ADVERTISEMENT

ಕೆಆರ್‌ಎಸ್‌ಗೆ 7 ಅಡಿ ನೀರು

ಮಳೆ: ಹಾರಂಗಿ, ಕಬಿನಿ ಒಳಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 22:30 IST
Last Updated 30 ಜೂನ್ 2016, 22:30 IST
ಕೆಆರ್‌ಎಸ್‌ಗೆ 7 ಅಡಿ ನೀರು
ಕೆಆರ್‌ಎಸ್‌ಗೆ 7 ಅಡಿ ನೀರು   

ಬೆಂಗಳೂರು: ರಾಜ್ಯದ ವಿವಿಧೆಡೆ ಗುರುವಾರ ಜಿಟಿಜಿಟಿ ಮಳೆ ಮುಂದುವರಿಯಿತು. ಕಾವೇರಿ ಕಣಿವೆಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾರಂಗಿ, ಕಬಿನಿ, ಕೆಆರ್‌ಎಸ್‌ ಜಲಾಶಯಗಳ ಒಳಹರಿವು ಹೆಚ್ಚಾಗಿದ್ದು, ಕೊಡಗು ಜಿಲ್ಲೆಯ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದೆ.

ಒಂದೇ ದಿನದಲ್ಲಿ ಕೆಆರ್ಎಸ್‌ಗೆ 7 ಅಡಿ ಮತ್ತು ಕಬಿನಿಗೆ 6 ಅಡಿ ನೀರು ಬಂದಿದೆ. ಕೆಆರ್‌ಎಸ್‌ ಒಳಹರಿವು 22,935 ಮತ್ತು ಕಬಿನಿ ಒಳಹರಿವು 16,500 ಕ್ಯುಸೆಕ್‌ ಇತ್ತು. ಹಾರಂಗಿಯಲ್ಲಿ 7 ಅಡಿ ಮತ್ತು ಹೇಮಾತಿ ಜಲಾಶಯದಲ್ಲಿ 4 ಅಡಿ ನೀರು ಹೆಚ್ಚಳವಾಗಿದೆ.

ರಂಗಸಮುದ್ರ ಬಳಿಯ ಚಿಕ್ಕ ಜಲಾಶಯವಾದ ಚಿಕ್ಲಿಹೊಳೆಯು ಗುರುವಾರ ಭರ್ತಿಯಾಗಿದೆ. 72.6 ಮೀಟರ್ ಎತ್ತರ ಹೊಂದಿರುವ ಅಣೆಕಟ್ಟೆಯಲ್ಲಿ 0.18 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಹೆಚ್ಚುವರಿ ನೀರು ಜಲಾಶಯದ ಅರ್ಧ ಚಂದ್ರಾಕೃತಿಯ ತಡೆಗೋಡೆ  ಮೇಲಿಂದ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿದೆ.

ಕೊಡಗಿನಲ್ಲಿ ವರುಣನ ಅಬ್ಬರ ಗುರುವಾರ ಕೊಂಚ ತಗ್ಗಿದೆ. ಆದರೆ, ಗಾಳಿ ಆರ್ಭಟ ಜೋರಾಗಿದ್ದು ಅಲ್ಲಲ್ಲಿ ಮರಗಳು ಉರುಳಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಚೆಟ್ಟಳ್ಳಿ– ಮಡಿಕೇರಿ ರಸ್ತೆಯಲ್ಲಿ ಮರ ಬಿದ್ದು ಮೂರು ಗಂಟೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಮಡಿಕೇರಿಯಲ್ಲಿ ಮಧ್ಯಾಹ್ನ ಸಾಧಾರಣ ಮಳೆ ಸುರಿಯಿತು.

ಭಾಗಮಂಡಲ, ನಾಪೋಕ್ಲು, ತಲಕಾವೇರಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಭಾಗಮಂಡಲ– ಅಯ್ಯಂಗೇರಿ ರಸ್ತೆ ಸಂಚಾರ ಮತ್ತೆ ಆರಂಭಗೊಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ. ಮಳೆಯಿಂದಾಗಿ ಎರಡು ದಿನ ರಜೆ ಘೋಷಿಸಲಾಗಿತ್ತು. ಶುಕ್ರವಾರದಿಂದ ಶಾಲೆ– ಕಾಲೇಜುಗಳು ಎಂದಿನಂತೆ ನಡೆಯಲಿವೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯಲ್ಲಿ ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟೆ ಮೇಲೆ ನೀರು ಭೋರ್ಗರೆದು ಧುಮ್ಮಿಕ್ಕುತ್ತಿದೆ. ಹಾಸನ, ಮಂಡ್ಯ ಜಿಲ್ಲೆಯಲ್ಲಿ ಗುರುವಾರ ತುಂತುರು ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.