಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ಮಸೂದೆಯನ್ನೂ ಅಂಗೀಕರಿಸಲಾಯಿತು.  ರಾಜ್ಯದಲ್ಲಿ 33,24 ಲಕ್ಷ ಕಾರ್ಮಿಕರಿಗೆ ಈ ಕಾಯ್ದೆ ಅನ್ವಯ ಆಗಲಿದ್ದು, ₹4.62 ಕೋಟಿ ಹೆಚ್ಚುವರಿ ವೆಚ್ಚ ತಗುಲಲಿದೆ ಎಂದು ಮಸೂದೆ ಮಂಡಿಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ವಿವರಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 18 ಕಿ.ಮೀ. ವ್ಯಾಪ್ತಿಯಲ್ಲಿ, ಬೆಳಗಾವಿ, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು ಮಹಾನಗರ ಪಾಲಿಕೆಗಳಲ್ಲಿ 10 ಕಿ.ಮೀ., ಎಲ್ಲಾ ನಗರಸಭೆಗಳಲ್ಲಿ 5 ಕಿ.ಮೀ., ಪುರಸಭೆಗಳಲ್ಲಿ 10 ಕಿ.ಮೀ., ಮತ್ತು ಪಟ್ಟಣ ಪಂಚಾಯಿತಿಗಳ 3 ಕಿ.ಮೀ. ವ್ಯಾಪ್ತಿಯಲ್ಲಿ 30X40 ಅಡಿ (1200 ಚದರ ಅಡಿ) ವಿಸ್ತೀರ್ಣ ದವರೆಗಿನ ವಾಸದ ಮನೆಗಳನ್ನೂ ಸಕ್ರಮಗೊಳಿಸುವ  ‘ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆ-2017’ಕ್ಕೆ ಅಂಗೀಕಾರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.